
ಆನೇಕಲ್: ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ₹91.93 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಬಿ.ಶಿವಣ್ಣ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಅಮೃತ್ ಯೋಜನೆಯಡಿ ಪುರಸಭೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗಿರುವ ಈ ಯೋಜನೆಯಡಿ ಹೊಸ ಮಾಧ್ಯಮಿಕ ಶಾಲಾ ಮೈದಾನ, ಆಶ್ರಯ ಬಡಾವಣೆ ಮತ್ತು ಸಂತೆ ಮೈದಾನದಲ್ಲಿ ತಲಾ 15 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್, ಚಿಕ್ಕಕೆರೆ ಆಟದ ಮೈದಾನದಲ್ಲಿ 15 ಲಕ್ಷ ಲೀಟರ್ ಸಾಮರ್ಥ್ಯದ ಜಲಸಂಗ್ರಹಗಾರ, ಚಿಕ್ಕಕೆರೆ ಪಂಪ್ ಹೌಸ್‌ನಲ್ಲಿ 2 ಲಕ್ಷ ಲೀಟರ್ ಸಾಮರ್ಥ್ಯದ ಸಂಗ್ರಹಣಾ ಘಟಕ ಮತ್ತು ಪಟ್ಟಣದಲ್ಲಿ 75 ಕಿ.ಮೀ. ಉದ್ದದ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ಶಾಸಕ ಬಿ.ಶಿವಣ್ಣ ಮಾತನಾಡಿ, ತಾಲ್ಲೂಕಿಗೆ ಯಾವುದೇ ಶಾಶ್ವತ ಜಲಮೂಲಗಳಿಲ್ಲ. ಬಹುತೇಕ ವಾರ್ಡ್‌ಗಳು ಅಂತರ್ಜಲ ಅವಲಂಬಿಸಿವೆ. 75 ಕಿ.ಮೀ. ಪೈಪ್‌ಲೈನ್ ಕಾಮಗಾರಿಯಿಂದ ಶೇ 95ರಷ್ಟು ವಾರ್ಡ್‌ಗಳಿಗೆ ನೀರು ಪೂರೈಸಲು ಅನುಕೂಲವಾಗಲಿದೆ. 2-3 ದಿನಗಳಿಗೊಮ್ಮೆ ನೀರು ಪೂರೈಸಬಹುದಾಗಿದೆ. ಆಶ್ರಯ ಬಡಾವಣೆಯಲ್ಲಿ ನಿರ್ಮಾಣವಾಗುವ 15 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್‌ನಿಂದ ಅಲ್ಲಿನ ನಿವಾಸಿಗಳ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.
ಪುರಸಭಾ ಮಾಜಿ ಅಧ್ಯಕ್ಷ ಎನ್.ಎಸ್.ಪದ್ಮನಾಭ ಮಾತನಾಡಿ, 2022ರಲ್ಲಿ ಸಂಸದರಾಗಿದ್ದ ಡಿ.ಕೆ.ಸುರೇಶ್ ಮತ್ತು ಶಾಸಕ ಬಿ.ಶಿವಣ್ಣ ಅವರ ಪ್ರಯತ್ನದಿಂದ ಯೋಜನೆ ಮಂಜೂರಾಗಿತ್ತು. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಯೋಜನೆ ಈಗ ವೇಗ ಪಡೆದುಕೊಂಡಿದೆ. ಮುಂದಿನ ಒಂದು ವರ್ಷದೊಳಗೆ ನೀರಿನ ಸಮಸ್ಯೆ ಸಂಪೂರ್ಣ ಪರಿಹಾರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಹಾಗಡೆ ಹರೀಶ್ ಗೌಡ, ಟೌನ್ ಕಾಂಗ್ರೆಸ್ ಅಧ್ಯಕ್ಷ ಜಿ.ಗೋಪಾಲ್, ಪುರಸಭಾ ಮುಖ್ಯಾಧಿಕಾರಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.