
ಹೊಸಕೋಟೆ: ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಜಾರಿಗೆ ತಂದಿದ್ದ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾವಣೆ ಮಾಡುವ ಮೂಲಕ ಮನರೇಗಾ ಯೋಜನೆಯನ್ನು ಕಗ್ಗೊಲೆ ಮಾಡಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲ್ಲೂಕಿನ ಅನಗೊಂಡನಹಳ್ಳಿ ಹೋಬಳಿಯ ಮುತ್ಕೂರು ಗ್ರಾಮದಲ್ಲಿ ನರೇಗಾ ಕಾಮಗಾರಿ ವೀಕ್ಷಣೆಗೆ ಆಗಮಿಸಿದ ಎಐಸಿಸಿ ರಾಜ್ಯ ಉಸ್ತುವಾರಿ ಅಭಿಷೇಕ್ ದತ್ತ ಅವರಿಗೆ ಮಾಹಿತಿ ನೀಡಿ ಬಳಿಕ ವಿಭಿ ಜಿ-ರಾಮ್ ಜಿ ಯೋಜನೆ ವಿರೋಧಿಸಿ ನಡೆದ ಸಭೆಯಲ್ಲಿ ಮಾತನಾಡಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ನರೇಗಾವನ್ನು ಉದ್ಯೋಗ ದಾನವಲ್ಲ, ಹಕ್ಕು ಎಂಬ ತತ್ವದ ಮೇಲೆ ಕಾಯ್ದೆ ರೂಪಿಸಿದ್ದರು. ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ಮಾನವ ದಿನಗಳ ಉದ್ಯೋಗ, ಮಹಿಳೆಯರಿಗೆ ಶೇ 60ಕ್ಕೂ ಹೆಚ್ಚು ಭಾಗವಹಿಸುವಿಕೆಯಿಂದ ನೇರವಾಗಿ ಕೂಲಿ ಹಣ ಕಾರ್ಮಿಕರ ಖಾತೆಗಳಿಗೆ ಜಮೆ ಆಗುತ್ತಿತ್ತು. ಅನಗೊಂಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 2024–25ರಲ್ಲಿ 5280 ಮಾನವ ದಿನಗಳ ಗುರಿ ನೀಡಲಾಗಿದ್ದು, 2025-26 ರಲ್ಲಿ 12,431 ಮಾನವ ದಿನಗಳ ಗುರಿ ನಿಗದಿಯಾಗಿದೆ ಎಂದರು.
ಪ್ರಧಾನಿ ಮೋದಿಯವರು ನರೇಗಾ ಯೋಜನೆ ಕುರಿತು ಕಾಂಗ್ರೆಸ್ ದೇಶವನ್ನು ಅಭಿವೃದ್ಧಿಪಡಿಸಿದ್ದರೆ ಜನರಿಗೆ ಗುಂಡಿ ತೋಡುವ ಕೆಲಸ ಕೊಡುವ ಯೋಜನೆ ಏಕೆ ಬೇಕಾಗಿತ್ತು ಎಂದು ಪ್ರಶ್ನಿಸಿದ್ದರು. ಮನರೇಗಾ ಕಾಂಗ್ರೆಸ್ ಸರ್ಕಾರದ ವೈಫಲ್ಯದ ಸ್ಮಾರಕವಾಗಿದ್ದು ಈ ಯೋಜನೆ ರದ್ದುಮಾಡುವುದಿಲ್ಲ. ಅದು ಕಾಂಗ್ರೆಸ್ ಆಡಳಿತದ ದೌರ್ಬಲ್ಯಗಳ ನೆನೆಪಿಗಾಗಿ ಉಳಿಯಬೇಕು ಎಂದಿದ್ದರು. ಆದರೆ ಈಗ ಹೆಸರು ಬದಲಾವಣೆ ಮಾಡಿ ಗ್ರಾಮಸಭೆಗಳ ಅಧಿಕಾರ ಕಡಿತಗೊಳಿಸಿ, ದೆಹಲಿ ಮಟ್ಟದಲ್ಲಿ ಯೋಜನೆಗಳನ್ನು ನಿರ್ಧರಿಸುತ್ತಿದೆ. ರಾಜ್ಯಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಹಾಕುತ್ತಿದೆ. ಆದ್ದರಿಂದ ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ ಹೋರಾಟ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದರು.
ಎಐಸಿಸಿ ಕರ್ನಾಟಕ ಉಸ್ತುವಾರಿ ಅಭಿಷೇಕ್ ದತ್ತ ಮಾತನಾಡಿ, ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಮನರೇಗಾ ಯೋಜನೆ ಜಾರಿಗೆ ತಂದಿತ್ತು. ಅದರೆ ಈಗ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಯೋಜನೆ ಹೆಸರು ಬದಲಾವಣೆ ಮಾಡುವ ಮೂಲಕ ಒಡೆದು ಆಳುವ ನೀತಿ ಅನುಸರಿಸಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದರು.
ಕೇಂದ್ರ ಸರ್ಕಾರದ ಈ ನಡೆ ವಿರೋಧಿಸಿ ಜ. 28ರಂದು ರಾಜಭವನ ಮುತ್ತಿಗೆ ಕಾರ್ಯಕ್ರಮವನ್ನು ಕಾಂಗ್ರೆಸ್ ಹಮ್ಮಿಕೊಂಡಿದ್ದು ಕಾರ್ಯಕರ್ತರು ಬೆಂಬಲ ನೀಡಬೇಕು ಎಂದರು.
ಗ್ರಾ.ಪಂ ಅಧ್ಯಕ್ಷ ಸಂತೋಷ್, ಮುಖಂಡ ಬಿಎಂ.ಪ್ರಕಾಶ್, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಎಚ್.ಎಂ.ಸುಬ್ಬರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.