
ಮುಗಬಾಳ(ಹೊಸಕೋಟೆ): ಧಾರ್ಮಿಕ ಆಚರಣೆಗಳನ್ನು ಮೂಢ ನಂಭಿಕೆಯಾಗಿಸಿ, ದೇವ ಮಂದಿರಗಳನ್ನು ಮತಾಂಧ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಹೀಗಾಗಿ ನಗರ, ಪಟ್ಟಣಗಳು ಹೆಮ್ಮಾರವಾಗಿ ಬೆಳೆಯುತ್ತಿದ್ದರೂ ಮನುಷ್ಯನ ಮನಸ್ಸು ಮಾತ್ರ ಅಶಾಂತಿಯಿಂದ ಕೂಡಿದೆ ಎಂದು ತುಮಕೂರಿನ ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮುಗಬಾಳ ಗ್ರಾಮದ ವೀರಭದ್ರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಬುಧವಾರ ಸೋಮೇಶ್ವರ ಸಭಾ ಭವನ, ಅತಿಥಿ ಕೊಠಡಿ, ವಿಸ್ತೃತ ದಾಸೋಹ ಭವನ, ನೂತನ ತೇರು ಹಾಗೂ ತೇರಿನ ಮನೆ ಉದ್ಘಾಟಿಸಿ ಮಾತನಾಡಿದರು.
ಭಕ್ತಿ ಮತ್ತು ಸೇವೆ ಎರಡೂ ಜೊತೆ ಇದ್ದಾಗ ಮಾತ್ರ ಅದಕ್ಕೆ ಅರ್ಥ ಇರುತ್ತದೆ ಎಂದರು.
‘ದೇಶದಲ್ಲಿ ಅನಾದಿಕಾಲದಿಂದಲೂ ದೇವ ಮಂದಿರ, ಗುಡಿ ಗುಂಡಾರ ಇಲ್ಲದಿದ್ದರೆ ಅದೆಷ್ಟು ಸಂಖ್ಯೆಯಲ್ಲಿ ಮಾನಸಿಕ ಕಿನ್ನತೆ ಕೇಂದ್ರಗಳು ಇರಬೇಕಿತ್ತೋ?, ಇಂದಿಗೂ ನಮ್ಮ ನೆಲೆದಲ್ಲಿ ಸನಾತನಿಗಳು ತಮ್ಮ ಭವದ ಜಂಜಡ, ಮನಸ್ಸಿನ ದುಮ್ಮಾನಗಳನ್ನು ಇಲ್ಲವಾಗಿಸಿಕೊಳ್ಳಲು ಗುಡಿ ಗುಂಡಾರವನ್ನು ಅರಸುತ್ತಾ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದು ನಮ್ಮ ಸನಾತನ ಪರಂಪರೆಯ ಹೆಗ್ಗಳಿಕೆ’ ಎಂದು ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೋಮಶೇಖರ್, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಯಾವ ವರ್ಣದಲ್ಲಿ ಜನಿಸಿದರೂ ಸರಿಯೇ ತಾನೊಂದು ಮನುಜ ಕುಲದಲ್ಲಿ ಹುಟ್ಟಿರುವುದು ಎಂಬುದನ್ನು ಮರೆಯಾಬರದು. ಕಾಗೆ ಇಡೀ ತನ್ನ ಬಳಗವನ್ನು ಕರೆದು ಅನ್ನ ತಿನ್ನುತ್ತದೆ. ಅದಕ್ಕಿಂತ ಮನುಷ್ಯ ಕಡೆಯಾದನೇ ಎಂದರು.
ಸ್ವಾಮೀಜಿಗಳು ಸ್ಥಾವರಕ್ಕೆ ಅಂಟಿಕೊಳ್ಳದೆ ಜನರ ನಡುವೆ ಇದ್ದು, ಅವರ ಕಷ್ಟ ಸುಖಗಳಿಗೆ ಸ್ಪಂದಿಸಬೇಕು ಎಂದರು.
ಬೆಳ್ಳಾವಿಯ ಬೆಳ್ಳನಪುರಿ ವೀರ ಸಿಂಹಾಸನ ಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ, ನಾಗಲಾಪುರದ ನಾಗಲಾಪುರ ವೀರ ಸಿಂಹಾಸನ ಮಠ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ, ಮುಗಬಾಳ ಗ್ರಾ.ಪಂ.ಅಧ್ಯಕ್ಷೆ ಕಸ್ತೂರಿ ನಂಜಪ್ಪ, ಸದಸ್ಯರಾದ ಶೋಭಾ, ವೀರ ಶೈವ ನಗರ್ಥ ಪ್ರಕಾಶ್, ಪ್ರತಿಭಾ, ಕೋಡಿಹಳ್ಳಿ ಸುರೇಶ್ ಇದ್ದರು.
ಮನುಷ್ಯ ಕೈ ಮೈ ತುಂಬಾ ಬಂಗಾರ ಹಾಕಿಕೊಂಡರೆ ಸಮಾಜದಲ್ಲಿ ಏನನ್ನೋ ಸಾಧಿಸಿದ್ದಾನೆ ಎಂದಲ್ಲ. ಹಸಿದ ಬಡ ಜೀವಗಳಿಗೆ ಅನ್ನ ದಾಸೋಹ ಮಾಡಬೇಕು. ಆತ ಸತ್ತ ನಂತರವು ಈ ಜಡ ದೇಹದ ಹೆಸರು ಚಿರಸ್ಥಾಯಿ ಆಗುತ್ತದೆ.ತೇಜೇಶಲಿಂಗ ಶಿವಾಚಾರ್ಯ ಸ್ವಾಮಿ ಪೀಠಾಧಿಪತಿ ನಾಗಲಾಪುರ ವೀರ ಸಿಂಹಾಸನ ಮಠ
ಧರ್ಮದ ಅರ್ಥ ಬದಲಾಗಲಿ ದೇವಸ್ಥಾನಗಳು ಮನಸ್ಸಿನ ಸಾಂಸ್ಕೃತಿಕ ಕೇಂದ್ರವಾಗಬೇಕಿದೆ. ಧರ್ಮ ಎಂದರೆ ಕೋಮು ಬಿತ್ತುವುದಲ್ಲ. ಒಬ್ಬರಿಗೊಬ್ಬರು ಶಾಂತಿ ನೆಮ್ಮದಿಯಿಂದ ಸಹಭಾಳ್ವೆ ನಡೆಸುವಂತಹ ವಾತಾವರಣ ನಿರ್ಮಿಸುವುದು ಎನ್ನುವ ಅರ್ಥ ಬರಬೇಕಿದೆ ಎಂದು ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್ ಹೇಳಿದರು. ಶರಣರ ಚಿಂತನೆಯಿಂದ ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯವಾಗಿದೆ. ಸಂಸ್ಕೃತಿಬೇಕೆ ಹೊರತು ವಿಕೃತ ಮನಸ್ಥಿತಿಗಳ ಸಂಸ್ಕೃತಿ ಅಲ್ಲ. ಶರಣರು ಧರ್ಮ ಎಂದರೆ ‘ಕಾಯಕ’ ಎಂದು ಅಂದು ಅರ್ಥ ಮಾಡಿಕೊಂಡಿದ್ದರಿಂದಲೇ ವೈಜ್ಞಾನಿಕ ಸಾಹಿತ್ಯದ ಮೇರು ಪರ್ವತವನ್ನೇ ಸೃಷ್ಟಿಸಲು ಸಾದ್ಯವಾಯಿತು ಎಂದರು. ವಾಟ್ಸ್‌ಆಪ್‌ನಲ್ಲೇ ದೇವಸ್ಥಾನ ಜೋತಿಷಿಗಳು ಕಾಣುವ ದುಸ್ಥಿತಿ ಬಂದಿರುವುದರಿಂದಲೇ ಮನುಷ್ಯನು ಮನುಷ್ಯತ್ವ ಕಳೆದುಕೊಳ್ಳುತ್ತಿದ್ದಾನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.