ADVERTISEMENT

ನಾವು ಕಟ್ಟಿದ ಹುತ್ತಕ್ಕೆ ನಾಗರಾಜ ಬಂದಿದೆ – ಶರತ್ ಬಚ್ಚೇಗೌಡ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 13:48 IST
Last Updated 22 ನವೆಂಬರ್ 2019, 13:48 IST
ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ವಿವಿದ ಹಳ್ಳಿಗಳಲ್ಲಿ ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೇಗೌಡ ಪ್ರಚಾರ ನಡೆಸಿದರು
ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ವಿವಿದ ಹಳ್ಳಿಗಳಲ್ಲಿ ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೇಗೌಡ ಪ್ರಚಾರ ನಡೆಸಿದರು   

ಹೊಸಕೋಟೆ: ‘ತಾಲ್ಲೂಕಿನಲ್ಲಿ 3 ಸಾವಿರ ಮತಗಳಿದ್ದ ಬಿಜೆಪಿಗೆ 98 ಸಾವಿರ ಮತ ಬರುವಂತೆ ಮಾಡಿ, ತಾಲ್ಲೂಕಿನಲ್ಲಿ ಕೇಸುಗಳನ್ನು ಹಾಕಿಸಿಕೊಂಡು, ನೋವನ್ನು ಅನುಭವಿಸಿದ ನಾವು ಪಕ್ಷ ಕಟ್ಟಿದೆವು. ಹುಳ ಕಟ್ಟಿದ ಹುತ್ತಕ್ಕೆ ಹಾವು ಬರುವಂತೆ ಪಕ್ಷಕ್ಕೆ ನಾಗರಹಾವಿನಂತೆ ಬಂದ ನಾಗರಾಜ್ ನಮಗೇ ಜಾಗವಿಲ್ಲದಂತೆ ಮಾಡಿದ್ದಾರೆ’ ಎಂದು ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೇಗೌಡ ವ್ಯಂಗ್ಯವಾಡಿದರು.

ಇಲ್ಲಿನ ನಂದಗುಡಿ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಪ್ರಚಾರ ಸಭೆ ನಡೆಸಿ ಅವರು ಮಾತನಾಡಿದರು.

‘ನಾವು ಕಳೆದ ಮೂರು ತಲೆಮಾರಿನಿಂದ ರಾಜಕೀಯ ಮಾಡಿಕೊಂಡು ಬರುತ್ತಿದ್ದೇವೆ. ಜನರಿಗೆ ಅನ್ಯಾಯ ಮಾಡಬಾರದೆಂದು ನಮ್ಮನ್ನು ನಂಬಿದವರ ಸೇವೆ ಮಾಡಬೇಕೆಂದು ಕಾರ್ಯಕರ್ತರ ಜೊತೆ ಚರ್ಚಿಸಿ ಸ್ವತಂತ್ರ ಅಭ್ಯಥಿಯಾಗಿ ಕಣಕ್ಕೆ ಇಳಿದಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ತಂದೆ ಬಚ್ಚೇಗೌಡರು ಸಂಸತ್ತಿನ ಅಧಿವೇಶನ ಇರುವುದರಿಂದ ದೆಹಲಿಯಲ್ಲಿದ್ದು ಅವರು ಪ್ರಚಾರಕ್ಕೆ ಬರುವುದಿಲ್ಲ. ನನಗೆ ಈಗ ಕ್ಷೇತ್ರದಲ್ಲಿ ಸಿಗುತ್ತಿರುವ ಬೆಂಬಲ ಬಚ್ಚೇಗೌಡರು ಕಟ್ಟಿರುವ ಜನರ ಆಶೀರ್ವಾದ’ ಎಂದರು.

‘ಬಚ್ಚೇಗೌಡರು ಯಾವುದೇ ಪಕ್ಷವಿರೋದಿ ಕೆಲಸ ಮಾಡಿಲ್ಲ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೆಲ ರಾಜ್ಯ ನಾಯಕರುಏಕೆ ಶಿಫಾರಸ್ಸು ಮಾಡಿದ್ದಾರೋ ಗೊತ್ತಿಲ್ಲ. ತಾಲ್ಲೂಕಿನಲ್ಲಿ ಕುಕ್ಕರ್ ಯಾರು ಹಂಚಿದರೋ. ಆದರೆ ನನಗೆ ಕುಕ್ಕರ್ ಚಿನ್ಹೆ ಬಂದಿರುವುದು ಸಂತೋಷ’‍ ಎಂದರು.

ಮಾಜಿ ತಾಲ್ಲೂಕು ಪಂಚಾಯತಿ ಅಧ್ಯಕ್ಷ ರಾಜಶೇಖರ್, ಗೋಪಾಲಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.