ADVERTISEMENT

ವಿಜಯಪುರ: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಜಾಗೃತಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 13:27 IST
Last Updated 6 ಜನವರಿ 2020, 13:27 IST
ವಿಜಯಪುರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ 2020 ಕಾರ್ಯಕ್ರಮದಡಿ ಜಾಗೃತಿ ಮೂಡಿಸಲು ಮೆರವಣಿಗೆಗೆ ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್ ಚಾಲನೆ ನೀಡಿದರು
ವಿಜಯಪುರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ 2020 ಕಾರ್ಯಕ್ರಮದಡಿ ಜಾಗೃತಿ ಮೂಡಿಸಲು ಮೆರವಣಿಗೆಗೆ ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್ ಚಾಲನೆ ನೀಡಿದರು   

ವಿಜಯಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಯುವಜನರು ಸಕ್ರೀಯವಾಗಿ ಮತದಾನ ಪ್ರಕ್ರಿಯೆಲ್ಲಿ ಭಾಗವಹಿಸಬೇಕು ಎಂದು ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್‌ಕುಮಾರ್ ಹೇಳಿದರು.

ಇಲ್ಲಿನ ಪುರಸಭಾ ಆವರಣದಿಂದ ಹಮ್ಮಿಕೊಂಡಿದ್ದ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2020 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಮತದಾನ ಮಾಡಲಿಕ್ಕೆ ಅರ್ಹರಿರುತ್ತಾರೆ. ಮತದಾರರು ಪಟ್ಟಿಯಲ್ಲಿ ಹೆಸರು ಪರಿಶೀಲಿಸಿ ಇಲ್ಲದಿದ್ದರೆ, ಸೇರ್ಪಡೆ ಮಾಡಿಕೊಳ್ಳಬೇಕು. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರಿರುವವರೂ ಪಟ್ಟಿಯಲ್ಲಿ ಹೆಸರಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ಏನಾದರೂ ಲೋಪದೋಗಳಿದ್ದರೆ ತಕ್ಷಣ ಅರ್ಜಿ ಸಲ್ಲಿಸಬೇಕು ಎಂದರು.

ADVERTISEMENT

18 ವರ್ಷ ವಯಸ್ಸಿನ ಯುವಮತದಾರರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿಕೊಳ್ಳಲಿಕ್ಕೆ ಅವಕಾಶವಿದೆ. ಸೇರ್ಪಡೆ, ತೆಗೆದುಹಾಕುವಿಕೆ, ಪರಿಶೀಲನೆ ಮತ್ತು ದೃಢೀಕರಣ, ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮಾಡಿಸಲು, ಮತದಾರರು, ನಿಗದಿಪಡಿಸಿದ ದಾಖಲೆ ಸಲ್ಲಿಸಬಹುದು. ಚುನಾವಣಾ ಆಯೋಗದಿಂದ ಅನುಮೋದಿಸಿರುವ ಯಾವುದೇ ದಾಖಲೆಗಳನ್ನೂ ಸಲ್ಲಿಸಬಹುದು ಎಂದರು.

ಯುವ ಮತದಾರರು ಸಮೀಪವಿರುವ ಸಾಮಾನ್ಯ ಸೇವಾ ಕೇಂದ್ರ, ಮತದಾರ ನೋಂದಣಿ ಅಧಿಕಾರಿಗಳ ಕಚೇರಿಯ ಮತದಾರರ ಪೂರಕ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್, ಅಟಲ್‌ಜೀ ಜನಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ( ಗ್ರಾಮ ಪಂಚಾಯಿತಿ), ಮತಗಟ್ಟೆ ಅಧಿಕಾರಿ ಇಲ್ಲಿ ನೋಂದಾಯಿಸಿಕೊಳ್ಳಬಹುದು ಎಂದರು.

ಶಾಲಾ ಮಕ್ಕಳು ಇಲ್ಲಿನ ಪ್ರಮುಖ ಬೀದಿಗಳಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಮತದಾರರ ಪಟ್ಟಿಗೆ ಘೋಷಣೆ ಕೂಗುತ್ತ ಮೆರವಣಿಗೆ ನಡೆಸಿದರು. ಅಂಗನವಾಡಿ ಕಾರ್ಯಕರ್ತೆಯರು, ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಪುರಸಭಾ ವ್ಯವಸ್ಥಾಪಕ ಆಂಜನೇಯುಲು, ಎಂಜಿನಿಯರ್ ಗಂಗಾಧರ್, ಕಂದಾಯ ನಿರೀಕ್ಷಕ ಜಯಕಿರಣ್, ಸಿಬ್ಬಂದಿ ಮಂಜುನಾಥ್, ಲಕ್ಷ್ಮೀನಾರಾಯಣ, ಅಜ್ಮತ್, ಗೋಪಾಲ್, ಶಿಕ್ಷಕ ಮುನಿಯಪ್ಪ, ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ರವಿಕುಮಾರ್, ಸಾಗರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.