ತೂಬಗೆರೆ (ದೊಡ್ಡಬಳ್ಳಾಪುರ): ತೂಬಗೆರೆ ಭಾಗದ ಎಂಟು ಹಲಸಿನ ತಳಿಗಳಿಗೆ ರಾಷ್ಟ್ರಮಟ್ಟದಲ್ಲಿ ಹಕ್ಕು ಸ್ವಾಮ್ಯ(ಪೇಟೆಂಟ್) ನೀಡಲಾಗಿದೆ.
ತಾಲ್ಲೂಕಿನ ತೂಬಗೆರೆಯಲ್ಲಿ ಬುಧವಾರ ನಡೆದ ಹಲಸು ಬೆಳೆ ಕುರಿತು ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಹಲಸು ತಳಿಗಳ ಹಕ್ಕು ಸ್ವಾಮ್ಯ ಪ್ರಮಾಣ ಪತ್ರವನ್ನು ತೂಬಗೆರೆ ಭಾಗದ ವಿವಿಧ ಹಳ್ಳಿಗಳ ಎಂಟು ರೈತರಿಗೆ ವಿತರಿಸಲಾಯಿತು.
ಎಂಟು ತಳಿಗಳಿಗೆ ‘ಎನ್‌ಆರ್-1’ ಎಂದು ಗುರುತು ನೀಡಲಾಗಿದ್ದು, ರೈತರು ತಮ್ಮ ಇಷ್ಟ ಬಂದ ಹೆಸರು ನಾಮಕರಣ ಮಾಡಿ ಮಾರಾಟ ಮಾಡಬಹುದಾಗಿದೆ.
ಪಿಪಿಎಫ್‌ಆರ್‌ಎ ಪೇಟೆಂಟ್ ಪಡೆದ ಹಲಸು ಬೆಳೆಗಾರ ಕೃಷ್ಣಪ್ಪ ಮಾತಾನಾಡಿ, ‘ನಮ್ಮ ಹೊಲದ ಹಲಸಿನ ಹಣ್ಣಿಗೆ ರಾಷ್ಟ್ರ ಮಟ್ಟದ ಮಾನ್ಯತೆ ದೊರೆತಿರುವುದು ಸಂತಸ ತಂದಿದೆ. ಮುಂದಿನ 20 ವರ್ಷ ಈ ಹಣ್ಣಿನ ತಳಿಯನ್ನು ರೈತರ ಅನುಮತಿ ಇಲ್ಲದೆ ಬೇರೆ ಯಾರೂ ಬೆಳೆಸಲು ಅವಕಾಶ ಇಲ್ಲ. ಹಣ್ಣಿನ ಮಾಲೀಕರು ಅನುಮತಿ ನೀಡಿದರೆ ಮಾತ್ರ ಸಸಿಗಳನ್ನು ಬೆಳೆಸಿ, ಮಾರಾಟ ಮಾಡಲು ಅವಕಾಶವಿದೆ ಎಂದು ತಿಳಿಸಿದರು.
ಬೆಂಗಳೂರು ಗಾಂಧಿ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ನಾರಾಯಣಗೌಡ ಮಾತನಾಡಿ, ಕೃಷಿ ವಿಶ್ವವಿದ್ಯಾಲಯವು ಸ್ಥಳೀಯವಾಗಿ ಹಲಸಿನ ಹಣ್ಣು ಮೌಲ್ಯವರ್ಧನೆ, ಉತ್ಪನ್ನಗಳ ಕುರಿತ ಅರಿವು ಮೂಡಿಸುತ್ತಿದೆ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಅಂಶಗಳಾದ ಖನಿಜಾಂಶ, ಕಾರ್ಬೋಹೈಡ್ರೇಟ್, ಎಲೆಕ್ಟ್ರೋಲೈಟ್, ಪೊಟಾಷ್ಯಿಯಂ ಹಾಗೂ ನಾರಿನಾಂಶಗಳು ಯಥೇಚ್ಛವಾಗಿ ದೊರೆಯಲಿವೆ. ಹಲಸು ಆರೋಗ್ಯಕಾರಿ ಹಣ್ಣಾಗಿದ್ದು ಈಗ ಪೇಟೆಂಟ್ ಪಡೆದ ರೈತರು ತಮ್ಮ ತಳಿಗಳನ್ನು ಜವಾಬ್ದಾರಿಯಿಂದ ಸಂರಕ್ಷಿಸಬೇಕು ಎಂದು ಸಲಹೆ ನೀಡಿದರು.
ತೂಬಗೆರೆ ಹಲಸು ಬೆಳೆಗಾರರ ಸಂಘ, ಜಿಲ್ಲಾ ತೋಟಗಾರಿಕೆ ಇಲಾಖೆ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ ಕೇಂದ್ರ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ‘ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ’ ದಿಂದ ತೂಬಗೆರೆ ಸುತ್ತಮುತ್ತಲಿನ ಎಂಟು ಹಲಸು ತಳಿಗಳಿಗೆ, ಹಲಸಿನ ಹಣ್ಣಿನಲ್ಲೇ ಉತ್ಕೃಷ್ಟ ಎಂದು ಗುರುತಿಸಿರುವ ತಳಿಗಳಲ್ಲಿನ ವಿಶೇಷತೆಯನ್ನು ವೈಜ್ಞಾನಿಕವಾಗಿ ಸಾಭೀತು ಮಾಡುವ ಮೂಲಕ ಹಲಸಿನ ತಳಿಗಳಿಗೆ ಹಕ್ಕು ಸ್ವಾಮ್ಯ ದೊರಕಿಸಿಕೊಡಲು ಶ್ರಮಿಸಿದ್ದಾರೆ. ಇದರಿಂದ ದೇಶಿಯ ಹಾಗೂ ಜಾಗತಿಕ ಮಟ್ಟದಲ್ಲಿ ಈ ಭಾಗದಲ್ಲಿ ಬೆಳೆಯುವ ಹಲಸಿನ ರುಚಿ, ಪರಿಮಳದ ಮಹತ್ವ ಗುರುತಿಸುವಂತಾಗಲಿದೆ ಎಂದರು.
ಹಲಸಿನ ಸಾಗುವಳಿ ಮತ್ತು ಮಾರುಕಟ್ಟೆ, ಹಲಸಿನ ಮೌಲ್ಯವರ್ಧಿತ ಪದಾರ್ಥಗಳು ಮತ್ತು ಹಲಸಿನ ಹಣ್ಣು ಕೊಯುವ ಯಂತ್ರದ ಕುರಿತು ಜಿಕೆವಿಕೆ ವಿಜ್ಞಾನಿ ಡಾ.ಶಾಮಲ ಮಾಹಿತಿ ನೀಡಿದರು. ಹಲಸಿನ ಹಣ್ಣಿನಿಂದ ತಯಾರಿಸಿದ ಹಪ್ಪಳ, ಚಿಪ್ಸ್ ಇತರೆ ಉತ್ಪನ್ನಗಳ ಪ್ರದರ್ಶನ ಸಹ ನೆಡೆಯಿತು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಮೆಳೆಕೋಟೆ ಕ್ರಾಸ್ ನಲ್ಲಿರುವ ಎಸ್.ಜೆ.ಸಿ.ಆರ್ ಶಾಲೆಯ ರಂಜಿತಾ ಎ.ಸಿ ರವರಿಗೆ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಜಿಕೆವಿಕೆ ವಿಜ್ಞಾನಿ ಡಾ.ಹನುಮಂತರಾಯ, ಡಾ.ಬಾಬುರೈ,ಡಾ.ಸವಿತಾ, ರಾಜ್ಯ ತೆಂಗು ನಾರು ಮಂಡಳಿ ಅಧ್ಯಕ್ಷ ವೆಂಕಟೇಶ್‌ಬಾಬು, ತೂಬಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿಲಕ್ಷ್ಮಮ್ಮರಾಮಕೃಷ್ಣ, ಸದಸ್ಯ ಕೃಷ್ಣಪ್ಪ, ನಾಗರಾಜುಅಪ್ಪಯ್ಯಣ್ಣ, ತೂಬಗೆರೆ ಹಲಸು ಬೆಳೆಗಾರರ ಸಂಘದ ಅಧ್ಯಕ್ಷ ಸುರೇಶ್, ವಕೀಲ ಪ್ರತಾಪ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ, ಮುಖಂಡರಾದ ವೆಂಕಟೇಶ್, ಕನಕದಾಸ, ರವಿಸಿದ್ದಪ್ಪ, ಉದಯ ಆರಾಧ್ಯ, ವಾಸು, ರಂಗಪ್ಪ, ಶ್ರೀಧರ ಇದ್ದರು.
ಹಲಸಿನಲ್ಲಿ ಔಷಧಿ ಗುಣ
ಹಲಸಿನ ಹಣ್ಣಿನ ಬಗ್ಗೆ ಕೆಲವು ವರ್ಷಗಳಿಂದ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ಹಲಸಿನ ಹಣ್ಣುಗಳಲ್ಲಿರುವ ಔಷಧೀಯ ಗುಣ ಹಲಸಿನ ಹಣ್ಣಿನ ವಿವಿಧ ಉತ್ಪನ್ನಗಳನ್ನು ತಯಾರಿಸುವ ಸಂಬಂಧ ಸಂಶೋಧನೆ ನಡೆಸುತ್ತಿದೆ ಎಂದು ಬೆಂಗಳೂರು ಗಾಂಧಿ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ನಾರಾಯಣಗೌಡ ಹೇಳಿದರು.
ಒಂದು ಟನ್ ವಹಿವಾಟು
ತೂಬಗೆರೆ ಸೇರಿದಂತೆ ತಾಲ್ಲೂಕಿನಲ್ಲಿ ವಾರ್ಷಿಕ 1 ಸಾವಿರ ಟನ್ ಹಲಸು ವಹಿವಾಟು ನಡೆಯುತ್ತಿದೆ. ಈ ಭಾಗದ ಯಾವುದೇ ರಸ್ತೆ ಬಿದಿಯಲ್ಲಿ ನೋಡಿದರೂ ಹಲಸಿನ ಹಣ್ಣುಗಳ ಮಾರಾಟ ಮಾಡುತ್ತಿರುವುದು ಕಾಣುತ್ತದೆ. ಬೆಂಗಳೂರು ಅಥವಾ ದೇವನಹಳ್ಳಿ ವಿಮಾನ ನಿಲ್ದಾಣ ಸಮೀಪ ಸುಸಜ್ಜಿತ ಹಲಸು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ತೂಬಗೆರೆ ಹಲಸು ಬೆಳೆಗಾರರ ಸಂಘದ ಕಾರ್ಯದರ್ಶಿ ರವಿಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.