ADVERTISEMENT

ದೊಡ್ಡಬಳ್ಳಾಪುರ: ಮೇಳೈಸಿದ ನವರಾತ್ರಿ ಹಬ್ಬದ ಬೊಂಬೆ ಸಡಗರ

ಒಂಬತ್ತು ದಿನಗಳ ಕಾಲ ಸಂಭ್ರಮ l ಗೊಂಬೆ ನೋಡಲು ಮನೆಗಳಿಗೆ ಲಗ್ಗೆ ಇಟ್ಟ ಚಿಣ್ಣರು

ನಟರಾಜ ನಾಗಸಂದ್ರ
Published 18 ಅಕ್ಟೋಬರ್ 2020, 7:04 IST
Last Updated 18 ಅಕ್ಟೋಬರ್ 2020, 7:04 IST
ಡಾ.ಜಿ. ಶ್ರೀನಿವಾಸ ರಾಘವನ್‌ ಅವರ ಮನೆಯಲ್ಲಿ ಶನಿವಾರದಿಂದ ವಿವಿಧ ನಮೂನೆಯಲ್ಲಿ ಬೊಂಬೆಗಳನ್ನು ಕೂಡಿಸಿ ಪೂಜೆ ಆರಂಭಿಸಲಾಗಿದೆ
ಡಾ.ಜಿ. ಶ್ರೀನಿವಾಸ ರಾಘವನ್‌ ಅವರ ಮನೆಯಲ್ಲಿ ಶನಿವಾರದಿಂದ ವಿವಿಧ ನಮೂನೆಯಲ್ಲಿ ಬೊಂಬೆಗಳನ್ನು ಕೂಡಿಸಿ ಪೂಜೆ ಆರಂಭಿಸಲಾಗಿದೆ   

ದೊಡ್ಡಬಳ್ಳಾಪುರ:ನವರಾತ್ರಿ ಹಬ್ಬದ ಸಡಗರ ಆರಂಭವಾಗುತ್ತಿದ್ದಂತೆ ಒಂಬತ್ತು ದಿನಗಳ ಕಾಲ ಶಕ್ತಿದೇವತೆಗಳ ಆರಾಧನೆಯಷ್ಟೇ ವಿಜೃಂಭಣೆಯಿಂದ ಜನಪದ ಆಚರಣೆಗಳಲ್ಲಿ ಒಂದಾಗಿರುವ ಬೊಂಬೆಗಳನ್ನು ಕೂಡಿಸಿ, ಪ್ರತಿದಿನ ಸಂಜೆ ಪೂಜೆ ನಡೆಯುತ್ತದೆ. ಬೊಂಬೆಗಳನ್ನು ಕೂಡಿಸುವವರ ಮನೆಗಳಿಗೆ ಚಿಣ್ಣರು ಲಗ್ಗೆ ಇಟ್ಟು ಗೊಂಬೆಗಳನ್ನು ಕಣ್ತುಂಬಿಕೊಳ್ಳುತ್ತಾರೆ.‌

ಮನೆಗೆ ಬಂದ ಮಾನಿನಿಯರಿಗೆ ಬಾಗಿನ, ಬೊಂಬೆ ಮನೆಗಳಲ್ಲಿ ಬಂಧು ಮಿತ್ರರ ಸಂಭ್ರಮ, ಮೊದಲಾಗಿ ಬೊಂಬೆ ಹಬ್ಬದ ಸಂಭ್ರಮ ಕಾಣಬಹುದಾಗಿದೆ. ನವರಾತ್ರಿಯ ಒಂಬತ್ತು ದಿನ ನಡೆಯುವ ಬೊಂಬೆ ಹಬ್ಬದಲ್ಲಿ ಕಳಸ ಸ್ಥಾಪನೆ ಮಾಡಿ ಪ್ರತಿನಿತ್ಯ ನೈವೇದ್ಯದೊಂದಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಮರ್ಪಣೆಯಾಗುತ್ತಿದೆ.

ನಗರದಲ್ಲಿ ಸುಮಾರು ಮೂರು ತಲೆಮಾರಿನ ಹಿಂದಿನಿಂದಲೂ ಬೊಂಬೆಗಳನ್ನು ಕೂಡಿಸುತ್ತ ಬಂದಿರುವ ಮನೆಗಳಿವೆ. ಬೊಂಬೆಗಳಿಗೆ ಪ್ರತಿದಿನ ಸಂಜೆ ಪೂಜೆ ಸಲ್ಲಿಸಿ ಮನೆ ಸುತ್ತಲಿನ ಹತ್ತಾರು ಮಹಿಳೆಯರು, ಮಕ್ಕಳನ್ನು ಮನೆಗೆ ಆಹ್ವಾನಿಸಿ ಪೂಜೆ ಸಲ್ಲಿಸಲಾಗುತ್ತದೆ. ‘ಒಂಬತ್ತು ದಿನಗಳ ಕಾಲವು ಪ್ರತಿದಿನ ಸಂಜೆ ವಿವಿಧ ರೀತಿಯ ಪ್ರಸಾದವನ್ನು ಮಾಡಿ ಹಂಚಲಾಗುತ್ತದೆ’ ಎನ್ನುತ್ತಾರೆ ನಗರದ ವಾಸವಿ ಕಲ್ಯಾಣ ಮಂದಿರದ ಸಮೀಪದ ಡಾ.ಜಿ.
ಶ್ರೀನಿವಾಸ ರಾಘವನ್‌.

ADVERTISEMENT

ವಿವಿಧ ದೇವಾನುದೇವತೆಗಳ ಬೊಂಬೆಗಳೊಂದಿಗೆ ಕೈಲಾಸ ಶಿವದರ್ಶನ, ಶ್ರೀಕೃಷ್ಣ ಪಾರಿಜಾತ, ತಿರುಪತಿ ಬ್ರಹ್ಮೋತ್ಸವ, ದಶಾವತಾರ, ತಿರುಪತಿ, ಗರುಡೋತ್ಸವ, ಮದುವೆ ದಿಬ್ಬಣದ ಬೊಂಬೆಗಳು, ಪಟ್ಟದಲ್ಲಿ ಕುಳಿತಿದ್ದರೆ, ದಸರಾ ಮೆರವಣಿಗೆ, ಮೈಸೂರು ಅರಮನೆ, ಗ್ರಾಮೀಣ ಚಿತ್ರಣ, ಉದ್ಯಾನ, ಮೃಗಾಲಯ, ಕಾಡು, ಕೈಲಾಸ ಪರ್ವತ, ಅರಮನೆ, ದೇವಾಲಯ ಮೊದಲಾದ ವಿಶೇಷ ಆಯೋಜನೆಗಳು ಆಕರ್ಷಣೆಯಾಗಿವೆ.

ಬಯಲುಸೀಮೆಯ ಜನಪದ ಧಾರ್ಮಿಕ ಭಾವನೆಗಳನ್ನು ಮೇಳೈಸಿರುವ ಈ ಬೊಂಬೆ ಹಬ್ಬ ಆಧುನಿಕತೆಯ ಪ್ರಭಾವದ ನಡುವೆಯೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ದಶಕಗಳ ಹಿಂದೆ ದಸರಾ ಮೂರು ತಿಂಗಳಿದ್ದಂತೆ ಮನೆಯ ಮುಂದೆ ದಸರಾ ಬೊಂಬೆಗಳ ಮಾರಾಟ ಜೋರಾಗಿತ್ತು. ಆದರೆ ಈಗ ಭರಾಟೆ ಕಡಿಮೆಯಾಗಿದೆ. ಇಂದಿನ ಯಾಂತ್ರಿಕ ಯುಗದಲ್ಲಿ ಬಂಧು ಬಳಗದವರೆಲ್ಲ ಕೂಡಿ, ಗೆಳೆಯರು ಹಿತೈಷಿಗಳು ಸೇರಿ ಸಂಭ್ರಮಿಸುವ ಬೊಂಬೆ ಹಬ್ಬ ಆಚರಣೆ ಇಂದು ಅಪರೂಪವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.