ADVERTISEMENT

ದಾಬಸ್ ಪೇಟೆ: ನಿರಂತರ ಮಳೆ; ಹಲವೆಡೆ ಬಿತ್ತನೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 21:30 IST
Last Updated 6 ಆಗಸ್ಟ್ 2022, 21:30 IST
ಮಳೆಯಿಂದ ತೊಗರಿ ಹೊಲದಲ್ಲಿ ನೀರು ನಿಂತಿದೆ
ಮಳೆಯಿಂದ ತೊಗರಿ ಹೊಲದಲ್ಲಿ ನೀರು ನಿಂತಿದೆ   

ದಾಬಸ್ ಪೇಟೆ: ಹಲವು ದಿನಗಳಿಂದ ನಿತ್ಯ ಸುರಿಯುತ್ತಿರುವ ಮಳೆಯಿಂದ ನೆಲಮಂಗಲ ತಾಲ್ಲೂಕಿನ ರೈತರು ತತ್ತರಿಸಿದ್ದಾರೆ.

ಮಳೆಯಿಂದ ಹಲವೆಡೆ ಬಿತ್ತನೆ ಮಾಡಲು ಸಾಧ್ಯವಾಗದೆ ರೈತರು ಕೈಕಟ್ಟಿ ಕುಳಿತಿದ್ದಾರೆ. ಕೆಲವೆಡೆ ಬಿತ್ತನೆಯಾದ ಬೆಳೆಗಳಲ್ಲಿ ಕಳೆ ಕಿತ್ತು, ಗೊಬ್ಬರ ಹಾಕಿ ಬೇಸಾಯ ಮಾಡಲು ಸಾಧ್ಯವಾಗುತ್ತಿಲ್ಲ.

ತಾಲ್ಲೂಕಿನಲ್ಲಿ ಮುಂಗಾರು ಮಳೆಗೆ ತೊಗರಿ, ಅಲಸಂದೆ, ಅವರೆ, ಮೆಕ್ಕೆಜೋಳ, ಕಡಲೆಕಾಯಿ ಬಿತ್ತನೆ ಮಾಡಲಾಗುತ್ತದೆ. ಜುಲೈ ತಿಂಗಳ ಮಧ್ಯಭಾಗದಿಂದ, ಆಗಸ್ಟ್ ತಿಂಗಳ ಮಧ್ಯಭಾಗದವರೆಗೆ ರಾಗಿ ಬಿತ್ತನೆಯಾಗುತ್ತದೆ. ಆದರೆ, ಮಳೆಯ ಕಾಟದಿಂದ ಈ ಬಾರಿ ರೈತರು ಸಕಾಲಕ್ಕೆ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬಿತ್ತನೆ ಆಗಿದ್ದರೂ ಅದರ ಬೇಸಾಯಕ್ಕೆ ಮಳೆ ಬಿಡುವು ಕೊಡುತ್ತಿಲ್ಲ. ತಗ್ಗುಪ್ರದೇಶಗಳಲ್ಲಿ ನೀರು ನಿಂತಿದ್ದು ಬಿತ್ತನೆಯಾಗಿರುವ ರಾಗಿ, ತೊಗರಿ, ಅವರೆ, ಜೋಳ ಸಂಪೂರ್ಣ ಮುಳುಗಿ ಕೊಳೆಯುವ ಸ್ಥಿತಿ ಮೂಡಿದೆ. ನಿರಂತರ ಮಳೆಯಿಂದ ಕಳೆ ಹೆಚ್ಚಾಗಿದೆ. ಬೆಳೆಗಳಿಗಿಂತ ಕಳೆಯೇ ಹೊಲಗಳಲ್ಲಿ ಕಾಣಿಸುತ್ತಿದೆ. ಒಂದಷ್ಟು ದಿನಗಳ ಕಾಲ ಮಳೆ ಬಿಡುವು ಕೊಟ್ಟಿದ್ದರೆ ಬೇಸಾಯಕ್ಕೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ಯುವ ರೈತ ಜಗದೀಶ್.

ADVERTISEMENT

ನೆಲಮಂಗಲ ತಾಲ್ಲೂಕಿನಲ್ಲಿ ಮುಂಗಾರು ಸಾಲಿನಲ್ಲಿ 1496.10 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, 403.50 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 117.50 ಹೆಕ್ಟೇರ್‌ನಲ್ಲಿ ತೊಗರಿ, 21.0 ಹೆಕ್ಟೇರ್‌ನಲ್ಲಿ ಅವರೆ ಮತ್ತು 16.90 ಅಲಸಂದೆ ಬಿತ್ತನೆಯ ಗುರಿ ಹೊಂದಲಾಗಿದೆ.
ತಾಲ್ಲೂಕಿನಲ್ಲಿ 372 ಮಿಲಿ ಮೀಟರ್ ವಾಡಿಕೆ ಮಳೆಯಾಗಲಿದ್ದು, ಈಗಾಗಲೇ ಸರಾಸರಿ ಮಳೆ 536.17 ಮಿಲಿ ಮೀಟರ್ ಮಳೆಯಾಗಿದೆ.

ರೈತರು ಮಳೆಯಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಬೆಳೆ ವಿಮೆಗಳನ್ನು ಮಾಡಿಸಿಕೊಳ್ಳುವ ಅಗತ್ಯವಿದ್ದು, ತಾಲ್ಲೂಕಿನ ರೈತರು ಆಗಸ್ಟ್ 15ರೊಳಗೆ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ನೆಲಮಂಗಲ ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ರಾಘವೇಂದ್ರ ಹೇಳಿದರು.

ಆಗಸ್ಟ್ ತಿಂಗಳ ಕೊನೆಯವರೆಗೆ ರಾಗಿ ಬಿತ್ತನೆಗೆ ಅವಕಾಶವಿದೆ. ರೈತರು ಮಳೆ ಬಿಡುವು ಕೊಟ್ಟ ನಂತರ ಭೂಮಿಯನ್ನು ಹಸನು ಮಾಡಿಕೊಂಡು ಬಿತ್ತನೆ ಮಾಡಬಹುದು ಎನ್ನುತ್ತಾರೆ ಸಹಾಯಕ ಕೃಷಿ ಅಧಿಕಾರಿ ರಾಘವೇಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.