
ದೇವನಹಳ್ಳಿ: ಬೆಂಗಳೂರು ದಕ್ಷಿಣ ಹಾಗೂ ಉತ್ತರ ಜಿಲ್ಲೆಗಳಲ್ಲಿ ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ(ಬಯಪ)ದ ನೂತನ ಕಚೇರಿ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಕೆಂಪೇಗೌಡರ ಕನಸು ಮೀರಿ ಬೆಂಗಳೂರು ಬೆಳೆಯುತ್ತಿದೆ. ಬೆಂಗಳೂರಿನ ಸುತ್ತಮುತ್ತಲ ಪ್ರದೇಶವನ್ನು ಜಿಬಿಎ ವ್ಯಾಪ್ತಿಯ ಸೇರಿಸಲಾಗುವುದು. ಬಿಡದಿ, ಸೋಲೂರು, ನಂದಗುಡಿಯಲ್ಲಿ ಟೌನ್ ಶಿಪ್ ಮಾಡುತ್ತೇವೆ. ಇದನ್ನು ಡಿನೋಟಿಫಿಕೆಷನ್ ಮಾಡಲು ಸಾಧ್ಯವೇ ಇಲ್ಲ. ಹೈಕೋರ್ಟ್ ದ್ವಿಸದಸ್ಯ ಪೀಠ ಬಿಡಿಎ ಪರವಾಗಿ ಆದೇಶ ಬಂದಿದೆ. ರೈತರಿಗೆ ಅನುಕೂಲ ಮಾಡಿಕೊಡಲು ಉತ್ತಮ ಬೆಲೆ ಸಿಗುವಂತೆ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಬಿಡದಿ, ರಾಮನಗರ ಹೊಸ ಬೆಂಗಳೂರಾಗಲಿದೆ. ನೀವು ನಿಮ್ಮ ಆಸ್ತಿಗಳನ್ನು ಕಾಪಾಡಿಕೊಳ್ಳಿ. ನಿಮ್ಮ ಆಸ್ತಿಗಳಿಗೆ ಹೆಚ್ಚು ಮೌಲ್ಯ ಬರುವಂತೆ ಮಾಡುತ್ತನೆ. ಇಡೀ ವಿಶ್ವ ನೋಡುವಂತೆ ಬೆಂಗಳೂರನ್ನು ಪರಿವರ್ತನೆ ಮಾಡುತ್ತೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಪರಿಗಣಿಸಲಾಗಿದೆ. ನಮ್ಮ ಸರ್ಕಾರ ಸದಾ ನಿಮ್ಮ ಜೊತೆ ಇರಲಿದೆ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಎತ್ತಿನಹೊಳೆ, ಕಾವೇರಿ ನೀರು ಹರಿಸಲು ಹಾಗೂ ಮೆಟ್ರೊ ವಿಸ್ತರಣೆ ಮಾಡಲು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಪ್ರತಿ ಸಂಪುಟ ಸಭೆಯಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಇದಕ್ಕಾಗಿ ಒತ್ತಡ ಹಾಕುತ್ತಿದ್ದು, ಇದರ ಬಗ್ಗೆ ಆದ್ಯತೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.