ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆ | ಮೈತ್ರಿ ಗೊಂದಲ: ನಿಖಿಲ್‌ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 6:39 IST
Last Updated 24 ಜನವರಿ 2026, 6:39 IST
<div class="paragraphs"><p>ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು</p></div>

ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು

   

ಆನೇಕಲ್:  ‘ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಪ್ರಶ್ನೆಯಾಗಿಯೇ ಉಳಿದಿದೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಾಗಬೇಕು. ಪ್ರತ್ಯೇಕವಾಗಿ ಸ್ಪರ್ಧೆ ಮಾಡಬೇಕೇ ಅಥವಾ ಮೈತ್ರಿಯಾಗಿ ಸ್ಪರ್ಧಿಸಬೇಕೇ ಎಂಬುದನ್ನು ಕಾರ್ಯಕರ್ತರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ಚಂದಾಪುರ ಸೂರ್ಯಸಿಟಿ ಮೊದಲನೇ ಹಂತದಲ್ಲಿ ಜೆಡಿಎಸ್‌ ಪಕ್ಷದಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ADVERTISEMENT

ಜೆಡಿಎಸ್‌ ಪ್ರಾದೇಶಿಕ ಹಾಗೂ ರೈತರ ಪಕ್ಷವಾಗಿದೆ. ಹೀಗಾಗಿ ಬೂತ್‌ ಮಟ್ಟದಿಂದ ಪಕ್ಷ ಸಂಘಟನೆಗೆ ಪ್ರತಿಯೊಬ್ಬ ಕಾರ್ಯಕರ್ತರು ಸೇನಾನಿಯಂತೆ ಕಾರ್ಯನಿರ್ವಹಿಸಬೇಕು. ಮುಂದಿನ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ, ಜಿಬಿಎ ಚುನಾವಣೆಯಲ್ಲಿ ಪಕ್ಷವನ್ನು ಸಂಘಟಿಸಲು ಪ್ರವಾಸ ಕೈಗೊಳ್ಳಲಾಗುತ್ತಿದೆ. ಕಾರ್ಯಕರ್ತರು ಪಕ್ಷದ ಮೂಲ ಮತಗಳನ್ನು ಭದ್ರಪಡಿಸಿಕೊಳ್ಳಲು ಕ್ರಿಯಾಶೀಲರಾಗಬೇಕು ಎಂದರು.

‘ತಾಲ್ಲೂಕಿನಲ್ಲಿ ಜೆಡಿಎಸ್‌ ಶಕ್ತಿಯನ್ನು ಮುಂದಿನ ಚುನಾವಣೆಯಲ್ಲಿ ತೋರಿಸುತ್ತೇವೆ. ಮುಂಬರುವ ಸ್ಥಳೀಯ ಚುನಾವಣೆಗಳು ಕಾರ್ಯಕರ್ತರ ಚುನಾವಣೆಯಾಗಿದೆ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಕಾರ್ಯಕರ್ತರು ದುಡಿಯುತ್ತಾರೆ. ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕಾರ್ಯಕರ್ತರಿಗಾಗಿ ನಾಯಕರು ಬೀದಿಗಿಳಿದು ಸಂಘಟಿಸಿ ಕಾರ್ಯಕರ್ತರಿಗೆ ಸ್ಥಾನ ದೊರಕಿಸಿಕೊಡಬೇಕು. ಮುಂದಿನ ಹಂತದ ನಾಯಕರನ್ನು ತಯಾರಿಸುವ ಅಗತ್ಯವಿದೆ ಎಂದು ಹೇಳಿದರು.

ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್‌, ಮುಖಂಡರಾದ ಕೆ.ಪಿ.ರಾಜು, ಪಟಾಪಟ್‌ ರವೀಂದ್ರನಾಥ್‌, ಹಾರೋಹಳ್ಳಿ ದೇವೇಗೌಡ, ಶೆಟ್ಟಿಹಳ್ಳಿ ವಿನಯ್, ಕುಶಾಲ್‌ ಇದ್ದರು.

ಗೌರವದಿಂದ ಹಕ್ಕು ಕೇಳಿ

ವಿಧಾನಸಭೆಯು ದೇವಾಲಯವಾಗಿದೆ. ಅಂತಹ ಸ್ಥಳದಲ್ಲಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸಿರುವುದು ಖಂಡನೀಯ ಎಂದು ನಿಖಿಲ್‌ ಕುಮಾರ್‌ಸ್ವಾಮಿ ಹೇಳಿದರು.

ಕೇಂದ್ರದಲ್ಲಿ ಎನ್‌ಡಿಎ ಮೈತ್ರಿ ಕೂಟದ ಸರ್ಕಾರವಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ. ಇಂತಹ ಸಂದರ್ಭದಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡದೇ ರಾಜ್ಯಕ್ಕೆ ಅವಶ್ಯಕವಿರುವ ಅನುದಾನ ಪಾಲನ್ನು ಪ್ರಾದೇಶಿಕ ಪಕ್ಷದೊಂದಿಗೆ ಚರ್ಚಿಸಿ ಪ್ರೀತಿ, ವಿಶ್ವಾಸ ಮತ್ತು ಪರಸ್ಪರ ಗೌರವದಿಂದ ಕರ್ನಾಟಕದ ಹಕ್ಕನ್ನು ಕೇಳಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.