ADVERTISEMENT

ಆರು ತಿಂಗಳಿಂದ ಸಭೆ ನಡೆಸಿಯೇ ಇಲ್ಲ !

3 ತಿಂಗಳಿಗೊಮ್ಮೆ ಸಭೆಗೆ ಕೃಷಿಕ ಸಮಾಜದ ನಿರ್ದೇಶಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 13:16 IST
Last Updated 13 ಜುಲೈ 2019, 13:16 IST
ಕೃಷಿಕ ಸಮಾಜದ ಸಭೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಪಿ.ನಾರಾಯಣಸ್ವಾಮಿ ಮಾತನಾಡಿದರು
ಕೃಷಿಕ ಸಮಾಜದ ಸಭೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಪಿ.ನಾರಾಯಣಸ್ವಾಮಿ ಮಾತನಾಡಿದರು   

ದೊಡ್ಡಬಳ್ಳಾಪುರ: ಕೃಷಿಕ ಸಮಾಜದ ಸಭೆ ಸೇರಿ ಆರು ತಿಂಗಳು ಕಳೆದಿದೆ. ನಿಗದಿಯಂತೆ ಮೂರು ತಿಂಗಳಿಗೆ ಒಮ್ಮೆ ಕಡ್ಡಾಯವಾಗಿ ಸಭೆ ನಡೆಸಬೇಕು ಎಂದು ಕೃಷಿಕ ಸಮಾಜದ ನಿರ್ದೇಶಕರು ಒತ್ತಾಯಿಸಿದರು.

ನಗರದ ಕೃಷಿ ಇಲಾಖೆಯಲ್ಲಿ ಆಯೋಜಿಸಲಾಗಿದ್ದ ಕೃಷಿಕ ಸಮಾಜದ ಸಭೆಯಲ್ಲಿ ಮಾತನಾಡಿದ ನಿರ್ದೇಶಕರು, ಸಭೆಯನ್ನು ಮೂರು ತಿಂಗಳಿಗೆ ಅಥವಾ ಎರಡು ತಿಂಗಳಿಗೆ ಒಮ್ಮೆ ನಡೆಸುವುದು ನಿಯಮ. ಆದರೆ, 6 ತಿಂಗಳಿನಿಂದ ಸಭೆಯನ್ನೇ ನಡೆಸದೆ ಇಲಾಖೆಗೆ ಮಾಹಿತಿ ಇಲ್ಲವಾಗಿದೆ. ಈ ಕುರಿತು ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.

ನಿರ್ದೇಶಕರ ಪ್ರಶ್ನೆಗಳಿಗೆ ಉತ್ತರಿಸಿದ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಪಿ. ನಾರಾಯಣಸ್ವಾಮಿ, ಸರ್ಕಾರದ ಯೋಜನೆಗಳ ಅನುಷ್ಠಾನದ ಒತ್ತಡ ಹಾಗೂ ಕೃಷಿ ಅಭಿಯಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಭೆಯನ್ನು ನಡೆಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ವಿಳಂಬವಾಗದಂತೆ ಕ್ರಮ ಕೈಗೊಂಡು ನಿಗದಿತ ಸಮಯಕ್ಕೆ ಸಭೆಯನ್ನು ನಡೆಸಲಾಗುವುದು ಎಂದರು.

ADVERTISEMENT

ಕೃಷಿಕ ಸಮಾಜದ ನಿರ್ದೇಶಕ ಎಚ್.ಎಸ್. ಅಶ್ವಥ್‌ನಾರಾಯಣ ಕುಮಾರ್ ಮಾತನಾಡಿ, ಬಾಡಿಗೆ ಆಧಾರಿತ ಕೃಷಿ ಯಂತ್ರಗಳನ್ನು ಕೇಂದ್ರದಿಂದ ರೈತನ ಜಮೀನಿಗೆ ಕೊಂಡೊಯ್ಯುವ ಬಾಡಿಗೆ ವೆಚ್ಚವನ್ನು ಸರ್ಕಾರವೇ ಭರಿಸಿ ರೈತರಿಗೆ ಉಂಟಾಗುತ್ತಿರುವ ನಷ್ಟವನ್ನು ತಪ್ಪಿಸಬೇಕು ಎಂದರು.

ತೋಟಗಾರಿಕೆ ಬೆಳೆ ಬೆಳೆಯಲು ಕೃಷಿ ಹೊಂಡ ನಿರ್ಮಾಣಕ್ಕೆ ₹4 ಲಕ್ಷದವರೆಗೆ ಪ್ರೋತ್ಸಾಹಧನ ವಿತರಿಸಬೇಕು. ಟ್ರ್ಯಾಕ್ಟರ್ ಮತ್ತು ಉಪಕರಣಗಳ ವಿತರಣೆಯಲ್ಲಿ ಜನಪ್ರತಿನಿಧಿಗಳ ಹಸ್ತಕ್ಷೇಪವಿಲ್ಲದೆ ಅರ್ಜಿಯ ಆಧಾರದ ಮೇಲೆ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಎಪಿಎಂಸಿ ಆವರಣದಲ್ಲಿ ಕೃಷಿಕ ಸಮಾಜಕ್ಕೆ ಶೇ50ರಷ್ಟು ರಿಯಾಯಿತಿಯಲ್ಲಿ ನಿವೇಶನ ಪಡೆಯಬೇಕು. ದೊಡ್ಡಬೆಳವಂಗಲದಲ್ಲಿ ರೈತ ಸಂಪರ್ಕ ಕೇಂದ್ರ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ಸರ್ವೇ ಕಾರ್ಯವನ್ನು ತ್ವರಿತವಾಗಿ ಮಾಡಿಸಬೇಕು ಎಂದು ಒತ್ತಾಯಿಸಿದರು.

ಕೃಷಿಕ ಸಮಾಜದ ಅಧ್ಯಕ್ಷ ಆಂಜನೇಗೌಡ, ಉಪಾಧ್ಯಕ್ಷ ಜಯರಾಮಯ್ಯ, ಜಿಲ್ಲಾ ಪ್ರತಿನಿಧಿ ನಾಗರಾಜಯ್ಯ, ನಿರ್ದೇಶಕರಾದ ಮುನಿಯಪ್ಪ, ರಾಮಾಂಜಿನಪ್ಪ, ಗೋಪಾಲರೆಡ್ಡಿ, ಕೃಷಿ ಅಧಿಕಾರಿ ಸಿದ್ದಲಿಂಗಯ್ಯ, ಮಂಜುರಾಣಿ, ಹರೀಶ್‌ಕುಮಾರ್, ಕಿರಣ್, ಸಹಾಯಕ ಕೃಷಿ ಅಧಿಕಾರಿ ಕಸ್ತೂರಯ್ಯ, ಲಿಂಗಯ್ಯ, ಪರಶಿವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.