
ನಂದಗುಡಿ(ಹೊಸಕೋಟೆ): ಗ್ರಾಮದ ವೀರಾಂಜನೇಯ ದೇವಸ್ಥಾನವನ್ನು ರಾತ್ರೋರಾತ್ರಿ ಬೃಹತ್ ನಿರ್ಮಾಣ ಯಂತ್ರಗಳಿಂದ ನೆಲಸಮ ಮಾಡಲಾಗಿದೆ.
ವಾಹನದಲ್ಲಿ ಬಂದ ಅನಾಮಧೇಯ ವ್ಯಕ್ತಿಗಳು ಬುಧವಾರ ರಾತ್ರಿ ದೇವಸ್ಥಾನ ನೆಲಸಮ ಮಾಡಿ ಪರಾರಿಯಾಗಿದ್ದಾರೆ. ಗುರುವಾರ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ ಗ್ರಾಮಸ್ಥರಿಗೆ ದೇವಸ್ಥಾನ ನೆಲಸಮಗೊಂಡಿರುವ ವಿಷಯ ಗೊತ್ತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಂದಗುಡಿ ಪೊಲೀಸರು ಸ್ಥಳ ಮಹಜರು ನಡೆಸಿ, ಪ್ರಾಥಮಿಕ ವರದಿ ಸಿದ್ಧಪಡಿಸಿದ್ದಾರೆ. ಇತರ ಪ್ರಕರಣಗಳ ಜೊತೆ ಈ ಘಟನೆ ಸಂಬಂಧ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ತನಖೆ ನಂತರ ಸತ್ಯಾಸತ್ಯತೆ ಹೊರಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಜಾಗದಲ್ಲಿ ಮೊದಲು ಅತಿ ಹೆಚ್ಚು ಅಪಘಾತಗಳು ಸಂಭವಿಸಿದ್ದವು. ಸಾಕಷ್ಟು ಸಾವು, ನೋವುಗಳಾಗಿದ್ದವು. ಹಾಗಾಗಿ ಗ್ರಾಮಸ್ಥರು ಇಲ್ಲಿ ವೀರಾಂಜನೇಯ ದೇವಾಲಯ ನಿರ್ಮಾಣ ಮಾಡಿದ್ದರು.
ಅಬಕಾರಿ ಲಾಬಿ ಕಾರಣ?
ದೇವಸ್ಥಾನದ ಬಳಿ ಹೊಸದಾಗಿ ಬಾರ್ ಆರಂಭಿಸಲು ಅಬಕಾರಿ ಇಲಾಖೆಗೆ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಇದನ್ನು ಅರಿತ ದೇವಸ್ಥಾನ ಸಮಿತಿ ಸದಸ್ಯ ಬಿ.ಕೆ. ಶ್ರೀನಿವಾಸ್ ಎಂಬುವರು ಅ.8 ರಂದು ಜಿಲ್ಲಾ ಅಬಕಾರಿ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ದೇವಸ್ಥಾನದ ಸಮೀಪ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಬಾರದು ಎಂದು ದೇವಸ್ಥಾನದ ಪರವಾಗಿ ಮನವಿ ಮಾಡಿದ್ದರು.
ದೇವಸ್ಥಾನ ನೋಂದಣಿ ದಾಖಲೆಗಳೊಂದಿಗೆ ಅ.30 ರಂದು ಹೊಸಕೋಟೆ ವಲಯ ಅಬಕಾರಿ ನಿರೀಕ್ಷಕರ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು.
ದೇವಸ್ಥಾನ ಇದ್ದರೆ ಬಾರ್ ತೆರೆಯಲು ಅನುಮತಿ ಸಿಗುವುದಿಲ್ಲ ಎಂದು ಅರಿತ ಅರ್ಜಿದಾರ ರಾತ್ರೋರಾತ್ರಿ ದೇವಸ್ಥಾನ ನೆಲಸಮಗೊಳಿಸಿರಬಹುದು ಎಂದು ದೇವಸ್ಥಾನ ಸಮಿತಿ ಸದಸ್ಯರು ಶಂಕಿಸಿದ್ದಾರೆ.
ಬುಧವಾರ ಸಂಜೆ 7.30ಕ್ಕೆ ಬೂದು ಬಣ್ಣದ ಕಾರಿನಲ್ಲಿ ಬಂದ ಅನಾಮಧೇಯ ವ್ಯಕ್ತಿಯೊಬ್ಬ ದೇವಸ್ಥಾನದ ಬಳಿ ಶಂಕಾಸ್ಪದವಾಗಿ ತಿರುಗುತ್ತಿದ್ದ ಎಂದು ಪ್ರತ್ಯಕ್ಷದರ್ಶಿ ಮಹಿಳೆ ಹೇಳಿದ್ದಾರೆ.
ದೇವಸ್ಥಾನ ನೆಲಸಮವಾಗಿರುವ ಸ್ಥಳದಲ್ಲಿ ನಿರ್ಮಾಣ ಯಂತ್ರಗಳು ಬಂದು ಹೋಗಿರುವುದು ಗುರುತು ಕಾಣುತ್ತಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ದೇವಾಲಯ ಪಕ್ಕದ ಜಾಗದ ಮೇಲೆ ಗ್ರಾಮದ ಪ್ರಭಾವಿಯೊಬ್ಬರ ಕಣ್ಣು ಬಿದ್ದಿತ್ತು. ಇದು ಗೊತ್ತಾಗಿ ದೇವಾಲಯ ಆಡಳಿತ ಮಂಡಳಿ ದೇವಾಲಯದ ಸುತ್ತಮುತ್ತ ಬಾರ್ ತೆರೆಯಲು ಅನುಮತಿ ನೀಡದಂತೆ ಅಬಕಾರಿ ಇಲಾಖೆಗೆ ದೂರು ನೀಡಿತ್ತು. ಇದರಿಂದ ಕೋಪಗೊಂಡ ಗ್ರಾಮದ ಪ್ರಭಾವಿ ದೇವಾಲಯ ನೆಲಸಮ ಮಾಡಿರಬಹುದು. ಘಟನಾ ಸ್ಥಳಕ್ಕೆ ನಂದಗುಡಿ ಪೋಲೀಸರು ಭೇಟಿ ನೀಡಿದ್ದರುಆಂಜಿನಪ್ಪ ನಂದಗುಡಿ ಗ್ರಾಮಸ್ಥ
ವೈಯುಕ್ತಿಕ ಲಾಭಕ್ಕಾಗಿ ದೇವಾಲಯ ನೆಲಸಮ ಮಾಡಿದ್ದು ದುರಂತ. ಪೋಲೀಸರು ನೈಜ ಕಾರಣ ಪತ್ತೆ ಹಚ್ಚಬೇಕುಶಿವರಾಜ್ ಆಚಾರ್ ನಂದಗುಡಿ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.