ADVERTISEMENT

ದೊಡ್ಡಬಳ್ಳಾಪುರ: ನಿಶ್ಚಿತ ಪಿಂಚಣಿಗೆ ಆಗ್ರಹಿಸಿ ಯಾತ್ರೆ

ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 7:29 IST
Last Updated 9 ನವೆಂಬರ್ 2022, 7:29 IST
ದೊಡ್ಡಬಳ್ಳಾಪುರದಲ್ಲಿ ನಿಶ್ಚಿತ ಪಿಂಚಣಿ ಪದ್ಧತಿ ಜಾರಿಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಸಂಕಲ್ಪ ಯಾತ್ರೆ ನಡೆಯಿತು
ದೊಡ್ಡಬಳ್ಳಾಪುರದಲ್ಲಿ ನಿಶ್ಚಿತ ಪಿಂಚಣಿ ಪದ್ಧತಿ ಜಾರಿಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಸಂಕಲ್ಪ ಯಾತ್ರೆ ನಡೆಯಿತು   

ದೊಡ್ಡಬಳ್ಳಾಪುರ:ಸರ್ಕಾರಿ ನೌಕರರಿಗೆ ಈ ಹಿಂದೆ ಇದ್ದ ನಿಶ್ಚಿತ ಪಿಂಚಣಿ ಪದ್ಧತಿಯನ್ನೇ ಜಾರಿಗೊಳಿಸುವಂತೆ ಆಗ್ರಹಿಸಿ ಮಂಗಳವಾರ ನಗರದಲ್ಲಿ ಸಂಕಲ್ಪ ಯಾತ್ರೆ ನಡೆಯಿತು.

ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆಯಲ್ಲಿ ಶಾಲಾ, ಕಾಲೇಜಿನ ಉಪನ್ಯಾಸಕರು ಸೇರಿದಂತೆ ವಿವಿಧ ಇಲಾಖೆಯ ನೌಕರರು ಭಾಗವಹಿಸಿದ್ದರು.

ಯಾತ್ರೆ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಂ ತೇಜು, ‘ಈಗ ಜಾರಿಯಲ್ಲಿರುವ ಎನ್‌ಪಿಎಸ್ ಯೋಜನೆಯು ನೌಕರರ ಸಂಧ್ಯಾ ಕಾಲದ ಬದುಕಿಗೆ ಅಪಾಯ ತಂದೊಡ್ಡಿದೆ. ಎಲ್ಲಾ ನೌಕರರು ಈ ಕೂಡಲೇ ಎಚ್ಚೆತ್ತುಕೊಂಡು ಹೋರಾಟದ ಮೂಲಕ ನಮ್ಮ ಸಾಂವಿಧಾನಿಕ ಹಕ್ಕನ್ನು ಪಡೆದುಕೊಳ್ಳಬೇಕು. ಎಲ್ಲಾ ಇಲಾಖೆಯ ಅಧಿಕಾರಿಗಳು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ’ ಎಂದು ಹೇಳಿದರು.

ADVERTISEMENT

ಒಪಿಎಸ್‌ ಸಂಕಲ್ಪ ಯಾತ್ರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸುತ್ತಿದೆ. ಎಲ್ಲಾ ತಾಲ್ಲೂಕುಗಳಲ್ಲೂ ಯಾತ್ರೆ ನಡೆಸುವ ಮೂಲಕ ನೌಕರರಲ್ಲಿ ಜಾಗೃತಿ ಮೂಡಿಸುವ ಹಾಗೂ ಸಂಘಟನೆಯನ್ನು ಬಲಪಡಿಸಲಾಗುತ್ತಿದೆ ಎಂದರು.

ಡಿ. 19ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಪ್ರಾರಂಭವಾಗುತ್ತಿದೆ. ಈ ಬಾರಿ ನಮ್ಮ ಹಕ್ಕನ್ನು ಪಡೆಯುವವರೆಗೂ ಧರಣಿ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ಎಲ್ಲಾ ನೌಕರರು ಧರಣಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕೋರಿದರು.

ಸಂಕಲ್ಪ ಯಾತ್ರೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಹೂಸೂರಿ, ಸಂಘಟನಾ ಕಾರ್ಯದರ್ಶಿ ಮಹೇಶ್‌, ದೊಡ್ಡಬಳ್ಳಾಪುರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲಕ್ಷ್ಮೀನರಸಿಂಹಯ್ಯ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜೈಕುಮಾರ್‌, ಪ್ರಧಾನ ಕಾರ್ಯದರ್ಶಿ ವಸಂತಗೌಡ, ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಆರ್. ಚನ್ನಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿ ಪೂಜಪ್ಪ, ಖಜಾಂಚಿ ಬಿ. ಮುತ್ತುರಾಜ್‌, ಸಂಘನ ಕಾರ್ಯದರ್ಶಿ ಮೂರ್ತಿ, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘದ ಶಾಂತಮ್ಮ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.