ವಿಜಯಪುರ(ದೇವನಹಳ್ಳಿ): ಪಟ್ಟಣದ ಕೆನರಾ ಬ್ಯಾಂಕ್‌ನ ಮುಂಭಾಗದ ರಸ್ತೆ, ಹಳೆ ಕೆನರಾ ಬ್ಯಾಂಕ್ ರಸ್ತೆ, ವೆಂಕಟರಮಣಸ್ವಾಮಿ ದೇವಾಲಯದ ರಸ್ತೆಗಳಲ್ಲಿ ಅಧಿಕವಾಗಿ ವಾಹನಗಳ ಸಂಚಾರವಿದೆ. ಇದೇ ರಸ್ತೆಗಳಲ್ಲಿ ವಾಹನ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವುದರಿಂದ ಬೇರೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿನಿತ್ಯ ಈ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ. ಕೆನರಾ ಬ್ಯಾಂಕ್ ಎದುರಿನಲ್ಲಿ ಮತ್ತು ಹಿಂಭಾಗದಲ್ಲಿ ರೇಷ್ಮೆಗೂಡು ಮಾರುಕಟ್ಟೆ ಗೋಡನ್‌ಗಳಿವೆ. ಪಕ್ಕದಲ್ಲಿ ಅಂಚೆ ಕಚೇರಿಯಿದೆ. ರೇಷ್ಮೆಗೂಡು ಖರೀದಿ ಮಾಡುವುದಕ್ಕೆ ಬರುವ ರೀಲರ್‌ಗಳು, ಬ್ಯಾಂಕ್‌ನಲ್ಲಿ ವ್ಯವಹರಿಸಲು ಬರುವ ಗ್ರಾಹಕರು, ಅಂಚೆ ಕಚೇರಿಗೆ ಬರುವವರು ಹಾಗೂ ಬೆಂಗಳೂರು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಲಸಕ್ಕೆ ಹೋಗುವವರು ಎಲ್ಲರೂ ಇದೇ ರಸ್ತೆಯಲ್ಲಿ ವಾಹನ ನಿಲ್ಲಿಸಿ ಹೋಗುತ್ತಾರೆ. ಕಾರು ಸೇರಿದಂತೆ ದೊಡ್ಡ ವಾಹನ ಬರುವುದಕ್ಕೆ ಈ ರಸ್ತೆಯಲ್ಲಿ ಕಷ್ಟವಾಗುತ್ತಿದೆ. ಕೆಲವೊಮ್ಮೆ ಆಂಬುಲೆನ್ಸ್ ಬರುವುದಕ್ಕೆ ಆಗುವುದಿಲ್ಲ.
ಹಳೆ ಕೆನರಾ ಬ್ಯಾಂಕ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಅರ್ಧ ರಸ್ತೆಗೆ ಪಾರ್ಕಿಂಗ್ ಮಾಡುತ್ತಿದ್ದಾರೆ. ಮತ್ತೊಂದು ಬದಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ಸೊಪ್ಪು, ತರಕಾರಿ ಜೋಡಿಸಿಕೊಂಡು ವ್ಯಾಪಾರ ವಹಿವಾಟು ಮಾಡುತ್ತಾರೆ. ಇದರಿಂದ ಮೇಲೂರು ರಸ್ತೆಯಲ್ಲಿ ಸಂಚಾರ ಮಾಡುವುದು ಕಷ್ಟವಾಗುತ್ತಿದೆ. ಸರಕು–ಸಾಗಾಣಿಕೆ ಭಾರಿ ವಾಹನ ಹಗಲಿನಲ್ಲಿ ಬಂದು ರಸ್ತೆಗೆ ಅಡ್ಡವಾಗಿ ನಿಲ್ಲುತ್ತಿವೆ. ಇದರಿಂದಲೂ ತೊಂದರೆಯಾಗುತ್ತಿದೆ ಎಂದರು.
ವೆಂಕಟರಮಣಸ್ವಾಮಿ ದೇವಾಲಯದ ರಸ್ತೆಯಲ್ಲಿ ವ್ಯಾಪಾರಿಗಳು, ರಸ್ತೆಯಲ್ಲಿ ಸಾಮಾನು ಜೋಡಿಸಿಟ್ಟುಕೊಂಡಿದ್ದಾರೆ. ದ್ವಾರದಲ್ಲಿ ವ್ಯಾಪಾರಿಗಳು ರಸ್ತೆಗೆ ಬಂದಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಯಾರೂ ಈ ಕಡೆಗೆ ಗಮನಹರಿಸುತ್ತಿಲ್ಲ. ಈಗಲಾದರೂ ಪುರಸಭೆ ಅಧಿಕಾರಿಗಳು,ಪೊಲೀಸ್ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ರಸ್ತೆಗೆ ಅಡ್ಡವಾಗಿರುವ ಅಂಗಡಿ, ವಾಹನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರಾದ ಶ್ರೀನಿವಾಸ್, ಮುನಿರಾಜು, ಕಾಮಾಕ್ಷಮ್ಮ, ಶ್ರೀನಿಧಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.