ADVERTISEMENT

ಚುನಾವಣೆ ಭದ್ರತೆಗೆ ಕ್ರಮ: ವಿವಿಧ ಮಾದರಿಯ 3600ಗನ್‌ ವಶಕ್ಕೆ ಪಡೆದ ಪೊಲೀಸ್ ಇಲಾಖೆ

​ಪ್ರಜಾವಾಣಿ ವಾರ್ತೆ
Published 3 ಮೇ 2019, 16:18 IST
Last Updated 3 ಮೇ 2019, 16:18 IST
ಡಾ.ರಾಮ್‌ನಿವಾಸ್ ಸೆಪಟ್ 
ಡಾ.ರಾಮ್‌ನಿವಾಸ್ ಸೆಪಟ್    

ದೇವನಹಳ್ಳಿ: ‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿರುವ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರವಾನಗಿ ನೀಡಿರುವ ವಿವಿಧ ಮಾದರಿಯ 3600 ಗನ್‌ಗಳನ್ನು ವಶಕ್ಕೆ ಪಡೆದು ಒಟ್ಟು ₹11 ಲಕ್ಷ ಠೇವಣಿ ಪಡೆದುಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ನಿವಾಸ್ ಸೆಪಟ್ ಹೇಳಿದರು.

ಚುನಾವಣೆ ಭದ್ರತೆ ಕುರಿತು ಮಾತನಾಡಿದ ಅವರು ‘ಗ್ರಾಮಾಂತರ ಜಿಲ್ಲೆಯಲ್ಲಿ ಭಯಮುಕ್ತ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ರಾಷ್ಟ್ರಿಕೃತ ಬ್ಯಾಂಕ್‌ಗಳ ಭದ್ರತಾ ಸಿಬ್ಬಂದಿ ಹೊರತು ಪಡಿಸಿ ಈ ಕ್ರಮ ಕೈಗೊಳ್ಳಲಾಗಿದೆ. ನಾಲ್ಕು ತಾಲ್ಲೂಕು ವ್ಯಾಪ್ತಿಯಲ್ಲಿ ಪರವಾನಗಿ ಪಡೆದಿರುವ ನಾಡ ಬಂದೂಕು, ರಿವಾಲ್ವಾರ್, ಎಲ್ಲ ಬಗೆಯ ಗನ್‌ಗಳನ್ನು ಹಿಂದಕ್ಕೆ ಪಡೆಯಲಾಗಿದೆ’ ಎಂದು ಅವರು ಹೇಳಿದರು.

‘ಮತದಾನದ ಸಂದರ್ಭದಲ್ಲಿ ಬೆದರಿಕೆ, ಒತ್ತಡ, ದೌರ್ಜನ್ಯ ನಡೆಸುವ ಸಾಧ್ಯತೆಯಿಂದಾಗಿ ಮುಂಜಾಗ್ರತಾ ಕ್ರಮ ಇದಾಗಿದ್ದು ಯಾವುದೇ ಕಾರಣಕ್ಕೂ ರಿಯಾಯಿತಿ ನೀಡಲು ಸಾಧ್ಯವಿಲ್ಲ. ಪ್ರಾಣ ರಕ್ಷಣೆಗಾಗಿ ಪಡೆದಿರುವ ಗನ್‌ಗಳು ಎಂಬುದು ಗೊತ್ತಿದೆ. ಅದರೂ ಚುನಾವಣೆ ದೃಷ್ಠಿಯಿಂದ ವಶಕ್ಕೆ ಪಡೆದಿರುವುದು ಅನಿವಾರ್ಯವಾಗಿದೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಈಗಾಗಲೇ ರೌಡಿಪಟ್ಟಿಯಲ್ಲಿ ಗುರುತಿಸಿ ಕೊಂಡಿರುವವರನ್ನು ಆಯಾ ತಾಲ್ಲೂಕು ದಂಡಾಧಿಕಾರಿಗಳ ಮುಂದೆ ಹಾಜರು ಪಡಿಸಿ ಅಹಿತಕರ ಘಟನೆಗಳಿಗೆ ಅವಕಾಶ ಕೊಡದಂತೆ ಎಚ್ಚರಿಕೆ ನೀಡಲಾಗಿದೆ. ಎಲ್ಲ ರೌಡಿ ಶೀಟರ್‌ಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ. ಚುನಾವಣೆಗೆ ಸಹಕಾರ ನೀಡುವುದು ಎಲ್ಲರ ಕರ್ತವ್ಯ. ರೌಡಿಗಳು ತಮ್ಮ ಚಾಳಿ ಮುಂದುವರೆಸುವ ಮುನ್ಸೂಚನೆ ಕಂಡು ಬಂದರೆ ಗಡಿಪಾರು ಮಾಡುವ ಅವಕಾಶ ಪೊಲೀಸ್ ಇಲಾಖೆಗೆ ಇದೆ’ ಎಂದು ಅವರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.