ADVERTISEMENT

ವಿದ್ಯುತ್ ಕಡಿತ: ಕತ್ತಲಿನಲ್ಲಿ ಪ್ರವಾಸಿ ಮಂದಿರ

ಕಟ್ಟಡದ ಮೇಲ್ಚಾವಣಿ, ಗೋಡೆಗಳಿಂದ ಸೋರುವ ನೀರು: ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 14:09 IST
Last Updated 31 ಜುಲೈ 2019, 14:09 IST
ವಿಜಯಪುರ ಪ್ರವಾಸಿಮಂದಿರದ ಹೊರನೋಟ
ವಿಜಯಪುರ ಪ್ರವಾಸಿಮಂದಿರದ ಹೊರನೋಟ   

ವಿಜಯಪುರ: ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ, ಪ್ರವಾಸಿ ಮಂದಿರದವಿದ್ಯುತ್ ಬಿಲ್ ಅನ್ನು ಐದು ತಿಂಗಳಿಂದ ಪಾವತಿ ಮಾಡದೇ ಇರುವ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ಮುಖಂಡ ರಮೇಶ್ ಮಾತನಾಡಿ, ‘ಲೋಕೋಪಯೋಗಿ ಇಲಾಖೆಗೆ ಕೋಟ್ಯಂತರ ರೂಪಾಯಿಗಳ ಅನುದಾನ ಬಿಡುಗಡೆಯಾಗುತ್ತಲೇ ಇದೆ. ಸರ್ಕಾರದಿಂದ ಕಟ್ಟಡಗಳ ನಿರ್ವಹಣೆಗಾಗಿಯೂ ಅನುದಾನ ಬಿಡುಗಡೆಯಾಗುತ್ತದೆ. ಐದು ತಿಂಗಳಿಂದ ₹23,245 ವಿದ್ಯುತ್ ಬಿಲ್ ಕಟ್ಟಿಲ್ಲದ ಕಾರಣ ಬೆಸ್ಕಾಂ ಇಲಾಖೆಯವರು ವಿದ್ಯುತ್ ಕಡಿತಗೊಳಿಸಿದ್ದಾರೆ’ ಎಂದು ತಿಳಿಸಿದರು.

‘ಪ್ರವಾಸಿ ಮಂದಿರದ ವಿದ್ಯುತ್ ಕಡಿತಗೊಳಿಸುತ್ತಿರುವುದು ಇದು ಎರಡನೇ ಬಾರಿಗೆ. ಈ ಹಿಂದೆಯೂ ಕಡಿತಗೊಳಿಸಲಾಗಿತ್ತು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಗಣ್ಯರು ಬರುತ್ತಾರೆ ಎನ್ನುವ ಕಾರಣಕ್ಕೆ ಸಂಪರ್ಕ ಕಲ್ಪಿಸಿದರೂ, ಪುನಃ ಹಣ ಕಟ್ಟಿಲ್ಲವೆಂದು ಕಡಿತಗೊಳಿಸುತ್ತಾರೆ. ಇಲ್ಲಿನ ಕೆಲವು ಕೊಠಡಿಗಳಲ್ಲಿ ಮೇಲ್ಚಾವಣಿ ಸೋರುತ್ತಿದೆ. ಗೋಡೆಗಳ ಮೇಲೆಲ್ಲ‌ ನೀರು ಇಳಿಯುತ್ತದೆ. ಕಟ್ಟಡದ ಮೇಲ್ಭಾಗದಲ್ಲಿ ಕಾಂಕ್ರೀಟ್ ಹಾಕುವ ಕೆಲಸ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು. ಇದುವರೆಗೂ ಆ ಕೆಲಸವಾಗಿಲ್ಲ. ಹೊರಗೆ ಮಾತ್ರ ಬಣ್ಣ ಮಾತ್ರ ಬಳಿದಿದ್ದಾರೆ. ಕೊಠಡಿಗಳ ಒಳಗೆ ಹಾಕಿರುವ ದಿವಾನ, ಕುರ್ಚಿಗಳು ಕಿತ್ತು ಹೋಗಿವೆ. ನೀರಿನ ಕೊರತೆಯೂ ಇದೆ’ ಎಂದು ಅವರು ದೂರಿದರು.

ADVERTISEMENT

‘ಇಷ್ಟೆಲ್ಲ ಅವ್ಯವಸ್ಥೆಗಳಿದ್ದರೂ ಇಲ್ಲಿಗೆ ಬರುವ ಜನ ಪ್ರತಿನಿಧಿಗಳಾಗಲಿ, ಮುಖಂಡರಾಗಲಿ ಈ ಕುರಿತು ಗಮನ ಹರಿಸಿಲ್ಲ. ದೂರದಿಂದ ಬಂದವರು ಉಳಿದುಕೊಳ್ಳಲೂ ಕೊಠಡಿಗಳುಯೋಗ್ಯವಾಗಿಲ್ಲ. ಸರ್ಕಾರದಿಂದ ಪ್ರವಾಸಿ ಮಂದಿರ ನಿರ್ವಹಣೆಗೆ ಬಿಡುಗಡೆಯಾಗುತ್ತಿರುವ ಅನುದಾನ ಯಾವ ಉದ್ದೇಶಕ್ಕೆ ಬಳಕೆಯಾಗಿದೆ ಎನ್ನುವ ಕುರಿತು ತನಿಖೆಯಾಗಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.