ADVERTISEMENT

ಪಾರಂಪರಿಕ ಜಲ ಮೂಲ ಸಂರಕ್ಷಿಸಿ

ಅಮೃತ ಸರೋವರ ಯೋಜನೆಯ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2022, 4:03 IST
Last Updated 10 ಡಿಸೆಂಬರ್ 2022, 4:03 IST
ಆನೇಕಲ್ ತಾಲ್ಲೂಕಿನ ಕಾವಲಹೊಸಹಳ್ಳಿ ಕೆರೆಯನ್ನು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮುಖ್ಯ ಎಂಜಿನಿಯರ್‌ ಸಿ.ಕೆ.ಮಲ್ಲಪ್ಪ ಪರಿಶೀಲಿಸಿದರು
ಆನೇಕಲ್ ತಾಲ್ಲೂಕಿನ ಕಾವಲಹೊಸಹಳ್ಳಿ ಕೆರೆಯನ್ನು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮುಖ್ಯ ಎಂಜಿನಿಯರ್‌ ಸಿ.ಕೆ.ಮಲ್ಲಪ್ಪ ಪರಿಶೀಲಿಸಿದರು   

ಆನೇಕಲ್: ಅಮೃತ ಸರೋವರ ಮತ್ತು ನರೇಗಾ ಯೋಜನೆಗಳ ಪ್ರಗತಿಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮುಖ್ಯ ಎಂಜಿನಿಯರ್‌ ಸಿ.ಕೆ.ಮಲ್ಲಪ್ಪ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ಕಾವಲಹೊಸಹಳ್ಳಿ, ಬೆಸ್ತಮಾನಹಳ್ಳಿ, ಅರೇಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಅಮೃತ ಸರೋವರ ಯೋಜನೆಯ ಪ್ರಗತಿ ಪರಿಶೀಲಿಸಿದರು. ನರೇಗಾ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ವೀಕ್ಷಿಸಿದರು.

ಸಿ.ಕೆ.ಮಲ್ಲಪ್ಪ ಮಾತನಾಡಿ, ‘ಪಾರಂಪರಿಕ ಜಲ ಮೂಲಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹಾಗಾಗಿ ಪ್ರಾಚೀನ ಕಾಲದಿಂದಲೂ ಕೆರೆ, ಕುಂಟೆ, ಬಾವಿಗಳು ಗ್ರಾಮೀಣ ಭಾಗದ ಜೀವನಾಡಿಗಳಾಗಿದ್ದವು. ಪ್ರತಿಯೊಂದು ಗ್ರಾಮದಲ್ಲಿಯೂ ಜನರು ಸಮಾಜದ ಆಸ್ತಿ ಎಂಬಂತೆ ಇವುಗಳನ್ನು ರಕ್ಷಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಕೆರೆ, ಕುಂಟೆಗಳನ್ನು ಕಲುಷಿತಗೊಳಿಸಲಾಗುತ್ತಿದೆ. ಹಾಗಾಗಿ ಜಲಮೂಲಗಳನ್ನು ರಕ್ಷಿಸಲು ಸರ್ಕಾರ ಅಮೃತ ಸರೋವರ ಯೋಜನೆ ಜಾರಿಗೊಳಿಸಿದ್ದು ಗ್ರಾಮಗಳಲ್ಲಿನ ಕುಂಟೆಗಳನ್ನು ಅಭಿವೃದ್ಧಿಪಡಿಸಿ ಅವುಗಳನ್ನು ಬಳಕೆ ಮಾಡಲು ಮತ್ತು ಜಲಮೂಲಗಳನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ADVERTISEMENT

ಕಾವಲಹೊಸಹಳ್ಳಿಯ ಕೆರೆಗೆ ಪಟ್ಟಣದ ತ್ಯಾಜ್ಯ ನೀರು ಹರಿಯುತ್ತಿರುವ ಬಗ್ಗೆ ಗ್ರಾಮಸ್ಥರು ದೂರು ನೀಡಿದರು. ಸ್ಥಳ ಪರಿಶೀಲಿಸಿದ ಅಧಿಕಾರಿಗಳು ಎಸ್‌ಟಿಪಿ ಘಟಕ ಸ್ಥಾಪಿಸಿ ಸಂಸ್ಕರಿಸಿದ ನೀರನ್ನು ಕೆರೆಗೆ ಬಿಡಬೇಕು. ಕಲುಷಿತ ನೀರನ್ನು ಬಿಡಬಾರದು ಎಂದು ಸೂಚನೆ ನೀಡಿದರು. ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅವಶ್ಯಕತೆಯಿದ್ದಲ್ಲಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸಿದರೆ ಅನುಮೋದನೆ ಮಾಡುವುದಾಗಿ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಉಪವಿಭಾಗದ ಸಹಾಯಕ ಎಂಜಿನಿಯರ್‌ ಚಿನ್ನಪ್ಪ, ಯಮುನಾ, ವಿನಯ್‌ಕುಮಾರ್‌
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.