ADVERTISEMENT

ಗ್ರಾಮ ಲೆಕ್ಕಾಧಿಕಾರಿ ಮೇಲೆ ಪಿಎಸ್‌ಐ ಹಲ್ಲೆ: ದೂರು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 13:41 IST
Last Updated 7 ಏಪ್ರಿಲ್ 2020, 13:41 IST

ದೇವನಹಳ್ಳಿ: ಕರ್ತವ್ಯನಿರತ ಗ್ರಾಮ ಲೆಕ್ಕಾಧಿಕಾರಿ ಮೇಲೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್ ಹಲ್ಲೆ ನಡೆಸಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ವೈ ಕುಮಾರ್‌ ದೂರಿದರು.

ತಹಶೀಲ್ದಾರ್‌ಗೆ ನೀಡಿರುವ ಮೂರು ಪುಟಗಳ ದೂರಿನಲ್ಲಿ ಪ್ರಸ್ತಾಪಿಸಿರುವಂತೆ ಕೋವಿಡ್‌–19 ಹರಡದಂತೆ ಮುಂಜಾಗ್ರತೆ ಕ್ರಮವಹಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆಯಲ್ಲಿ ಪಿಎಸ್‌ಐ ನಾಗರಾಜ್‌ ಹಾಗೂ ಸಿಬ್ಬಂದಿ ಲಾಠಿಯಿಂದ ದೈಹಿಕ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಸೂಕ್ತ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಚನ್ನರಾಯಪಟ್ಟಣ ಹೋಬಳಿ ಕಂದಾಯ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಎಂ.ಎ.ಅಶೋಕ್‌ ಕರ್ತವ್ಯ ನಿಮಿತ್ತ ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ತಹಶೀಲ್ದಾರ್‌ ಆದೇಶದಂತೆ ಬೆಳಿಗ್ಗೆ 11ಕ್ಕೆ ಕರ್ತವ್ಯದ ಕಚೇರಿಗೆ ತೆರಳಲು ಮುಂದಾಗಿದ್ದ ಸಂದರ್ಭದಲ್ಲಿ ಪಿಎಸ್‌ಐ ನಾಗರಾಜ್‌, ಸಿಬ್ಬಂದಿ ಇಸ್ಮಾಯಿಲ್‌ ಹಾಗೂ ಇತರರು ವಿನಾಕಾರಣ ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ. ಗುರುತಿನ ಚೀಟಿ ತೋರಿದರೂ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಘಟನೆ ಸಂದರ್ಭದಲ್ಲಿ ತೆಗೆದ ಛಾಯಾಚಿತ್ರಗಳನ್ನು ಮೊಬೈಲ್‌ ಕಸಿದು ಡಿಲೀಟ್‌ ಮಾಡಿದ್ದಾರೆ. ಸೂಕ್ತ ಶಿಸ್ತು ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಒಂದೆರಡು ದಿನದಲ್ಲಿ ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.

ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ಮಾತನಾಡಿ, ಕೊರೊನಾ ಕಡಿವಾಣಕ್ಕೆ ನೌಕರರ ಪರಸ್ಪರ ಹೊಂದಾಣಿಕೆ ಅತಿಮುಖ್ಯ. ಆದರೂ, ಈ ರೀತಿ ಘಟನೆ ಬೇಸರ ತರುವಂತಹದ್ದು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೌಕರರ ಸಂಘದ ದೂರನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.