ADVERTISEMENT

ದೊಡ್ಡಬಳ್ಳಾಪುರ | ಕೊರೊನಾ: ಮಂತ್ರವಾದಿಗೂ ಕ್ವಾರಂಟೈನ್‌ !

ಪ್ರಥಮ ಬಾರಿಗೆ ದೊಡ್ಡಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ಇಬ್ಬರಿಗೆ ಕೋವಿಡ್‌-19 ಧೃಡ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 9:48 IST
Last Updated 28 ಜೂನ್ 2020, 9:48 IST
ಚೈತನ್ಯನಗರವನ್ನು ಶುಕ್ರವಾರ ರಾತ್ರಿಯಿಂದಲೇ ಬ್ಯಾರಿಕೇಡ್‌ಗಳನ್ನು ಹಾಕಿ ಸೀಲ್‌ಡೌನ್‌ ಮಾಡಲಾಗಿದೆ
ಚೈತನ್ಯನಗರವನ್ನು ಶುಕ್ರವಾರ ರಾತ್ರಿಯಿಂದಲೇ ಬ್ಯಾರಿಕೇಡ್‌ಗಳನ್ನು ಹಾಕಿ ಸೀಲ್‌ಡೌನ್‌ ಮಾಡಲಾಗಿದೆ   

ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯ ಚೈತನ್ಯನಗರದಲ್ಲಿ ವಾಸವಾಗಿದ್ದ ಒಂದೇ ಕುಟುಂಬದ ಇಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ಧೃಡಪಟ್ಟಿದೆ. ಶುಕ್ರವಾರ ರಾತ್ರಿಯಿಂದಲೇ ಈ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ.

48 ಹಾಗೂ 42ವಯಸ್ಸಿನ ದಂಪತಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಸುಮಾರು 60 ವರ್ಷದ ಸೋಂಕಿತರ ಸಂಬಂಧಿ ಮಹಿಳೆಯೊಬ್ಬರು ತೀವ್ರ ಜ್ವರದಿಂದಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಸೋಂಕಿತರು ಆಸ್ಪತ್ರೆಗೆ ಹೋಗಿ ಬಂದಿದ್ದರ ಹಿನ್ನೆಲೆಯಲ್ಲಿ ಸೋಂಕು ಹರಡಿರಬಹುದು ಎಂದು ಶಂಕಿಸಲಾಗಿದೆ. ‌

ಸೋಂಕಿತ ಇಬ್ಬರನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕುಟುಂಬದ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಚೈತನ್ಯ ನಗರದ 7ನೇ ಕ್ರಾಸ್‌ವರೆಗಿನ ಎಲ್ಲ ರಸ್ತೆಗಳನ್ನು ಶುಕ್ರವಾರ ರಾತ್ರಿಯಿಂದಲೇ ಸೀಲ್‍ಡೌನ್ ಮಾಡಲಾಗಿದೆ. ಶನಿವಾರ ಬೆಳಿಗ್ಗೆ ಪೌರ ಕಾರ್ಮಿಕರು ಇಡೀ ಪ್ರದೇಶಕ್ಕೆ ಔಷಧಿ ಸಿಂಪಡಣೆ ಮಾಡಿದರು.

ADVERTISEMENT

ತಹಶೀಲ್ದಾರ್ ಟಿ.ಎಸ್.ಶಿವರಾಜ್, ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಗರದ ಜನರಲ್ಲಿ ಆತಂಕ: ಈ ಪ್ರಕರಣದಿಂದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕವಿರುವ ವ್ಯಕ್ತಿಗಳು ಹೆಚ್ಚಾಗುವ ಸಂಭವ ಇದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ನಡುವೆ ಚೈತನ್ಯ ನಗರದಿಂದ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಗೆ ಶನಿವಾರ ಬೆಳಿಗ್ಗೆ ಹೋಗಿದ್ದ ಕಾರ್ಮಿಕರನ್ನು ವಾಪಸು ಕಳುಹಿಸಲಾಗಿದೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಿರಾತಂಕ: ಕೊರೊನಾ ಹಿನ್ನೆಲೆಯಲ್ಲಿ ಚೈತನ್ಯ ನಗರ ಸೀಲ್ ಡೌನ್ ಮಾಡಲಾಗಿತ್ತು. ಆದರೆ, ಶನಿವಾರ ಎಸ್‍ಎಸ್‍ಎಲ್‍ಸಿ ಗಣಿತ ಪರೀಕ್ಷೆ ಬರೆಯಬೇಕಾಗಿದ್ದ ಈ ವ್ಯಾಪ್ತಿಯಲ್ಲಿದ್ದ ಮೂರು ಜನ ವಿದ್ಯಾರ್ಥಿಗಳನ್ನು ಗುರುತಿಸಿ, ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ತಿಳಿಸಿದರು.

ಕೋವಿಡ್‌-19 ಆಸ್ಪತ್ರೆ ಆರಂಭ: ಬೆಂಗಳೂರಿನ ವಿಕ್ಟೋರಿಯಾ ಮತ್ತು ವಾಣಿ ವಿಲಾಸ್ ಆಸ್ಪತ್ರೆಗಳಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಸರ್ಕಾರದ ಆದೇಶದ ಮೇರೆಗೆ ಈ ಹಿಂದಿನ ಸಿದ್ಧತೆಯಂತೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‌-19 ಚಿಕಿತ್ಸೆ ಶನಿವಾರದಿಂದ ಆರಂಭವಾಗಿದೆ. ನಗರದ ಇಬ್ಬರು ಸೋಂಕಿತರಿಗೂ ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಸ್ವಯಂಪ್ರೇರಿತ ಕ್ವಾರಂಟೈನ್‌ಗೆ ಒಳಗಾಗಲು ಸಲಹೆ
ಚೈತನ್ಯನಗರದಲ್ಲಿ ಕೋವಿಡ್‌-19 ಸೋಂಕು ಧೃಡಪಟ್ಟಿರುವ ವ್ಯಕ್ತಿಗೆ ಒಂದು ವಾರದಿಂದ ತೀವ್ರತರನಾದ ಕೆಮ್ಮು ಇತ್ತು. ವೈದ್ಯರ ಔಷಧಿಗೆ ಕೆಮ್ಮು ವಾಸಿಯಾಗದ ಹಿನ್ನೆಲೆಯಲ್ಲಿ ಪರಿಚಿತ ಮಂತ್ರವಾದಿಗಳಲ್ಲಿಗೆ ಹೋಗಿ ಗಂಟಲಿನ ಕಿರು ನಾಲಿಗೆ ಹೊತ್ತಿಸಿಕೊಂಡಿದ್ದರು. ಹೀಗಾಗಿ ಮಂತ್ರವಾದಿ ಸೇರಿದಂತೆ ಮನೆಯಲ್ಲಿನ ಎಲ್ಲರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಸೋಂಕಿತರ ಒಡನಾಟದಲ್ಲಿದ್ದ ಎಲ್ಲರೂ ಸ್ವಯಂಪ್ರೇರಿತವಾಗಿ ಕ್ವಾರಂಟೈನ್‌ಗೆ ಒಳಪಡಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

ಜನರ ಓಡಾಟ ಕಡಿಮೆ
ಚೈತನ್ಯನಗರದಲ್ಲಿ ಇಬ್ಬರಿಗೆ ಕೋವಿಡ್‌-19 ಧೃಡಪಟ್ಟ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಗರದ ಮಾರುಕಟ್ಟೆ ಪ್ರದೇಶ, ಬಸ್‌ ನಿಲ್ದಾಣ, ಹೋಟೆಲ್‌ಗಳಲ್ಲಿ ಜನರ ಓಡಾಟ ಕಡಿಮೆಯಾಗಿತ್ತು. ಲಾಕ್‌ಡೌನ್‌ ಸಡಿಲಿಕೆ ನಂತರ ಅಂತರ ಕಾಪಾಡುವುದು, ಮಾಸ್ಕ್‌ ಧರಿಸುವುದು ಸೇರಿದಂತೆ ಎಲ್ಲವನ್ನು ಮರೆತಿದ್ದ ಜನ ಶನಿವಾರ ರಸ್ತೆಯಲ್ಲಿ ತಿರುಗಾಡುತ್ತಿದ್ದ ಪ್ರತಿಯೊಬ್ಬ ವ್ಯಕ್ತಿಗಳು ಮಾಸ್ಕ್‌ ಧರಿಸಿದ್ದು ಕಂಡು ಬಂತು. ವಾಯು ವಿವಾರಕ್ಕೆ ಗುಂಪು ಗುಂಪಾಗಿ ಹೋಗುತ್ತಿದ್ದವರ ಸಂಖ್ಯೆಯೂ ಕಡಿಮೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.