
ಆನೇಕಲ್: ಮಳೆ ಬಂದರೆ ಸಾಕು ಎಂದು ಪ್ರಕೃತಿಯನ್ನು ಬೇಡುತ್ತಿದ್ದ ರೈತರು, ಮಳೆ ಬಾರದಿದ್ದರೆ ತಮ್ಮ ರಾಗಿ ಫಸಲು ಕೈ ಸೇರುತ್ತದೆ. ಒಂದು ವಾರ ಮಳೆ ಬಾರದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ತಾಲ್ಲೂಕಿನಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಪರಿಣಾಮ ವಿವಿಧೆಡೆ ರಾಗಿ ಬೆಳೆಯು ನೆಲಕಚ್ಚಿದೆ. ರೈತರು ಮೂರ್ನಾಲ್ಕು ತಿಂಗಳಿನಿಂದ ಕಷ್ಟಪಟ್ಟು ಬೆಳೆದಿರುವ ಬೆಳೆ ಸಂರಕ್ಷಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ.
ಒಂದು ಎಕರೆ ಪ್ರದೇಶದಲ್ಲಿ ರಾಗಿ ಬೆಳೆಯಲು ಉಳುವೆ, ಗೊಬ್ಬರ, ಬೇಸಾಯ, ಕಳೆ ತೆಗೆಯುವುದು ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗಾಗಿ ₹20 ಸಾವಿರ ಖರ್ಚು ತಗುಲುತ್ತದೆ. ಕಷ್ಟಪಟ್ಟು ಬೆಳೆದಿದ್ದ ಬೆಳೆ ಹುಲುಸಾಗಿ ಬೆಳೆದಿತ್ತು. ಆದರೆ ಮಳೆಯ ಪ್ರಮಾಣ ಹೆಚ್ಚಾದ್ದರಿಂದ ರಾಗಿ ನೆಲಕಚ್ಚಿದೆ.
ಎಕರೆಗೆ 12 ಕ್ವಿಂಟಾಲ್ ರಾಗಿ ಬೆಳೆ ಫಸಲು ನೀಡಬೇಕಿತ್ತು. ಮಳೆಯಿಂದ ಒಟ್ಟು ಬಿತ್ತನೆಯಲ್ಲಿ ಒಂದು ಎಕರೆ ರಾಗಿ ಫಸಲು ಹಾನಿಯಾಗಿದೆ. ಮಳೆಯಿಂದ ನೆಲಕ್ಕೆ ಬಾಗಿದ ರಾಗಿ ಬೆಳೆಯನ್ನು ಆಗೆಯೇ ಬಿಟ್ಟಿದ್ದು, ಮುಂದಿನ ಆರೇಳು ದಿನ ಮಳೆಯಾಗದಿದ್ದರೆ ರಾಗಿ ರೈತರು ಕೈಹಿಡಿಯಲಿದೆ. ಇದರ ನಡುವೆ ಮಳೆ ಸುರಿದರೆ ರಾಗಿ ಕೈಸೇರುವುದಿಲ್ಲ ಎನ್ನುತ್ತಾರೆ ರೈತರು.
ಆನೇಕಲ್ ತಾಲ್ಲೂಕು ರಾಗಿಯ ಕಣಜ ಎಂದೇ ಪ್ರಸಿದ್ಧಿ ಪಡೆದಿದೆ. ಆದರೆ ಸರಿಯಾದ ಸಮಯದಲ್ಲಿ ಮಳೆ ಬಾರದೆ ರಾಗಿಯ ಫಸಲು ಕಡಿಮೆಯಾಗಿದೆ. ಈಗ ಕಟ್ಟಿರುವ ಫಸಲನ್ನು ಮಳೆಯಿಂದ ರಕ್ಷಣೆ ಮಾಡಿಕೊಳ್ಳಲು ಆಲೋಚನೆ ಮಾಡುತ್ತಿದ್ದಾರೆ.
ಕಸಬಾ ಹೋಬಳಿಯಲ್ಲಿ ಅಕ್ಟೋಬರ್‌ನಲ್ಲಿ 161.2ಮಿ. ಮೀ ಮಳೆಯಾಗಿದೆ. ನವೆಂಬರ್‌ನ ಮೊದಲ ವಾರದಿಂದಲೂ ತುಂತುರ ಮಳೆ ಮತ್ತು ಮೋಡದ ವಾತಾವರಣ ಇದೆ. ಕಾರ್ಮೋಡ ಕವಿದಂತೆ ರೈತರಲ್ಲಿ ಆತಂಕ ಮೂಡುತ್ತಿದೆ.
ತಾಲ್ಲೂಕಿನ ವಿವಿಧೆಡೆ ಎಂಆರ್ 1 ಮತ್ತು ಎಂಆರ್–6 ತಳಿಯನ್ನು ಬೆಳೆಯಲಾಗಿದೆ. ಎಂಸಿ 365, ಜಿಪಿಯು 28, ಬೊಂಡಾರಾಗಿ 9-11 ರಾಗಿಯನ್ನು ಅಲ್ಲಲ್ಲಿ ಬೆಳೆಯಲಾಗಿದೆ. ಕಸಬಾ ಹೋಬಳಿಯ ಬಹುತೇಕ ರೈತರು ತಮ್ಮ ಇತರೆ ಕೃಷಿಯೊಂದಿಗೆ ರಾಗಿ ಬೆಳೆಯುವುದು ವಾಡಿಕೆಯಾಗಿದೆ.
ಮಳೆ ಬಂದರೂ ಕಷ್ಟ ಬಾರದಿದ್ದರೂ ಕಷ್ಟ. ಇಂತಹ ಪರಿಸ್ಥಿತಿಯಲ್ಲಿದ್ದಾರೆ ಆನೇಕಲ್ ರೈತರು. ನೆಲಕಚ್ಚಿರುವ ರಾಗಿಯನ್ನು ಕಟಾವು ಮಾಡಲು ಯಂತ್ರಗಳನ್ನು ಕೃಷಿ ಇಲಾಖೆ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಮೊಳಕೆ ಹೊಡೆಯಲಿದೆ...
ಆನೇಕಲ್ ತಾಲ್ಲೂಕಿನಲ್ಲಿ ರಾಗಿಯು ಉತ್ತಮವಾಗಿ ಬಂದಿದೆ. ಒಂದು ವಾರ ಮಳೆ ಬಾರದಿದ್ದರೆ ರಾಗಿ ಕಟಾವು ಮಾಡಬಹುದಾಗಿದೆ. ಒಂದು ವೇಳೆ ಮಳೆ ಬಂದರೆ ನೆಲಕ್ಕೆ ಬಾಗಿರುವ ರಾಗಿ ಮೊಳಕೆ ಹೊಡೆಯಲಿದೆ. ಮಳೆ ಮುಂದುವರೆದರೆ ತೇವಾಂಶ ಜಾಸ್ತಿಯಾಗಿ ರಾಗಿ ಕೊಳೆಯಲಿದೆ. ಇದರಿಂದ ರೈತರು ಹಾಕಿದ ಬಂಡವಾಳವು ಕೈ ತಪ್ಪಲಿದೆ.ಚಂದ್ರಶೇಖರ್, ಆನೇಕಲ್ ರೈತ
ಮಳೆ ಹೆಚ್ಚಾದರೂ ಮಳೆ ಕಡಿಮೆಯಾದರೂ ಬೆಂಕಿ ರೋಗ ಕಾಣಿಸಿಕೊಳ್ಳಲಿದೆ. ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ.ಇನ್ನೂ ಒಂದು ವಾರದಲ್ಲಿ ಬಾರದಿದ್ದರೆ ಹಾಕಿದ ಬಂಡವಾಳ ಉಳಿಸಿಕೊಳ್ಳಬಹುದು.ಚಂದ್ರಶೇಖರ್, ಆನೇಕಲ್ ರೈತ
ಕೃಷಿ ಆರಂಭ ಮಾಡಿದ ದಿನದಿಂದಲೂ ಇಂತಹ ರಾಗಿ ನೋಡಿಲ್ಲ. ಆದರೆ ಮಳೆ ಮತ್ತು ಭಾರಿ ಗಾಳಿಯಿಂದ ರಾಗಿ ಬೆಳೆ ನೆಲಕಚ್ಚಿದೆ. ಆದರೂ ಮುಂದಿನ ಒಂದು ವಾರ ಮಳೆ ಬಿಡುವು ನೀಡಿದರೆ ಉತ್ತಮ ರಾಗಿಯಾಗುವ ನಿರೀಕ್ಷೆಯಿದೆನಾಗರಾಜು, ರೈತ, ಚಿಕ್ಕಹೊಸಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.