
ಹೊಸಕೋಟೆ: ತಾಲ್ಲೂಕಿನಾದ್ಯಂತ ವಾಡಿಕೆಗಿಂತಲೂ ಹೆಚ್ಚಿನ ಮಳೆ ಕಳೆದ ತಿಂಗಳಲ್ಲಿ ಸುರಿದ ಪರಿಣಾಮ ಮತ್ತು ಕೆಲವೆಡೆ ಬೆಂಕಿ ರೋಗ ತಗುಲಿ ರಾಗಿ ಬೆಳೆ ನೆಲಕಚ್ಚಿದೆ. ಇದರ ನಡುವೆ ತೆನೆ ಕಟ್ಟುವ ಹಂತದಲ್ಲಿ ಮಳೆ ಕೈಕೊಟ್ಟರುವುದರಿಂದ ರೈತರಲ್ಲಿ ಮತ್ತೆ ಆತಂಕ ಮೂಡಿಸಿದೆ.
ರಾಜ್ಯ ಸರ್ಕಾರ ರಾಗಿ ಖರೀದಿಗೆ ಬೆಂಬಲ ಹೆಚ್ಚಿಸಿದ್ದರಿಂದ ತಾಲ್ಲೂಕಿನಲ್ಲಿ ಕಳೆದ ವರ್ಷಕ್ಕಿಂತ ಈ ಸಾಲಿನಲ್ಲಿ ಹೆಚ್ಚಿನ ಪ್ರಯಾಣದಲ್ಲಿ ರಾಗಿ ಬೆಳೆಯಲಾಗಿದೆ.
ಮಳೆಯಾಶ್ರಿತ 10 ಸಾವಿರ ಹೆಕ್ಟೇರ್, ನೀರಾವರಿ 215 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಆದರೆ ಅತಿವೃಷ್ಟಿ–ಅನಾವೃಷ್ಟಿಯಿಂದ ಹಲವೆಡೆ ರಾಗಿ ಬೆಳೆಗೆ ಹಾನಿಯಾಗಿದೆ.
ತಾಲ್ಲೂಕಿನಾದ್ಯಂತ ಶೇ 70ರಷ್ಟು ಮಳೆಯಾಶ್ರಿಯ ಹಾಗೂ ಶೇ 30 ರಷ್ಟು ನೀರವಾರಿಯಲ್ಲಿ ರಾಗಿ ಬೆಳೆಯಲಾಗಿದೆ. ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆ ಮಾಡಿರುವ ರಾಗಿ ಬೆಳೆ ತೆನೆ ಕಟ್ಟಲು ಮಳೆಗಾಗಿ ಕಾಯುತ್ತಿದ್ದರೆ, ನೀರಾವರಿಯ ರಾಗಿ ಬೆಳೆಗಾರರು ಮಳೆ ಬಂದರೆ ತೆನೆ ಕಚ್ಚಿದ ರಾಗಿ ನಾಶಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಾಕಿದ ಬಂಡವಾಳ ಕೈಗೆ ಬರುತ್ತೋ, ಇಲ್ಲವೋ ಎನ್ನುವ ಅತಂಕ ತಾಲ್ಲೂಕಿನ ರಾಗಿ ಬೆಳೆಗಾರರಲ್ಲಿ ಕಾಡಲಾರಂಭಿಸಿದೆ. ಹೆಚ್ಚು ಮಳೆ ಸುರಿದರೆ ರಾಗಿ ತೆನೆ ನೆಲಕಚ್ಚಿ ಕೊಳೆತು ಹೋಗುತ್ತದೆ. ಇದರಿಂದ ಬೆಳೆ ನಷ್ಟ ಅಲ್ಲದ ಮೇವಿನ ಕೊರತೆಯೂ ಕಾಡುತ್ತದೆ. ಶೇ 70 ರಷ್ಟು ರೈತರು ಮಳೆ ಕೈಕೊಟ್ಟರೆ ಬೆಳೆಯೂ ಕೈಕೊಟ್ಟಂತೆ ಎಂಬ ಆತಂಕದಲ್ಲಿದ್ದಾರೆ.
ಈ ಸಂಕಷ್ಟ ರಾಗಿ ಬೆಳೆಗೆ ಮಾತ್ರವಲ್ಲ ಜೋಳ, ಹಲಸಂದಿ, ತೊಗರಿ, ಹೂ, ಮಾವು ಮತ್ತಿತರ ಬೆಳೆಗಾರರಿಗೂ ಕಾಡುತ್ತಿದೆ.
ತಾಲ್ಲೂಕಿನಲ್ಲಿ ಮಳೆಯಿಂದ ರಾಗಿ ನೆಲಕಚ್ಚಿರುವ ಕಾರಣ ರೈತರು ನಷ್ಟಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಷ್ಟಕ್ಕೆ ಒಳಗಾಗುವ ರೈತರಿಗೆ ಪರಿಹಾರ ದೊರಕಿಸಲು ಕ್ರಮಕೈಗೊಳ್ಳಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಬೆಂಕಿ ರೋಗ: ಗಾಯದ ಬರೆ
ಹೊಸಕೋಟೆ ತಾಲ್ಲೂಕಿನಲ್ಲಿ ಕೆಲವು ಹಳ್ಳಿಗಳಲ್ಲಿ ರಾಗಿಗೆ ಬೆಂಕಿ ರೋಗ ಕಾಣಿಸಿಕೊಂಡಿದ್ದು ಬೆಳೆಗಾರರನ್ನು ಮತ್ತಷ್ಟು ಘಾಸಿಗೊಳಿಸಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ರೋಗವನ್ನು ಹೇಗ ತಡೆಯಬೇಕು. ಇದಕ್ಕೆ ಮದ್ದೇನು ಎಂಬುದು ತಿಳಿಯುತ್ತಿಲ್ಲ. ಕೃಷಿ ಇಲಾಖೆಯವರು ಈ ಬಗ್ಗೆ ಗಮನ ಹರಿಸಿಲ್ಲ. ಸಾಲ ಮಾಡಿ ರಾಗಿ ಬಿತ್ತನೆ ಮಾಡಿದ್ದೇವೆ. ಒಂದೆಡೆ ಅತಿವೃಷ್ಟ–ಅನಾವೃಷ್ಟಿ ಮತ್ತೊಂದಡೆ ರೋಗ. ಇದರಿಂದ ರೈತರು ನಲುಗಿ ಹೋಗಿದ್ದೇವೆ ಎನ್ನುತ್ತಾರೆ ರೈತರು.
ರೋಗ ಕಾಣಿಸಿಕೊಳ್ಳಲು ಕಾರಣ?
ಯಾವ ತಿಂಗಳಲ್ಲಿ ಯಾವ ಮಳೆಗೆ ಯಾವ ಬೀಜ ಬಿತ್ತಿದರೆ ಬೆಂಕಿ ರೋಗದಂತಹ ಸಂಕಷ್ಟದಿಂದ ಪಾರಗಬಹುದು ಎಂಬುದಕ್ಕೆ ಜಿಕೆವಿಕೆಯಂತಹ ಸಂಸ್ಥೆಗಳು ಸಾಕಷ್ಟು ಅಧ್ಯಯನ ನಡೆಸಿವೆ. ರೈತರು ಇಂತಹ ಸಂಸ್ಥೆಗಳ ನೆರೆವೂ ಪಡೆಯದೆ ಹತ್ತಿರದಲ್ಲೇ ಸಿಗುವ ಬಿತ್ತನೆ ಬೀಜ ಬಿತ್ತಿದರೆ ಹೀಗೆ ಆಗುತ್ತದೆ.
ರಾಗಿಯ ಎಂಆರ್ 1 ಎಂಆರ್ ಇಂಡಫ್ 5 ನಂತಹ ತಳಿಗಳು ಮಾತ್ರವೇ ಬೆಂಕಿರೋಗಕ್ಕೆ ತುತ್ತಾಗುತ್ತವೆ ಎಂದು ಓಬಳಾಪುರ ಗ್ರಾಮದ ರೈತ ಮುಖಂಡ ಪ್ರಭುದೇವಯ್ಯ ತಿಳಿಸಿದರು.
ಜಿಪಿಯು 28 ನಂತಹ ಗುಣಮ್ಮಟದ ತಳಿಯ ಬಿತ್ತನೆ ಬೀಜ ಬಳಸಿದರೆ ಬೆಂಕಿ ರೋಗ ತಗುಲುವುದಿಲ್ಲ. ಇಂತಹ ವಿಷಯಗಳನ್ನು ರೈತರಿಗೆ ತಿಳಿಸುವುದು ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಇದಕ್ಕೆ ಸಂಬಂದಪಟ್ಟ ಇಲಾಖೆಗಳ ಆದ್ಯಕರ್ತವ್ಯ. ಅಷ್ಟೇ ಜವಾಬ್ದಾರಿ ರೈತರ ಮೇಲೂ ಇದೆ. ಇಲಾಖೆ ಬಳಿ ಹೋಗಿ ಬರುಲು ನೂರು ಇನ್ನೂರು ಖರ್ಚಾಗುತ್ತೆ ಎಂದು ಸಮರ್ಪಕ ಮಾಹಿತಿ ಪಡೆಯದೆ ಬೆಳೆ ಬಿತ್ತನೆ ಮಾಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಬೆಳೆ ವಿಮೆ ಸಮರ್ಪಕವಾಗಿ ಸಿಗುವಂತೆ ಕೃಷಿ ಇಲಾಖೆ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬೇಡಿಕೆಗಿಂತ ಹೆಚ್ಚು ರಸಗೊಬ್ಬರ ಬಳಕೆಯೇ ಕಾರಣ
ರೈತರು 1 ಎಕರೆಗೆ 10 ಕೆ.ಜಿ ಮಾತ್ರ ಯೂರಿಯಾ ಹಾಕಬೇಕು. ಆದರೆ ಒಂದು ಚೀಲದಷ್ಟು ಯೂರಿಯಾ ಹಾಕಲಾಗಿದೆ. ಇದರಿಂದ ತಾಲ್ಲೂಕಿನ ಕೆಲವೆಡೆ ರಾಗಿ ನೆಲಕಚ್ಚಿದೆ. ನೆಲೆ ಕಚ್ಚಿರುವುದೇ ನಷ್ಟ ಅಲ್ಲ ರೈತರು ಅತಿಯಾದ ಲಾಭದ ದೃಷ್ಟಿಯಲ್ಲಿ ಬೆಳೆಗಳಿಗೆ ಬೇಡಿಕೆಗಿಂತ ಹೆಚ್ಚು ಗೊಬ್ಬರ ಕೊಟ್ಟರೆ ಬೆಳೆ ನಷ್ಟವಾಗುವುದು ಸಹಜ– ಚಂದ್ರಪ್ಪ, ಸಹಾಯಕ ನಿರ್ದೇಶಕರು ಕೃಷಿ ಇಲಾಖೆ
ಮಳೆ ಬಂದರೂ ಕಷ್ಟ ಬಾರದಿದ್ದರೂ ಕಷ್ಟ
ತಾಲ್ಲೂಕಿನಲ್ಲಿ ಎರಡು ಹಂತದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಒಂದು ಬೆಳೆ ಕಟಾವು ಹಂತಕ್ಕೆ ಬಂದಿದ್ದು ಕಳೆದ ವಾರ ಸುರಿದ ಮಳೆ ಮತ್ತು ಗಾಳಿಗೆ ನೆಲಕ್ಕೆ ಕಚ್ಚಿದೆ. ಇನ್ನೋದು ಬೆಳೆ ಈಗತಾನೆ ತೆನೆ ಹಾಲುಕಟ್ಟುತ್ತಿದೆ. ಈಗ ತಾಲ್ಲೂಕಿನ ರಾಗಿ ರೈತರ ಪರಿಸ್ಥಿತಿ ಹೇಗಿದೆ ಎಂದರೆ ಒಬ್ಬರಿಗೆ ಮಳೆ ಬಂದರೆ ಬೆಳೆ ನಷ್ಟ ಮತ್ತೊಬ್ಬರಿಗೆ ಮಳೆ ಬರದಿದ್ದರೆ ನಷ್ಟ ಅನುಭವಿಸುವಂತಹ ಅತಂತ್ರ ಸ್ಥಿತಿ ಇದೆ.– ಹರೀಶ್ ಬನಹಳ್ಳಿ, ರೈತ ನಂದಗುಡಿ