ADVERTISEMENT

ದೊಡ್ಡಬಳ್ಳಾಪುರ | ಮಳೆ ಕೊರತೆ: ಚುರುಕಾಗದ ಕೃಷಿ ಚಟುವಟಿಕೆ

ನಟರಾಜ ನಾಗಸಂದ್ರ
Published 24 ಜುಲೈ 2025, 1:47 IST
Last Updated 24 ಜುಲೈ 2025, 1:47 IST
<div class="paragraphs"><p><strong>ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿ ಗ್ರಾಮದ ರೈತರು ರಾಗಿ ಬಿತ್ತನೆಗೆ ಅಂತಿಮ ಸಿದ್ದತೆಯಲ್ಲಿ ನಿರತರಾಗಿರುವುದು</strong></p></div>

ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿ ಗ್ರಾಮದ ರೈತರು ರಾಗಿ ಬಿತ್ತನೆಗೆ ಅಂತಿಮ ಸಿದ್ದತೆಯಲ್ಲಿ ನಿರತರಾಗಿರುವುದು

   

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ನಾಲ್ಕು ದಿನಗಳಿಂದ ಈಚೆಗೆ ಚದುರಿದಂತೆ ಮಳೆ ಬೀಳಲು ಆರಂಭವಾಗಿದ್ದು ರಾಗಿ, ಮುಸುಕಿನಜೋಳದ ಬಿತ್ತನೆ ಪ್ರಾರಂಭವಾಗಿದೆ.

ಇಡೀ ತಾಲ್ಲೂಕಿನಾಧ್ಯಂತ ವ್ಯಾಪಕವಾಗಿ ಮಳೆಯಾಗದೆ ಹಿನ್ನೆಲೆಯಲ್ಲಿ ಬಿತ್ತನೆ ಚಟುವಟಿಕೆ ಚುರುಕು ಪಡೆದುಕೊಂಡಿಲ್ಲ. ಮುಂಗಾರಿನಲ್ಲಿ ಇಲ್ಲಿಯವರೆಗೆ ಒಟ್ಟಾರೆ ತಾಲ್ಲೂಕಿನಲ್ಲಿ ಶೇ 7.38ರಷ್ಟು ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಜೂನ್‌ ಕೊನೆಯ ಹಾಗೂ ಜುಲೈ ಮೊದಲ ವಾರದಲ್ಲೇ ಪ್ರತಿ ವರ್ಷ ಬಿತ್ತನೆ ಚಟುವಟಿಕೆಗಳು ನಡೆಯುತ್ತದೆ. ಈ ಬಾರಿ ಜೂನ್‌ ಎರಡನೇ ವಾರದಿಂದಲು ಬಿತ್ತಗೆ ಅಗತ್ಯ ಇರುವಷ್ಟು ಹದವಾದ ಮಳೆ ಆಗಿಲ್ಲ. ಇದರಿಂದ ಬಿತ್ತನೆ ತಡವಾಗಿ ಆರಂಭವಾಗಿದೆ. ಜುಲೈ ತಿಂಗಳಲ್ಲಿ ವಾಡಿಕೆ ಮಳೆ 283 ಮಿ.ಮೀ ಬೀಳಬೇಕು. ಇಲ್ಲಿಯವರೆಗೆ 69.24 ಮೀ.ಮೀ ಮಳೆಯಾಗಿದೆ.

‘ಉಳುಮೆ ಕೆಲಸ ಮುಗಿದಿದೆ. ಭೂಮಿ ತೇವವಾದರೆ ಬಿತ್ತನೆ ಮಾಡುತ್ತೇವೆ. ಮಳೆಯಾಗಿರುವ ಕೆಲವು ಗ್ರಾಮಗಳ ಕಡೆ ಈಗಾಗಲೇ ರಾಗಿ ಬಿತ್ತನೆ ಮಾಡಿದ್ದಾರೆ. ಬಿತ್ತನೆ ರಾಗಿ, ರಸಗೊಬ್ಬರವನ್ನು ಸಿದ್ದಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ಸಾಸಲು ಹೋಬಳಿಯ ಲಕ್ಕೇನಹಳ್ಳಿ ಗ್ರಾಮದ ರೈತ ಮುನಿಯಪ್ಪ.

ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಶ್ರೀರಾಮನಹಳ್ಳಿ ಗ್ರಾಮದ ರೈತರು  ಮುಸುಕಿನಜೋಳ ಬಿತ್ತನೆಗೆ ನೇಗಿಲಿನಿಂದ ಸಾಲುಗಳನ್ನು ಸಿದ್ದ ಮಾಡುವಲ್ಲಿ ನಿರತರಾಗಿರುವುದು

ರಸಗೊಬ್ಬರ, ಬಿತ್ತನೆ ಬೀಜ ಕೊರತೆ ಇಲ್ಲ

ಜಿಲ್ಲೆಯಲ್ಲಿ ಮೂರು ದಿನಗಳಿಂದ ಬಿತ್ತನೆ ಮಾಡುವಷ್ಟು ಮಳೆ ಬೀಳಲು ಆರಂಭವಾಗಿದೆ. ಜಿಲ್ಲೆಯಲ್ಲಿ ಈಗ ಯೂರಿಯಾ 2,787 ಮೆಟ್ರಿಕ್ ಟನ್ ದಾಸ್ತಾನು ಇದೆ. 2,308 ಮೆಟ್ರಿಕ್ ಟನ್ ಬೇಡಿಕೆ ಇದೆ. ಡಿಎಪಿ 972 ಮೆಟ್ರಿಕ್ ಟನ್ ದಾಸ್ತಾನು ಇದೆ. ಬೇಡಿಕೆ ಇರವುದು 1,036 ಮೆಟ್ರಿಕ್ ಟನ್. ಜಿಲ್ಲೆಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ರಾಗಿ, ಮುಸುಕಿನಜೋಳ ಬಿತ್ತನೆಯಾಗುತ್ತದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆಗಾಗಿ ರಾಗಿ, ಮುಸುಕಿನ ಜೋಳ ದಾಸ್ತಾನು ಮಾಡಲಾಗಿದೆ.
ಎ.ಬಿ.ಬಸವರಾಜು, ಜಿಲ್ಲಾಧಿಕಾರಿ

ಮಣ್ಣಿನ ಆರೋಗ್ಯಕ್ಕಾಗಿ ಡಿಎಪಿ ಕಡಿಮೆ ಮಾಡಿ

ಹೊಸಕೋಟೆ ತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯವು ಆರಂಭವಾಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಬೇಕಾದ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳಿಗೆ ಕೊರತೆಯಾಗದಂತೆ ಸೂಕ್ತ ಕ್ರಮ ಕೈಗೊಂಡಿದ್ದೇವೆ. ಡಿಎಪಿ ಗೊಬ್ಬರ ಕೊರತೆ ಇಲ್ಲ. ಆದರೆ ನಾವೇ ಮಣ್ಣಿನ ಆರೋಗ್ಯದ ಹಿತದೃಷ್ಠಿಯಿಂದ ಡಿಎಪಿ ಬಳಕೆ ಕಡಿಮೆ ಮಾಡಿ ಎಂದು ರೈತರಿಗೆ ಸಲಹೆ ನೀಡುತ್ತಿದ್ದೇವೆ. ಒಟ್ಟಿನಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಗುಣವಾಗಿ ನಮ್ಮ ಇಲಾಖೆಯು ಸೂಕ್ತ ಕ್ರಮಗಳನ್ನು ಕೈಗೊಂಡಿದೆ.
ಬಿ.ಸಿ.ಚಂದ್ರಪ್ಪ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ

ಆನೇಕಲ್‌: ಅರ್ಧದಷ್ಟು ಮಾತ್ರ ರಾಗಿ ಬಿತ್ತನೆ

ಆನೇಕಲ್: ರಾಗಿ ತಾಲ್ಲೂಕಿನ ಪ್ರಮುಖ ಬೆಳೆಯಾಗಿದ್ದು, ಶೇ 45ರಷ್ಟು ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. 5,900 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿದ್ದು, ಇದುವರೆಗೆ 2,419 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ನಾಲ್ಕು ರೈತ ಸಂಪರ್ಕ ಕೇಂದ್ರಗಳ ಮೂಲಕ ಇದುವರೆಗೆ 193ಕ್ವಿಂಟಾಲ್‌ ಬಿತ್ತನೆ ರಾಗಿ ಮಾರಾಟವಾಗಿದೆ. ತಾಲ್ಲೂಕಿನ ಒಟ್ಟು 296 ಕ್ವಿಂಟಾಲ್‌ ಬೇಡಿಕೆ ಇದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಇನ್ನೂ 48 ಕ್ವಿಂಟಾಲ್ ಬಿತ್ತನೆ ರಾಗಿ ದಾಸ್ತಾನಿದೆ. ರೈತರಿಗೆ ಅವಶ್ಯಕವಾದ ಬಿತ್ತನೆ ಬೀಜ ದೊರೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.

ಆನೇಕಲ್‌, ಹಾರಗದ್ದೆ, ಸರ್ಜಾಪುರ, ಅತ್ತಿಬೆಲೆ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಅವಶ್ಯಕ ಬಿತ್ತನೆ ಬೀಜ ಪೂರೈಸಲು ಕ್ರಮಮ ವಹಿಸಲಾಗಿದೆ. ತೊಗರಿ, ನೆಲಗಡಲೆ ಬೀಜಗಳ ಬಿತ್ತನೆ ಪೂರ್ಣಗೊಂಡಿದೆ. ರಾಗಿ ಬಿತ್ತನೆ ಮಾತ್ರ ಬಾಕಿ ಉಳಿದಿದೆ. ತಾಲ್ಲೂಕಿನಲ್ಲಿ ಭತ್ತ 20 ಕ್ವಿಂಟಾಲ್‌ ಬೇಡಿಕೆ ಇದೆ. ಅಗತ್ಯದ ಬಿತ್ತನೆ ಭತ್ತ ಲಭ್ಯವಿದೆ ಎಂದು ತಿಳಿಸಿದ್ದಾರೆ.

ಗೊಬ್ಬರದ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಡಿಎಪಿಗೆ ಹೆಚ್ಚಿನ ಬೇಡಿಕೆಯಿದೆ. ಡಿಎಪಿಯನ್ನು ಹೊರತು ಪಡಿಸಿ ಕಾಂಪ್ಲೆಕ್ಸ್‌ ಅಂಶವಿರುವ ಬೇರೆ ಗೊಬ್ಬರ ಬಳಸಲು ಅವಕಾಶವಿದೆ. ರೈತರು ಈ ನಿಟ್ಟಿನಲ್ಲಿ ಗೊಬ್ಬರ ಬಳಕೆ ಮಾಡಬಹುದು ಎಂದು ಸಲಹೆ ಮಾಡಿದರು.

ಡಿಎಪಿ ಬೇಡಿಕೆಗೆ ತಕ್ಕಂತೆ ಸಿಗುತ್ತಿಲ್ಲ

ರೈತರಿಗೆ ಡಿಎಪಿ ಅವಶ್ಯಕವಾದ ಪ್ರಮಾಣದಲ್ಲಿ ದೊರೆಯುತ್ತಿಲ್ಲ. ಡಿಎಪಿ ಗೊಬ್ಬರ ಸರಬರಾಜದ ಒಂದೇ ದಿನದಲ್ಲಿ ಖಾಲಿಯಾಗುತ್ತಿದೆ. ಬೇಡಿಕೆಗೆ ತಕ್ಕಷ್ಟು ಗೊಬ್ಬರ ಪೂರೈಕೆಯಾಗುತ್ತಿಲ್ಲ. ಅಧಿಕಾರಿಗಳು ಡಿಎಪಿಗೆ ಬದಲಾಗಿ ಕಾಂಪ್ಲೆಕ್ಸ್‌ ಗೊಬ್ಬರ ಬಳಸುವಂತೆ ಸೂಚಿಸುತ್ತಾರೆ. ಆದರೆ ರೈತರು ಡಿಎಪಿಗೆ ಹೆಚ್ಚು ಮೊರೆ ಹೋಗುತ್ತಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಡಿಎಪಿ ಗೊಬ್ಬರದ ಪೂರೈಕೆಯನ್ನು ಹೆಚ್ಚು ಮಾಡಬೇಕು ಎಂದು  ತಾಲ್ಲೂಕು ರೈತ ಉತ್ಪಾದಕರ ಸಂಘದ ಅಧ್ಯಕ್ಷ ನಾರಾಯಣ್‌ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.