
ಹೊಸಕೋಟೆ:ಸರ್ಕಾರ ಈ ವರ್ಷ ರಾಗಿ ಬೆಳೆಗೆ ಕ್ವಿಂಟಲ್‌ಗೆ ₹3,486 ಬೆಂಬಲ ಬೆಲೆ ನೀಡುವುದಾಗಿ ಘೋಷಿಸಿದೆ. ಇದರಿಂದ ಪ್ರೇರಿತರಾದ ರೈತರು ತಾಲ್ಲೂಕಿನಲ್ಲಿ 10,420 ಎಕರೆ ಜಮೀನಿನಲ್ಲಿ ರಾಗಿ ಬಿತ್ತನೆ ಮಾಡಿದ್ದಾರೆ. ಜುಲೈ ತಿಂಗಳಲ್ಲಿ 854 ಮಿ.ಮಿ ಸರಾಸರಿಗೆ ಹೋಲಿಸಿದರೆ 814 ಮಿ.ಮಿ ಮಳೆಯಾಯಿತು. ಇದರಿಂದ ಎಕರೆಗೆ 7-8 ಕ್ವಿಂಟಲ್ ರಾಗಿ ಫಸಲು ಬಂದಿದೆ.
ಆದರೆ, ಫಸಲಿನ ಸಂತೋಷಕ್ಕಿಂತಲೂ ಹೆಚ್ಚಿನ ಕಳವಳ ರೈತರನ್ನು ಕಾಡುತ್ತಿದೆ. ಕಾರಣ ಶೇ80ರಷ್ಟು ರೈತರು ಬೆಂಬಲ ಬೆಲೆ ಪಡೆಯಲು ತಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳಲು ಸಮಯದೊಳಗಾಗಿ ಸಾಧ್ಯವಾಗಲಿಲ್ಲ. ನೋಂದಣಿ ಅವಧಿಯೂ ಮುಗಿದಿದೆ. ಸರ್ಕಾರ ಬೆಂಬಲ ಬೆಲೆ ನೋಂದಣಿ ಅವಧಿಯನ್ನು ಮತ್ತೆ ವಿಸ್ತರಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ರಾಗಿ ಕಟಾವಿಗೂ ಮುನ್ನವೇ ನೋಂದಣಿ ಅವಕಾಶ ಕೊಟ್ಟರೆ ಹೇಗೆ?: ನವೆಂಬರ್ ಅಂತ್ಯ ಮತ್ತು ಡಿಸೆಂಬರ್ ಮೊದಲ ವಾರದಲ್ಲಿ ರಾಗಿ ಕಟಾವು ಪ್ರಾರಂಭವಾಯಿತು. ಆದರೆ, ಸರ್ಕಾರ ಕಟಾವಿಗೆ ಒಂದು ತಿಂಗಳ ಮುನ್ನವೇ ನೋಂದಣಿ ಮಾಡಿಸಿಕೊಳ್ಳಲು ಸೂಚಿಸಿತ್ತು. ಆ ಸಮಯದಲ್ಲಿ ತಾಲ್ಲೂಕಿನಲ್ಲಿ ದಟ್ಟ ಮಂಜಿನಿಂದಾಗಿ ರೈತರು ತಮ್ಮ ಬೆಳೆನು ರಕ್ಷಿಸಲು ಹೆಣಗಾಡುತ್ತಿದ್ದರು. ಇದರಿಂದ ಅವರಿಗೆ ನೋಂದಣಿ ಮಾಡಲು ಸಾಧ್ಯವಾಗಲಿಲ್ಲ. ಮತ್ತೆ ಕೆಲವರಿಗೆ ಮಾಹಿತಿ ಇರಲಿಲ್ಲ. ಈ ಮಧ್ಯೆ ಡಿಸೆಂಬರ್ 15ರಂದು ನೋಂದಣಿ ಅವಧಿ ಮುಕ್ತಾಯವಾಯಿತು. ರೈತರು, ಸರ್ಕಾರದ ಈ ಅವಸರದ ನಿರ್ಣಯದಿಂದ ಬಡ ರೈತರು ಸಂಕಟಕ್ಕೆ ಒಳಗಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕೇವಲ 6ಲಕ್ಷ ಕ್ವಿಂಟಲ್ ರಾಗಿಗೆ ಮಾತ್ರ ಬೆಂಬಲ ಬೆಲೆ ನೀಡಲು ನಿಗದಿ ಮಾಡಿತ್ತು. ತಾಲ್ಲೂಕಿನಲ್ಲಿ ಸರ್ವರ್ ತೊಂದರೆ ಮತ್ತಿತರ ತಾಂತ್ರಿಕ ಸಮಸ್ಯೆಯಿಂದ ಕೇವಲ 1,240 ರೈತರು ಮಾತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನೂ ₹9,960 ರೈತರು ನೋಂದಣಿ ಮಾಡಬೇಕಾಗಿದೆ. ಒಟ್ಟು 59,670 ಕ್ವಿಂಟಲ್ ರಾಗಿ ಇನ್ನೂ ಮಾರಾಟವಾಗಿಲ್ಲ. ರಾಗಿಯನ್ನು ಮಾರಲಾಗದಿದ್ದರೆ ಕುಟುಂಬ ನಡೆಸಲು ಸಾಧ್ಯವಿಲ್ಲ ಎನ್ನುತ್ತಾರೆ ರೈತ ರಾಮೇಗೌಡ.
ಸರ್ವರ್ ಸಮಸ್ಯೆ: ನವೆಂಬರ್-ಡಿಸೆಂಬರ್‌ನಲ್ಲಿ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ರಕ್ಷಿಸಲು ನಿರತರಾಗಿದ್ದರು. ಡಿಸೆಂಬರ್ ಮೊದಲ ವಾರದಿಂದ ಎಲ್ಲರೂ ಏಕಕಾಲಕ್ಕೆ ಕೃಷಿ ಕಚೇರಿಗಳಲ್ಲಿ ನೋಂದಣಿ ಮಾಡಲು ಬಂದಾಗ ಸರ್ವರ್ ನಿಧಾನವಾಯಿತು. ತಾಂತ್ರಿಕ ತೊಂದರೆಯಿಂದ ನಿಗದಿತ ಅವಧಿಯೊಳಗೆ ನೋಂದಣಿ ಸಾಧ್ಯವಾಗಲಿಲ್ಲ.
ಕೈಗೆ ಬಂದ ತುತ್ತು ಬಾಯಿಗೆ ಬಂದಂತಿಲ್ಲ: ಸರ್ಕಾರ ನೋಂದಣಿ ಅವಧಿಯನ್ನು ಇನ್ನೂ ವಿಸ್ತರಿಸಿಲ್ಲ. ಈ ಕಾರಣದಿಂದ ರೈತರು ತಕ್ಷಣ ಅವಧಿ ವಿಸ್ತರಣೆ ಮಾಡಬೇಕೆಂದು ಬೇಡಿಕೆ ಸಲ್ಲಿಸಿದ್ದಾರೆ.
ರಾಗಿ ಬೆಳೆಗಾರರ ಮಾಹಿತಿ ನೋಂದಣಿ ರೈತರು; ₹1,240ನೋಂದಣಿಯಾದ ರಾಗಿ; 23,690 ಕ್ವಿಂಟಲ್ನೋಂದಣಿ ಮಾಡಿಸಬೇಕಾದವರು; 9,960ಮಾರಾಟವಾಗಿಲ್ಲದ ರಾಗಿ; 59,670 ಕ್ವಿಂಟಲ್‌ಗೂ ಹೆಚ್ಚು
ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಯಾವತ್ತೂ ಕೂಡ ರೈತರ ಪರವಾಗಿ ನಿಂತಿಲ್ಲ. ನೂಕು ನುಗ್ಗಲಿನಲ್ಲಿ ನಿಂತು ಹೆಸರು ನೊಂದಾಯಿಸಿಕೊಳ್ಳಬೇಕಾಗಿದೆಸತೀಶ್ ರಾಗಿ ಬೆಳೆಗಾರ ಹಳೆಊರು
ಜುಲೈ ತಿಂಗಳಲ್ಲಿ ಮಳೆ ಕೈಕೊಟ್ಟ ಕಾರಣ 10 ಪಲ್ಲ ರಾಗಿ ಆಗೋ ಕಡೆ 7 ರಿಂದ 8 ಪಲ್ಲ ರಾಗಿ ಫಸಲು ಬಂದಿದೆ. ಆದರೆ ಮಾರಾಟದ್ದೆ ದೊಡ್ಡ ಸಮಸ್ಯೆಪ್ರಕಾಶ್ ರಾಗಿ ಬೆಳೆಗಾರ ಜಿನ್ನಗಾರ
ಬೆವರಿಗೆ ತಕ್ಕ ಫಲ ಸಿಗುತ್ತಿಲ್ಲ ದೇಶದಲ್ಲಿ ಶೇ95ರಷ್ಟು ಸಾರ ರಹಿತ ಭೂಮಿ ಹೊಂದಿರುವ ಡೆನ್ಮಾರ್ಕ್ ಸ್ವೀಡನ್ ನ್ಯೂಜಿಲ್ಯಾಂಡ್‌ನಂತಹ ರಾಷ್ಟ್ರಗಳಲ್ಲಿ ಇಂದು ಸಂಶೋಧನಾ ತಂಡಗಳು ಸೆನ್ಸಾರ್ ಡ್ರೋಣ್ ಮೂಲಕ ರೈತರ ಹೊಲಗಳನ್ನು ಬೆಂಗಾವಲಿನಂತೆ ರಕ್ಷಿಸುತ್ತಿವೆ. ಆದರೆ ನಮ್ಮಲ್ಲಿ ರೈತ ತನ್ನ ಬೆವರಿನ ಶ್ರಮದ ಫಲವಾದ ಫಸಲು ಮಾರಾಟ ಮಾಡಲು ಮತ್ತೆ ಬೆವರು ಹರಿಸುವ ದುಃಸ್ಥಿತಿ ಇರುವುದು ದುರಂತ. ನಾಗೇಂದ್ರ ಹಲಸಹಳ್ಳಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.