ADVERTISEMENT

ದೊಡ್ಡಬಳ್ಳಾಪುರದಲ್ಲಿ ರಾಗಿ ಖರೀದಿ ಆರಂಭ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 2:42 IST
Last Updated 14 ಫೆಬ್ರುವರಿ 2026, 2:42 IST
ದೊಡ್ಡಬಳ್ಳಾಪುರದ ಎಪಿಎಂಸಿ ಆವರಣದ ರೈತ ಸಂಪರ್ಕ ಕೇಂದ್ರದಲ್ಲಿ ರಾಗಿ ಖರೀದಿಗೆ ಶಾಸಕ ದೀರಜ್ ಮುನಿರಾಜು ಚಾಲನೆ ನೀಡಿದರು
ದೊಡ್ಡಬಳ್ಳಾಪುರದ ಎಪಿಎಂಸಿ ಆವರಣದ ರೈತ ಸಂಪರ್ಕ ಕೇಂದ್ರದಲ್ಲಿ ರಾಗಿ ಖರೀದಿಗೆ ಶಾಸಕ ದೀರಜ್ ಮುನಿರಾಜು ಚಾಲನೆ ನೀಡಿದರು   

ದೊಡ್ಡಬಳ್ಳಾಪುರ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಿಂದ ತಾಲೂಕಿನಲ್ಲಿ ಬೆಂಬಲ ಬೆಲೆಗೆ ರಾಗಿ ಖರೀದಿ ಪ್ರಕ್ರಿಯೆ ಆರಂಭಗೊಂಡಿದ್ದು, ಈ ಬಾರಿ ನೋಂದಣಿ ಮುಗಿದಿದೆ. ಈಗಾಗಲೇ ನೋಂದಣಿ ಮಾಡಿಕೊಂಡಿರುವ ರೈತರು ಟ್ರ್ಯಾಕ್ಟರ್ ಹಾಗೂ ಇತರೆ ಗೂಡ್ಸ್ ವಾಹನಗಳಲ್ಲಿ ರಾಗಿ ತಂದಿದ್ದಾರೆ.  ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಹೊತ್ತ ಟ್ರ್ಯಾಕ್ಟರ್ ಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂದಿದೆ.

ನಗರದ ಎಪಿಎಂಸಿ ಆವರಣದ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ಶಾಸಕ ಧೀರಜ್ ಮುನಿರಾಜು ರಾಗಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿ, ರಾಗಿ ಖರೀದಿಯಲ್ಲಿ ಹಿಂದಿನ ವರ್ಷಗಳಂತೆ ಗೊಂದಲಗಳಾಗದಂತೆ ವ್ಯವಸ್ಥಿತವಾಗಿ ಖರೀದಿ ಪ್ರಕ್ರಿಯೆ ನಡೆಸಬೇಕಿದೆ. ಮಧ್ಯವರ್ತಿಗಳು ಗುಣಮಟ್ಟವಿಲ್ಲದ ರಾಗಿಯನ್ನು ತಂದು ಹಾಕುವ ಸಂಭವಗಳಿವೆ. ಆದರೆ ರೈತರು ಗುಣಮಟ್ಟದ ರಾಗಿಯನ್ನೇ ತರುತ್ತಾರೆ. ರೈತರ ರಾಗಿಯನ್ನು ತಿರಸ್ಕರಿಸದೇ ಖರೀದಿಸಬೇಕು ಎಂದರು.

ರೈತರು ಸಹ ಗುಣಮಟ್ಟದ ರಾಗಿ ತರಬೇಕಿದೆ. ಖರೀದಿ ವೇಳೆ, ಒಂದು ದಿನಕ್ಕೆ ಎಷ್ಟುಖರೀದಿ ಮಾಡಬಹುದೆಂಬ ಅಂಶಗಳ ಮೇಲೆ ರೈತರಿಗೆ ದೂರವಾಣಿ ಮಾಡಿ ಕರೆಸಿಕೊಳ್ಳಬೇಕಿದೆ. ಗ್ರಾಮ ಪಂಚಾಯಿತಿವಾರು ಕರೆದರೆ ರೈತರಿಗೆ ಸಾಗಾಣಿಕೆ ವೆಚ್ಚ ಕಡಿಮೆಯಾಗುತ್ತದೆ ಎಂದು ಸಲಹೆ ನೀಡಿದರು.

ADVERTISEMENT

ರಾಜ್ಯದಲ್ಲಿ 2025-26ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 60ಲಕ್ಷ ಕ್ವಿಂಟಾಲ್ ರಾಗಿ ಖರೀದಿ ಗುರಿ ಹೊಂದಲಾಗಿದ್ದು, ಈ ಬಾರಿ ರಾಗಿ ಪ್ರತಿ ಕ್ವಿಂಟಾಲ್‌ಗೆ ₹4.886 ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 50 ಕ್ವಿಂಟಾಲ್ ರಾಗಿ ಖರೀದಿಸಲು ಆದೇಶಿಸಲಾಗಿದೆ.

ಸಾರ್ವಜನಿಕ ಆಸ್ಪತ್ರೆ ಆವರಣದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿ ರಾಗಿ ಖರೀದಿ ಮಾಡಲಾಗುತ್ತಿದ್ದು, ನೋಂದಣಿಯಾಗಿರುವ ರೈತರು ತಮಗೆ ನೀಡಿರುವ ಕ್ರಮ ಸಂಖ್ಯೆಯಂತೆ ಖರೀದಿ ಕೇಂದ್ರಕ್ಕೆ ಬಂದು ರಾಗಿ ನೀಡಬೇಕಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರವೀಣ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.