ADVERTISEMENT

ಬೇಸಿಗೆ ಎದುರಿಸಲು ಈಗಲೇ ಸಿದ್ಧತೆ ಆರಂಭಿಸಿ: ಪೌರಾಡಳಿತ ಸಚಿವ ರಹೀಂ ಖಾನ್ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 2:50 IST
Last Updated 14 ಫೆಬ್ರುವರಿ 2026, 2:50 IST
ದೇವನಹಳ್ಳಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ರಹೀಂ ಖಾನ್ ಅಧಿಕಾರಿಗಳಿಗೆ ಸೂಚನೆ ನೀಡಿದರು
ದೇವನಹಳ್ಳಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ರಹೀಂ ಖಾನ್ ಅಧಿಕಾರಿಗಳಿಗೆ ಸೂಚನೆ ನೀಡಿದರು   

ದೇವನಹಳ್ಳಿ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಮುಂಚಿತವಾಗಿ ಸಿದ್ಧತೆ ಕೈಗೊಳ್ಳಬೇಕು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸರ್ಕಾರ ಬಿಡುಗಡೆ ಮಾಡಿರುವ ಅನುದಾನವನ್ನು ಆಯಾ ಆರ್ಥಿಕ ವರ್ಷದಲ್ಲೇ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಅಮೃತ್ ಹಾಗೂ ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.

ADVERTISEMENT

ನಗರೋತ್ಥಾನ ಯೋಜನೆ ಮೂಲತಃ ಮೂರು ವರ್ಷದ ಅವಧಿಗೆ ರೂಪಿತವಾಗಿದ್ದರೂ, ಬಾಕಿ ಉಳಿದಿರುವ ಕಾಮಗಾರಿಗಳ ಹಿನ್ನೆಲೆಯಲ್ಲಿ ಅವಧಿಯನ್ನು ನಾಲ್ಕು ವರ್ಷಗಳಿಗೆ ವಿಸ್ತರಿಸಲಾಗಿದೆ. ರಾಜ್ಯದಾದ್ಯಂತ ಸುಮಾರು 600 ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳಬೇಕಿದ್ದು, ನಗರೋತ್ಥಾನ-5ಕ್ಕೆ ₹5,000 ಕೋಟಿ ಅನುದಾನ ನೀಡುವ ಕುರಿತು ಆರ್ಥಿಕ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಅದಕ್ಕೂ ಮುನ್ನ ನಗರೋತ್ಥಾನ-4ರ ಕಾಮಗಾರಿಗಳನ್ನು ಶೀಘ್ರ ಮುಕ್ತಾಯಗೊಳಿಸುವುದು ಅಗತ್ಯ ಎಂದರು.

ಬೇಸಿಗೆ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ನೀರಿನ ಅಭಾವ ತಲೆದೋರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸಮಸ್ಯೆ ಕಾಣಿಸಬಹುದಾದ ಪ್ರದೇಶಗಳನ್ನು ಗುರುತಿಸಿ ಮುಂಚಿತ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತೆರಿಗೆ ವಸೂಲಾತಿಗೆ ಒತ್ತು: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾಕಿ ಇರುವ ಆಸ್ತಿ, ನೀರು, ಅಂಗಡಿ ಮಳಿಗೆ ಬಾಡಿಗೆ ಹಾಗೂ ವಾಣಿಜ್ಯ ಪರವಾನಗಿ ತೆರಿಗೆಗಳನ್ನು ಶೇ 100ರಷ್ಟು ವಸೂಲಾತಿ ಮಾಡುವಂತೆ ನಿರ್ದೇಶಿಸಿದರು. ದೀರ್ಘಕಾಲದಿಂದ ಒಂದೇ ಪ್ರಮಾಣದಲ್ಲಿ ತೆರಿಗೆ ಪಾವತಿಸುತ್ತಿರುವ ಕಟ್ಟಡಗಳನ್ನು ಸ್ಥಳ ಪರಿಶೀಲನೆ ಮಾಡಿ, ಮಹಡಿಗಳ ಸಂಖ್ಯೆ ಹಾಗೂ ಬಾಡಿಗೆ ವಿವರಗಳನ್ನು ಪರಿಶೀಲಿಸಿ ವಾಸ್ತವ ಸ್ಥಿತಿ ದಾಖಲಿಸುವಂತೆ ತಿಳಿಸಿದರು.

ಇದಕ್ಕೂ ಮುನ್ನ ಅವರು ದೇವನಹಳ್ಳಿ ಪಟ್ಟಣದ ಎಸ್‌ಎಫ್‌ಟಿಪಿ ಘಟಕ ಹಾಗೂ ಸಿಹಿನೀರು ಕೆರೆಯ ನೀರು ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಸಭೆಯಲ್ಲಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಡಾ. ಪಿ.ಎನ್. ರವೀಂದ್ರ, ಜಿಲ್ಲಾಧಿಕಾರಿ ಎ.ಬಿ. ಬಸವರಾಜು, ಸಚಿವರ ಆಪ್ತ ಕಾರ್ಯದರ್ಶಿ ಡಾ. ಮುರಳೀಧರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ರಮೇಶ್, ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷೆ ಸುಮಿತ್ರಾ ಕೆ., ಉಪಾಧ್ಯಕ್ಷ ಎಂ. ಮಲ್ಲೇಶ್, ದೇವನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಶಿವಮೂರ್ತಿ ಸೇರಿದಂತೆ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ದೇವನಹಳ್ಳಿ ಪಟ್ಟಣದ ಎಸ್‌ಎಫ್‌ಟಿಪಿ ಘಟಕ ಹಾಗೂ ಸಿಹಿನೀರು ಕೆರೆಯ ನೀರು ಸಂಸ್ಕರಣಾ ಘಟಕಗಳಿಗೆ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಾಹಿತಿ ಪಡೆದರು

ಇ-ಖಾತಾ ಶಿಬಿರಗಳ ಆಯೋಜನೆ

ಅನಧಿಕೃತ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಮತ್ತು ಬಿ-ರಿಜಿಸ್ಟರ್‌ನಲ್ಲಿ ದಾಖಲಿಸಲು ಅವಕಾಶ ಕಲ್ಪಿಸಿರುವುದರಿಂದ ಸ್ಥಳೀಯ ಸಂಸ್ಥೆಗಳಿಗೆ ಆದಾಯ ಹೆಚ್ಚಳ ಸಾಧ್ಯವಾಗಲಿದೆ. ಸಾರ್ವಜನಿಕರಿಗೆ ಇ-ಖಾತಾ ದೊರೆಯುವುದರಿಂದ ಆಸ್ತಿ ವಹಿವಾಟು ಸುಗಮವಾಗಲಿದೆ. ಈ ನಿಟ್ಟಿನಲ್ಲಿ ವಿಶೇಷ ಅಭಿಯಾನ ಹಾಗೂ ಶಿಬಿರಗಳನ್ನು ಆಯೋಜಿಸಿ ನಿಗದಿತ ಅವಧಿಯಲ್ಲಿ ಇ-ಖಾತಾ ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಸಚಿವ ರಹೀಂ ಖಾನ್ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.