ADVERTISEMENT

ಬಿಬಿಎಂಪಿ ಕಸ ವಿಲೇವಾರಿ ಘಟಕದಿಂದ ಬೆಂಕಿಯಿಂದ ಬಾಣಲೆಗೆ ರಾಜಣ್ಣನ ಬದುಕು

ತೆಂಗಿನ ತೋಟ, ಹೊಲ ನುಂಗಿದ ಬಿಬಿಎಂಪಿ ಕಸ ವಿಲೇವಾರಿ ಘಟಕ

ನಟರಾಜ ನಾಗಸಂದ್ರ
Published 21 ಮಾರ್ಚ್ 2020, 19:45 IST
Last Updated 21 ಮಾರ್ಚ್ 2020, 19:45 IST
ರಾಜಣ್ಣ ಅವರ ಹೊಲದ ಸಮೀಪದ ತಿಮ್ಮರಾಯಸ್ವಾಮಿ ಗುಡಿ ಬಳಿ ಇರುವ ಕುಂಟೆಯ ನೀರು ಕಲುಷಿತಗೊಂಡಿರುವುದು
ರಾಜಣ್ಣ ಅವರ ಹೊಲದ ಸಮೀಪದ ತಿಮ್ಮರಾಯಸ್ವಾಮಿ ಗುಡಿ ಬಳಿ ಇರುವ ಕುಂಟೆಯ ನೀರು ಕಲುಷಿತಗೊಂಡಿರುವುದು   

ದೊಡ್ಡಬಳ್ಳಾಪುರ: ‘ಯುಗಾದಿ ಹಬ್ಬಕ್ಕೆ ನಾಲ್ಕು ತೆಂಗಿನ ಕಾಯಿ ಕಿತ್ತುಕೊಂಡು ಬರೋಣಾಂತತೋಟಕ್ಕೆ ಹೋಗಿ ನೋಡಿದರೆ ಕಾಯಿಗಳೇ ಇಲ್ಲ. ತೆಂಗಿನ ಗರಿಗಳು ಜೋತು ಬಿದ್ದಿವೆ. ಸಪ್ಪೆ ಮೋರೆ ಮಾಡಿಕೊಂಡು ಮನೆ ಕಡೆಗೆ ಬರುವಂತಾಯಿತು’ ಎಂದು ತಣ್ಣೀರನಹಳ್ಳಿ ಗ್ರಾಮದ ರೈತ ರಾಜಣ್ಣ ಅವರು ತಮ್ಮ ತೋಟದ ಕರುಣಾಜನಕ ಸ್ಥಿತಿ ಹೇಳಿಕೊಂಡರು.

ಬಿಬಿಎಂಪಿ ಕಸ ವಿಲೇವಾರಿ ಮಾಡುತ್ತಿರುವ ಎಂಎಸ್‌ಜಿಪಿ ಘಟಕದ ಕಸದ ರಾಶಿಗೆ ಸಮೀಪದಲ್ಲೇ ಇದೆ ರಾಜಣ್ಣ ಅವರ ಹೊಲ ಮತ್ತು ತೋಟ. ಉದ್ಯಮಿಯಾಗಿ ಯಶ ಕಂಡಿದ್ದ ರಾಜಣ್ಣ ಅವರು ವೈದ್ಯರ ಸಲಹೆ ಮೇರೆಗೆ ತಮ್ಮ ಗ್ರಾಮಕ್ಕೆ ಹಿಂದಿರುಗಿ ಯಶಸ್ವಿ ರೈತರಾಗಲು ಅವಿರತ ಶ್ರಮ ಪಟ್ಟಿದ್ದರು. ಆದರೆ, ಹೊಲದ ಬಳಿಯೇ ಬಂದು ಬೀಳುತ್ತಿದ್ದ ಕಸದ ರಾಶಿ ಅವರ ತೋಟವನ್ನು, ಬೆಳೆಯನ್ನು ಮತ್ತು ರೈತನಾಗುವ ಕನಸನ್ನು ನುಂಗಿ ಹಾಕಿತು.

ಮರಳಿ ಹಳ್ಳಿಗೆ:ತಾಲ್ಲೂಕು ಕೇಂದ್ರದಿಂದ ಸುಮಾರು 28 ಕಿ.ಮೀ ದೂರದ ಸಾಸಲು ಹೋಬಳಿಯು ಅಭಿವೃದ್ಧಿ ಹಾಗೂ ಸರ್ಕಾರದ ಸೌಲಭ್ಯಗಳಿಂದ ಇಂದಿಗೂ ವಂಚಿತವಾಗಿಯೇ ಇದೆ. ಇಂತಹ ಹಿಂದುಳಿದ ಹೋಬಳಿಯ ಗ್ರಾಮದ ರೈತನ ಮಗ ರಾಜಣ್ಣ ಉದ್ಯಮಿಯಾಗಿ ಬೆಳೆಯಬೇಕು ಎನ್ನುವ ಕನಸು ಹೊತ್ತು 90 ದಶಕದಲ್ಲೇ ಬೆಂಗಳೂರು ಸೇರಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸ್ನೇಹಿತರೊಂದಿಗೆ ಸೇರಿ ‘ಪ್ಲೇಟಿಂಗ್‌ ಕೋಟ್‌’ ಮಾಡುವ ಸಣ್ಣ ಉದ್ಯಮವನ್ನು ಪ್ರಾರಂಭಿಸಿದರು.

ADVERTISEMENT

ಬೃಹತ್‌ ಕಾರು ತಯಾರಿಕಾ ಕಂಪನಿಗಳಿಗೆ ಹೊರಗುತ್ತಿಗೆ ಪಡೆದು ಪ್ಲೇಟಿಂಗ್‌ ಕೋಟ್‌ಗಳನ್ನು ಮಾಡಿಕೊಡುತ್ತಿದ್ದರು. ಉದ್ಯಮ ಉತ್ತಮವಾಗಿ ನಡೆಯುತ್ತಿದ್ದ ಸಮಯದಲ್ಲೇ ಆರೋಗ್ಯದ ಸಮಸ್ಯೆ ಉಂಟಾದಾಗ ‘ನೀನು ಬದುಕ ಬೇಕು ಎನ್ನುವ ಆಸೆ ಇದ್ದರೆ ಇಂದೇ ಬೆಂಗಳೂರು ಬಿಟ್ಟು ಊರಿಗೆ ಹೋಗು. ಅಲ್ಲಿನ ಉತ್ತಮ ಪರಿಸರದಲ್ಲಿ ಇದ್ದರೆ. ನಿನ್ನ ಆರೋಗ್ಯ ತನ್ನಷ್ಟಕ್ಕೆ ತಾನೆ ಸರಿ ಹೋಗುತ್ತದೆ’ ಎಂದು ವೈದ್ಯರು ಸಲಹೆ ನೀಡಿದರು.

2000ರಲ್ಲಿ ವೈದ್ಯರ ಸಲಹೆ ಮೇರೆಗೆ ಉದ್ಯಮಿಯಾಗುವ ಕನಸು ಬಿಟ್ಟು ತಣ್ಣೀರನಹಳ್ಳಿ ಗ್ರಾಮಕ್ಕೆ ಹಿಂದುರುಗಿದ ರಾಜಣ್ಣ ಪೂರ್ವಿಕರ ಭೂಮಿಯಲ್ಲಿ ಕೊಳವೆ ಬಾವಿ ಕೊರೆಯಿಸಿ ಸಹೋದರರೊಂದಿಗೆ ಬೇಸಾಯ ಆರಂಭಿಸಿದರು. ನೆಮ್ಮದಿಯ ಬದುಕನ್ನು ರೂಪಿಸಿಕೊಂಡಿದ್ದರು.

ನೆಮ್ಮದಿ ಕಸಿದ ಕಸ:‘ನಮ್ಮೂರಿಗೆ ಸಮೀಪದ ಸುಮಾರು ಒಂದುವರೆ ಕಿ.ಮೀ ದೂರದ ಗುಂಡ್ಲಹಳ್ಳಿ ಗ್ರಾಮದ ಸಮೀಪ ಟೆರ್ರಾ ಫಾರಂ ಕಸ ವಿಲೇವಾರಿ ಘಟಕ ಆರಂಭವಾಯಿತು. ಇಲ್ಲಿನ ಕಸದ ರಾಶಿಗೆ ಬೆಂಕಿ ಬಿದ್ದರೆ ಮನೆಗಳಲ್ಲಿ ಇರಲು ಸಾಧ್ಯವಾಗದಷ್ಟು ಪ್ಲಾಸ್ಟಿಕ್‌ ಸುಟ್ಟ ಘಾಟು ಯುಕ್ತ ಹೊಗೆ ನಮ್ಮೂರನ್ನು ಆವರಿಸಿಕೊಳ್ಳಲು ಆರಂಭವಾಯಿತು. ಇದರ ವಿರುದ್ಧ ಸಾಕಷ್ಟು ಹೋರಾಟಗಳನ್ನು ನಡೆಸಿ ನಿಲ್ಲಿಸಲಾಯಿತು’ ಎನ್ನುತ್ತಾ ಅವರ ಕಷ್ಟದ ದಿನಗಳ ಆರಂಭವನ್ನು ರಾಜಣ್ಣ ನೆನೆದರು.

‘ದಾರಿಯಲ್ಲಿ ಹೋಗುವ ಮಾರಮ್ಮನನ್ನು ಮನೆಗೆ ಕರೆದಂತೆ 2016 ರಿಂದ ನಮ್ಮ ಹೊಲದ ಸಮೀಪವೇ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕ ಆರಂಭವಾಯಿತು. ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ರಾಜಕೀಯ ಮೋಸಾದಾಟದಲ್ಲಿ ನಮ್ಮೆಲ್ಲಾ ಹೋರಾಟ, ಪ್ರಯತ್ನಗಳು ಸಫಲವಾಗಲಿಲ್ಲ. ಕಸ ಬರುವುದನ್ನು ನಿಲ್ಲಿಸಲು ಸಾಧ್ಯವಾಗಲೇ ಇಲ್ಲ. ಬಿಬಿಎಂಪಿ ಕಸ ಮಾತ್ರ ಬೆಟ್ಟದಂತೆ ಬೆಳೆಯುತ್ತಲೇ ಹೋಗುತ್ತಿದೆ. ತೆಂಗಿನ ತೋಟವು ಫಲ ನೀಡದಾಗಿದೆ’ ಎಂದು ಅವರು ಹೇಳಿದರು.

ಅಂತರ್ಜಲವೇ ಕಲುಷಿತ:‘ನಮ್ಮ ಹೊಲದ ತಿಮ್ಮರಾಯಸ್ವಾಮಿ ಗುಡಿ ಸಮೀಪದ ಕುಂಟೆಯಲ್ಲಿ ನೀರು ಕುಡಿಯುತ್ತ, ಹೊಲದಲ್ಲಿ ಕೆಲಸ ಮಾಡುತ್ತ, ಗುಡಿ ಸಮೀಪದ ಮರದ ಕೇಳಗೆ ಹಸುಗಳನ್ನು ಕಟ್ಟುತ್ತ ನೆಮ್ಮದಿಯ ಜೀವನ ಸಾಗಿಸುತ್ತಿದ್ದೆವು. 2018ರ ನಂತರ ಎಂಎಸ್‌ಜಿಪಿ ಘಟಕದಲ್ಲಿನ ಬಿಬಿಎಂಪಿ ಕಸದ ರಾಶಿಯಿಂದ ಹೊರಬರಲು ಆರಂಭವಾದ ಕಲುಷಿತ ನೀರು ಅಂತರ್ಜಲವನ್ನು ಸೇರಿ ತೋಟದಲ್ಲಿನ ಕೊಳವೆ ಬಾವಿ ನೀರು ಕಲುಷಿತವಾಗತೊಡಗಿತು’ ಎಂದು ಹೇಳಿತ್ತಲೇ ರಾಜಣ್ಣ ಗದ್ಗದಿತರಾರು.

‘ಈ ನೀರನ್ನು ಬೆಳೆಗೆ ಹಾಯಿಸಿದ್ದರ ಪರಿಣಾಮ ತೆಂಗಿನ ಮರಗಳಲ್ಲಿನ ಕಾಯಿಗಳು ಬಿದ್ದು ಹೋಗತೊಡಗಿದವು. ಯಾವುದೇ ಬೆಳೆ ಬೆಳೆಯದಂತಾಯಿತು. ಕೊಳವೆ ಬಾವಿಯಲ್ಲಿನ ಮೋಟಾರು, ಪೈಪ್‌ಗಳು ಕಲುಷಿತ ನೀರಿಂದಾಗಿ ತುಕ್ಕುಹಿಡಿದು ಪುಡಿಯಾಗತೊಡಗಿದವು. ಈ ಎಲ್ಲಾ ಅವಸ್ಥೆಗಳಿಂದ ಬೇಸತ್ತು ನೀರಾವರಿಯಿಂದ ಬೆಳೆ ಬೆಳೆಯುವುದನ್ನು ನಿಲ್ಲಿಸಲಾಯಿತು’ ಎಂದು ಹೇಳಿದರು.

ಮುಗಿಯದ ಗುದ್ದಾಟ: ‘ನೀರಾವರಿಯಿಂದ ಬೆಳೆ ಬೆಳೆಯುವುದನ್ನು ನಿಲ್ಲಿಸಿದ ಮೇಲೆ ಈಗ ಮಳೆಗಾಲದಲ್ಲಿ ಒಂದಿಷ್ಟು ರಾಗಿ ಬೆಳೆದುಕೊಂಡು ಜೀವನ ನಡೆಸುತ್ತಿದ್ದೇವೆ. ನಾಲ್ಕು ಹಸುಗಳೇ ನಮ್ಮ ಬದುಕಿಗೆ ಆಧಾರವಾಗಿವೆ. ಮಕ್ಕಳು ಉದ್ಯೋಗ ಹುಡುಕಿಕೊಂಡು ಗಾರ್ಮೆಂಟ್ಸ್‌ಗಳ ಕಡೆಗೆ ಹೋಗುತ್ತಿದ್ದಾರೆ’ ಎಂದು ಹೇಳಿದ ರಾಜಣ್ಣ ಅವರು ಬಿಬಿಎಂಪಿ ಕಸದ ರಾಶಿಯೊಂದಿಗೆ ಗುದ್ದಾಡುತ್ತಲೇ ತಾವು ಸಾಗಿಸುತ್ತಿರುವ ತಮ್ಮ ಬದುಕಿನ ಕತೆಯನ್ನು ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.