
ಆನೇಕಲ್ ತಾಲ್ಲೂಕಿನ ಹಾರಗದ್ದೆಯ ರಾಜರಾಜೇಶ್ವರಿ ದೇವಾಲಯದಲ್ಲಿ ದೀಪೋತ್ಸವದ ಪ್ರಯುಕ್ತ ದೇವಿಗೆ ವಿಶೇಷ ಅಲಂಕಾರ
ಆನೇಕಲ್: ತಾಲ್ಲೂಕಿನ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾರಗದ್ದೆ ಗ್ರಾಮದಲ್ಲಿ ರಾಜರಾಜೇಶ್ವರಿ ದೇವಿ ದೇವಾಲಯದಲ್ಲಿ ಶಿವ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. ದೀಪಗಳ ಬೆಳಕಿನಲ್ಲಿ ದೇವಾಲಯವು ಕಂಗೊಳಿಸುತ್ತಿತ್ತು.
ದೇವಾಲಯದಲ್ಲಿ ಸಹಸ್ರ ಮೋದಕ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಹಾರಗದ್ದೆ, ನೋಸೇನೂರು, ದ್ಯಾವಸಂದ್ರ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ದೇವಾಲಯಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ದೇವಿಗೆ ಮಹಿಳೆಯರು ನಿಂಬೆಹಣ್ಣಿನ ಆರತಿ, ಬೆಲ್ಲದಾರತಿ ಬೆಳಗಿದರು. ರಾಜರಾಜೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮಂಗಳೂರು ಶೈಲಿಯ ದೇವಾಲಯ ದೀಪಗಳ ಬೆಳಕಿನಲ್ಲಿ ಮಿನುಗುತ್ತಿತ್ತು. ದೇವಾಲಯದ ಸುತ್ತಲೂ ಮಹಿಳೆಯರು ದೀಪಗಳನ್ನು ಹಚ್ಚುವ ಮೂಲಕ ದೀಪೋತ್ಸವದಲ್ಲಿ ಭಾಗಿಯಾದರು.
ರಾಜರಾಜೇಶ್ವರಿ ದೇವಾಲಯವು ಮಂಗಳೂರು ಶೈಲಿಯ ದೇವಾಲಯವಾಗಿದ್ದು, ಪ್ರತಿ ಶುಕ್ರವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಹತ್ತನೇ ವರ್ಷದ ಶಿವ ದೀಪೋತ್ಸವ ಆಯೋಜಿಸಲಾಗಿದೆ ಎಂದು ರಾಜರಾಜೇಶ್ವರಿ ದೇವಾಲಯದ ಧರ್ಮದರ್ಶಿ ಶಿವಕುಮಾರ ಸ್ವಾಮೀಜಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.