ADVERTISEMENT

ಹೆಬ್ಬಗೋಡಿ ಕನ್ನಡ ಹಬ್ಬದಲ್ಲಿ ರವಿಚಂದ್ರನ್‌ ಸಿನಿಮಾ ಹಾಡುಗಳ ಮೋಡಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 4:38 IST
Last Updated 9 ಫೆಬ್ರುವರಿ 2026, 4:38 IST
ಹೆಬ್ಬಗೋಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಆಯೋಜಿಸಿದ್ದ ಕನ್ನಡಿಗರ ಹಬ್ಬದಲ್ಲಿ ನಟ ರವಿಚಂದ್ರನ್ ಮಾತನಾಡಿದರು
ಹೆಬ್ಬಗೋಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಆಯೋಜಿಸಿದ್ದ ಕನ್ನಡಿಗರ ಹಬ್ಬದಲ್ಲಿ ನಟ ರವಿಚಂದ್ರನ್ ಮಾತನಾಡಿದರು   

ಹೆಬ್ಬಗೋಡಿ(ಆನೇಕಲ್): ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಆಯೋಜಿಸಿರುವ ಕನ್ನಡಿಗರ ಹಬ್ಬಕ್ಕೆ ಶನಿವಾರ ಸಂಜೆ ಹಿರಿಯ ನಟ ರವಿಚಂದ್ರನ್‌ ಚಾಲನೆ ನೀಡಿದರು.

ಹಬ್ಬದ ಪ್ರಯುಕ್ತ ನಡೆದ ರವಿಚಂದ್ರನ್‌ ಸಿನಿಮಾ ಗೀತೆಗಳ ಗಾಯನ ಪ್ರೇಕ್ಷರದಲ್ಲಿ ಮೋಡಿ ಮಾಡಿದವು.

ಗಾಯಕಿ ಅಂಕಿತ ಕುಂಡು ಹಾಡಿದ, ರಾಮಚಾರಿ ಚಿತ್ರದ ‘ಆಕಾಶದಾಗೆ ಯಾರೋ ಮಾಯಗಾರನು’,  ಶ್ರೀಹರ್ಷ ಮತ್ತು ಅಂಕಿತ ಜೋಡಿ ಕಂಠಿದಲ್ಲಿ ಮೂಡಿದ ಬಂದ ಶ್ರೀರಾಮಚಂದ್ರ ಚಿತ್ರ ‘ಗಗನದಲ್ಲಿ ಮಳೆಯ ದಿನ ಗುಡುಗಿನ ತನನ...’ ಹಾಡಿಗೆ ಪ್ರೇಕ್ಷಕರು ಪಿಧಾ ಆದರು. ಚಪ್ಪಳೆ ತಟ್ಟಿ ಖುಷಿ ವ್ಯಕ್ತಪಡಿಸಿದರು.

ADVERTISEMENT

ಶ್ರೀಹರ್ಷ ಹಾಡಿದ ಮಲ್ಲ ಸಿನಿಮಾದ ‘ಕರುನಾಡೇ ಕರುನಾಡೇ’, ಯುಗ ಪುರುಷ ಸಿನಿಮಾದ ‘ಯಾವುದೇ ಈ ಗೊಂಬೆ ಯಾವುದೇ’, ‘ಸುಂದರಿ ಸುಂದರಿ ಸುರಸುಂದರಿ’ ಸೇರಿದಂತೆ ವಿವಿಧ ಗೀತೆಗಳು ಪ್ರೇಕ್ಷಕರನ್ನು ಪ್ರೇಮಲೋಕಕ್ಕೆ ಕರೆದ್ಯೊಯ್ದವು.

ಹೆಬ್ಬಗೋಡಿಯ ಎಸ್‌ಎಫ್‌ಎಸ್‌ ವಿಶಾಲ ಮೈದಾನ ಸಂಗೀತ ಪ್ರಿಯರಿಂದ ತುಂಬಿತ್ತು. ಸಂಗೀತ ಸವಿಯಲು ಆನೇಕಲ್‌ ತಾಲ್ಲೂಕಿನ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.  ನಿರೂಪಕಿ ಅನುಶ್ರೀ ಅವರು ಪ್ರತಿ ಹಾಡಿನ ನಂತರ ರವಿಚಂದ್ರನ್‌ ಅವರಿಗೆ ಈ ಹಾಡು ಸ್ಫೂರ್ತಿಯಾಗಲು ಕಾರಣ ಕೇಳುತ್ತಾ ಪ್ರೇಕ್ಷಕರನ್ನು ರಂಜಿಸಿದರು.

ಗಾಯಕರಾದ ಹೇಮಂತ್‌, ಅನುರಾಧ ಭಟ್, ಅಶ್ವಿನ್‌ ಶರ್ಮ, ಶ್ರೀ ಹರ್ಷ, ಅಂಕಿತಾ ಕುಂಡು, ಶಿವಾನಿ, ಲಕ್ಷ್ಮೀ ವಿಜಯ್‌ ಗಾಯನ ನಡೆಸಿಕೊಟ್ಟರು. ಅಂತರರಾಷ್ಟ್ರೀಯ ಡ್ರಮ್‌ ವಾದಕ ಅರುಣ್‌ ಕುಮಾರ್‌ ಡ್ರಮ್‌ ವಾದನ ನಡೆಸಿಕೊಟ್ಟರು.

ಭಾನುವಾರ ಅರ್ಜುನ್‌ ಜನ್ಯ ಮತ್ತು ತಂಡದವರು ಸಂಗೀತ ಸಂಭ್ರಮ ನಡೆಸಿಕೊಟ್ಟರು. ಐಶ್ವರ್ಯ ರಂಗರಾಜನ್‌, ಪೃಥ್ವಿ ಭಟ್‌, ದರ್ಶನ್, ಸುನೀಲ್‌, ವ್ಯಾಸರಾಜ್‌ ಮತ್ತು ತಂಡದವರು ಆಕರ್ಷಕ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ಕನ್ನಡಿಗರ ಹಬ್ಬದಲ್ಲಿ ಪಾಲ್ಗೊಂಡಿದ್ದ ಜನರು

ಪ್ರೇಮಗೀತೆ ಅನ್ಯಭಾಷಿಕರ ಮನಮುಟ್ಟಲಿ

‘ಕನ್ನಡಿಗರ ಹಬ್ಬದಲ್ಲಿ ಪ್ರೇಮಗೀತೆಗಳ ಮೂಲಕ ಅನ್ಯಭಾಷಿಕರಿಗೆ ಕನ್ನಡದ ಮಹತ್ವ ಸಾರುತ್ತಿರುವುದು ವಿಶೇಷವಾಗಿದೆ. ಈ ಭಾಷೆಯನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕಾದುದ್ದು ನಮ್ಮ ಜವಾಬ್ದಾರಿಯಾಗಿದೆ. ಬಹುತೇಕ ಎಲ್ಲಾ ಕಾರ್ಯಕ್ರಮದಲ್ಲಿಯೂ ಅರ್ಧ ಗಂಟೆ ಇರುತ್ತಿದೆ. ಆದರೆ ಇಲ್ಲಿ ರವಿಚಂದ್ರನ್‌ ಚಿತ್ರ ಗೀತೆಗಳ ಗಾಯನ ಇರುವುದರಿಂದ ಹೆಚ್ಚು ಸಮಯ ಕಳೆಯುತ್ತಿದ್ದೇನೆ’ ಎಂದು ಹಿರಿಯ ನಟ ರವಿಚಂದ್ರನ್‌ ಹೇಳಿದರು. ಆನೇಕಲ್‌ ತಾಲ್ಲೂಕು ಗಡಿಭಾಗದಲ್ಲಿದ್ದರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬರವಿಲ್ಲ. ಪ್ರತಿ ವರ್ಷ ಕನ್ನಡಿಗರ ಹಬ್ಬದಲ್ಲಿ ಖ್ಯಾತ ಗಾಯಕರನ್ನು ಕರೆಯಿಸಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಗಡಿಯಲ್ಲಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದು ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳೀದರು. ಶಾಸಕ ಬಿ.ಶಿವಣ್ಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಮಿಕರ ಘಟಕದ ಅಧ್ಯಕ್ಷ ಹೆಬ್ಬಗೋಡಿ ಎಚ್‌.ಎಂ.ಅಂಬರೀಷ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿಗಣಿ ಪುನೀತ್‌ ಮುಖಂಡ ಗಟ್ಟಹಳ್ಳಿ ಸೀನಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.