ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಗೆ ರೆಡ್ಡಿ ಜನಸಂಘವು ಬೆಂಬಲ ಸೂಚಿಸಿತು. ರೆಡ್ಡಿಜನ ಸಂಘದ ಪದಾಧಿಕಾರಿಗಳು ರೈತರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ರೆಡ್ಡಿ ಜನಸಂಘದ ನಿರ್ದೇಶಕ ಎಂಬಿಐ ಸೋಮಶೇಖರರೆಡ್ಡಿ ಮಾತನಾಡಿ, ರೈತರು ಈ ದೇಶದ ಅಸ್ಮಿತೆ. ಆನೇಕಲ್ ತಾಲ್ಲೂಕಿನಲ್ಲಿ ಐದು ಕೈಗಾರಿಕಾ ಪ್ರದೇಶಗಳು ಇರುವುದರಿಂದ ಮತ್ತೊಂದು ಕೈಗಾರಿಕಾ ಪ್ರದೇಶದ ಅಗತ್ಯವಿಲ್ಲ. ರೈತರ ಕೃಷಿ ಭೂಮಿ ಕೈಗಾರಿಕೆಗಳಿಗೆ ನೀಡುವುದು ಖಂಡನೀಯ ಎಂದರು.
ಮುಂದಿನ ದಿನಗಳಲ್ಲಿ ರೈತರ ನಿಯೋಗದೊಂದಿಗೆ ರೆಡ್ಡಿ ಜನಸಂಘವು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರೈತರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಿದೆ ಎಂದರು.
ರೈತರ ಹೋರಾಟಕ್ಕೆ ಬೆಂಬಲ ನೀಡುವುದು ನಮ್ಮ ಜವಾಬ್ದಾರಿ. ಒಂದು ತಿಂಗಳಿನಿಂದ ರೈತರು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಮತ್ತು ಅಧಿಕಾರಿಗಳು ಗಮನ ನೀಡದಿರುವುದು ಖಂಡನೀಯ. ರೈತರ ಹೋರಾಟಕ್ಕೆ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಬೇಕು. ಈ ಮೂಲಕ ಕೃಷಿ ಜಮೀನುಗಳನ್ನು ಉಳಿಸಬೇಕು ಎಂದು ಒತ್ತಾಯಿಸಿದರು.
ಚಂದಾಪುರ ಮುರಳಿ ಮಾತನಾಡಿ, ಕೆಐಎಡಿಬಿ ಅಧಿಕಾರಿಗಳು ರೈತರ ಭೂಮಿಯಷ್ಟೇ ಕದಿಯುವುದಿಲ್ಲ. ಇದರ ಜೊತೆಗೆ ರೈತರ ಅಸ್ಮಿತೆ ಮತ್ತು ಅಸ್ತಿತ್ವವನ್ನೂ ಕದಿಯುತ್ತಿದ್ದಾರೆ ಎಂದು ಕಿಡಿಕಾರಿದರು.
ರೈತರು ಯಾವುದೇ ಕಾರಣಕ್ಕೂ ಕೆಐಎಡಿಬಿಗೆ ಭೂಮಿ ನೀಡಬಾರದು. ರೈತರ ಹೋರಾಟಕ್ಕೆ ಬಲ ನೀಡಲು ರೆಡ್ಡಿಜನ ಸಂಘ ಬೆಂಬಲ ಸೂಚಿಸಿದೆ. ರೈತರು ಶಾಂತಿಯಿಂದ ಹೋರಾಟ ನಡೆಸುತ್ತಿದ್ದು, ಸರ್ಕಾರ ಬೆಂಬಲ ನೀಡದಿದ್ದರೆ ಕ್ರಾಂತಿಯಿಂದ ನಮ್ಮ ಭೂಮಿಯನ್ನು ಉಳಿಸಿಕೊಳ್ಳುತ್ತೇವೆ ಎಂದರು.
ರೆಡ್ಡಿ ಜನಸಂಘ ರಾಜ್ಯ ನಿರ್ದೇಶಕ ನಾಗರಾಜರೆಡ್ಡಿ, ಜಯಪ್ರಕಾಶ್, ರೆಡ್ಡಿ, ರೆಡ್ಡಿ ಯುವ ಸಂಘದ ತಾಲ್ಲೂಕು ಅಧ್ಯಕ್ಷ ನ್ಯೂಟನ್ ರೆಡ್ಡಿ, ಚಿನ್ನಪ್ಪ.ವೈ. ಚಿಕ್ಕಹಾಗಡೆ, ಮಂಜುನಾಥರೆಡ್ಡಿ, ಮುರಳಿ, ಮುತ್ತುಕೇಶವ, ವಿಶ್ವನಾಥರೆಡ್ಡಿ, ಕೃಷ್ಣಾರೆಡ್ಡಿ, ಜಿಗಳ ರಾಕೇಶ್, ತ್ಯಾವಕನಹಳ್ಳಿ ಮುರಳಿ, ಅನಿಲ್ ರೆಡ್ಡಿ, ಪ್ರಶಾಂತ್ ರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.