ADVERTISEMENT

ಆನೇಕಲ್: ಕೊಟ್ಟ ಹಣ ಕೇಳಿದ ಟೆಕಿ ಕೊಂದು ಮನೆಯಲ್ಲಿ ಹೂತ ಸಂಬಂಧಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 20:11 IST
Last Updated 19 ನವೆಂಬರ್ 2025, 20:11 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಆನೇಕಲ್: ಕೊಟ್ಟ ಹಣ ವಾಪಸ್ ಕೇಳಿದ ಸಾಫ್ಟ್‌ವೇರ್‌ ಇಂಜಿನಿಯರ್‌ ಒಬ್ಬರನ್ನು ಹಣ ನೀಡುವುದಾಗಿ ಆಂಧ್ರಪ್ರದೇಶದ ಕುಪ್ಪಂಗೆ ಕರೆಸಿಕೊಂಡ ಸಂಬಂಧಿ ಆತನನ್ನು ಹತ್ಯೆ ಮಾಡಿ ಮನೆಯಲ್ಲಿ ಹೂತು ಹಾಕಿದ ಸಿನಿಮೀಯ ಘಟನೆ ನಡೆದಿದೆ.

ADVERTISEMENT

ತಿಂಗಳ ಹಿಂದೆ ನಡೆದಿದ್ದ ಈ ಪ್ರಕರಣವನ್ನು ಅತ್ತಿಬೆಲೆ ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ತೆರೆ ಕಂಡಿದ್ದ ‘ದೃಶ್ಯಂ’ ಸಿನಿಮಾದ ರೀತಿಯಲ್ಲಿಯೇ ಆರೋಪಿಗಳು ಶವವನ್ನು ತಮ್ಮ ಹಳೆಯ ಮನೆಯಲ್ಲಿ ಹೂತಿಟ್ಟಿದ್ದರು.   

ಶ್ರೀನಾಥ್ (30) ಕೊಲೆಯಾದ ಇಂಜಿನಿಯರ್‌. ಕೊಲೆ ಆರೋಪದಲ್ಲಿ ಶ್ರೀನಾಥ್ ಸಹೋದರ ಸಂಬಂಧಿ ಪ್ರಭಾಕರ್ ಹಾಗೂ ಆತನ ಸ್ನೇಹಿತ ಜಗದೀಶ್‌ ಎಂಬುವರನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಕುಪ್ಪಂ ಮೂಲದ ಶ್ರೀನಾಥ್‌ ಬೆಂಗಳೂರಿನ ಸಾಫ್ಟ್‌ವೇರ್‌ ಕಂಪನಿಯಲ್ಲಿ ಇಂಜಿನಿಯರ್‌ ಆಗಿದ್ದರು. ಪತ್ನಿ ಮತ್ತು ಮಗುವಿನೊಂದಿಗೆ ಅತ್ತಿಬೆಲೆಯ ನೆರಳೂರಿನಲ್ಲಿ ವಾಸವಾಗಿದ್ದರು.

ಸಂಬಂಧಿ ಪ್ರಭಾಕರ್‌ ಕೆಲವು ವರ್ಷಗಳ ಹಿಂದೆ ಶ್ರೀನಾಥ್‌ ಅವರಿಂದ ಹಣ ದ್ವಿಗುಣ ಮಾಡಿ ಕೊಡುವುದಾಗಿ ನಂಬಿಸಿ ₹40 ಲಕ್ಷ ಪಡೆದಿದ್ದ ಎಂದು ತಿಳಿದು ಬಂದಿದೆ.

ಹಲವು ವರ್ಷಗಳಾದರೂ ಹಣ ವಾಪಸ್ ನೀಡದೆ ಪೀಡಿಸುತ್ತಿದ್ದ. ಹಲವು ಬಾರಿ ಕೇಳಿದ್ದರೂ ವಾಪಸ್‌ ಮಾಡಿರಲಿಲ್ಲ. ಎರಡು ಬಾರಿ ಹಣ ಕೇಳಲು ಶ್ರೀನಾಥ್ ಕುಪ್ಪಂಗೆ ಹೋಗಿ ಬಂದಿದ್ದರು. ಅದಕ್ಕಾಗಿ ಆತ ಪ್ರತಿಬಾರಿ ವಾಟ್ಸ್‌ಆ್ಯಪ್‌ನಲ್ಲಿ ಕೋಡ್‌ ವರ್ಡ್‌ ಸಂದೇಶ ಕಳಿಸುತ್ತಿದ್ದ. ಅದನ್ನು ನೋಡಿದ ಶ್ರೀನಾಥ್‌ ಹಣ ಪಡೆಯಲು ಕುಪ್ಪಂಗೆ ಹೋಗಿ ಬರಿಗೈಯಲ್ಲಿ ಮರಳುತ್ತಿದ್ದರು.

ಈ ಬಾರಿ ಖಂಡಿತ ಹಣ ಮರಳಿ ಕೊಡುವುದಾಗಿ ಹೇಳಿದ್ದ ಆರೋಪಿ ಪ್ರಭಾಕರ್ ಅಕ್ಟೋಬರ್‌ನಲ್ಲಿ ಶ್ರೀನಾಥ್‌ ಅವರನ್ನು ಕುಪ್ಪಂಗೆ ಕರೆಸಿಕೊಂಡಿದ್ದ. ಆದರೆ, ಬರುವಾಗ ಮೊಬೈಲ್ ಫೋನ್‌ ತರದಂತೆ ಷರತ್ತು ಹಾಕಿದ್ದ. ಹಾಗಾಗಿ ಶ್ರೀನಾಥ್‌ ಮನೆಯಲ್ಲಿಯೇ ಫೋನ್‌ ಬಿಟ್ಟು ಹೋಗಿದ್ದರು.

ತನ್ನ ಸ್ನೇಹಿತ ಜಗದೀಶ್ ಎಂಬಾತನ ಜೊತೆ ಸೇರಿ ಶ್ರೀನಾಥ್‌ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದ ಪ್ರಭಾಕರ್‌ ತನ್ನ ಹಳೆಯ ಮನೆಯಲ್ಲಿ ಗುಂಡಿ ತೋಡಿ ಹೆಣವನ್ನು ಹೂತು ಹಾಕಿದ್ದ. 

ಅ.27ರಂದು ಹಣ ಪಡೆಯಲು ಕುಪ್ಪಂಗೆ ಹೋಗುವ ವಿಷವನ್ನು ಶ್ರೀನಾಥ್ ತನ್ನ ಪತ್ನಿಗೆ ತಿಳಿಸಿದ್ದರು. ಕುಪ್ಪಂಗೆ ಹೋಗಿ ಎರಡು ದಿನಗಳಾದರೂ ಶ್ರೀನಾಥ್‌ ಮನೆಗೆ ಹಿಂದಿರುಗಿರಲಿಲ್ಲ. ಪತಿಯ ಸುಳಿವು ಸಿಗದ ಕಾರಣ ಪತ್ನಿ ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸರು ಎರಡು ತಿಂಗಳ ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲನೆ ನಡೆಸಿ ಪ್ರಭಾಕರ್‌ನನ್ನು ವಿಚಾರಣೆ ನಡೆಸಿದಾಗ ಕೊಲೆ ಬೆಳಕಿಗೆ ಬಂದಿದೆ. ಕೊಲೆಯ ನಂತರ ಯಾರಿಗೂ ಅನುಮಾನ ಬಾರದಿರಲಿ ಎಂದು ಪ್ರಭಾಕರ್‌ ಎರಡು, ಮೂರು ಬಾರಿ ಬೆಂಗಳೂರಿಗೆ ಬಂದು ಹೋಗಿದ್ದ. ಪೊಲೀಸರ ವಿಚಾರಣೆ ವೇಳೆ ಕೊಲೆಗೂ ತನಗೂ ಸಂಬಂಧವೇ ಇಲ್ಲ ಎಂದು ವಾದಿಸಿದ್ದ. 

ಎರಡು ತಿಂಗಳ ಮೊದಲಿನ ಕರೆಗಳ ವಿವರಗಳನ್ನು ಕಲೆ ಹಾಕಿ ಪೊಲೀಸರಿಗೆ ಪ್ರಭಾಕರ್ ಮತ್ತು ಆತನ ಸ್ನೇಹಿತ ಜಗದೀಶ್‌ ನಡುವೆ ತಾಸುಗಟ್ಟಲೇ ಫೋನ್‌ನಲ್ಲಿ ಸಂಭಾಷಣೆ ನಡೆಸಿದ ಸುಳಿವು ದೊತೆತಿತ್ತು. ಪ್ರಭಾಕರ್‌ಗೆ ಗೊತ್ತಿಲ್ಲದಂತೆಯೇ ಆತನ ಸ್ನೇಹಿತ ಜಗದೀಶ್‌ನನ್ನು ತಂದು ಪ್ರಶ್ನಿಸಿದಾಗ ಆತ ಶ್ರೀನಾಥ್‌ ಕೊಲೆ ವಿಚಾರ ಬಾಯ್ಬಿಟ್ಟ. ಶವವನ್ನು ಹಳೆಯ ಮನೆಯೊಂದರಲ್ಲಿ ಹೂತು ಹಾಕಿರುವುದಾಗಿ ಹೇಳಿದ.

ಅತ್ತಿಬೆಲೆ ಇನ್‌ಸ್ಪೆಕ್ಟರ್‌ ರಾಘವೇಂದ್ರ ಮತ್ತು ತಂಡ ಕುಪ್ಪಂಗೆ ತೆರಳಿ ಅಲ್ಲಿಯ ತಹಶೀಲ್ದಾರ್ ಮತ್ತು ಪೊಲೀಸರ ಸಮ್ಮುಖದಲ್ಲಿ ಶ್ರೀನಾಥ್ ಶವ ಹೊರತೆಗೆದರು. ಹಳೆಯ ಮನೆಯಲ್ಲಿ ಆಳವಾದ ಗುಂಡಿ ತೋಡಿ ಮಣ್ಣು ಮುಚ್ಚಿ ಮೇಲೆ ಕಲ್ಲುಗಳನ್ನು ಹೊಂದಿಸಲಾಗಿತ್ತು.

ಅತ್ತಿಬೆಲೆ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ ತಂದಿದ್ದಾರೆ. ಇಬ್ಬರೂ ಆರೋಪಿಗಳು ಈ ಹಿಂದೆಯೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

 ಆರೋಪಿಗಳಾದ ಪ್ರಭಾಕರ್ ಮತ್ತು ಜಗದೀಶ್ ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ. ಇಬ್ಬರ ಮೇಲೆ ಈ ಹಿಂದೆಯೂ ಕೊಲೆ ಪ್ರಕರಣ ದಾಖಲಾಗಿವೆ.

ಪ್ರಭಾಕರ್ ತನ್ನ ಗೆಳೆಯನ ಪತ್ನಿಯನ್ನು ಕೊಲೆ ಮಾಡಿದ್ದ ಮತ್ತು ಜಗದೀಶ್‌ ತನ್ನ ಪ್ರಿಯತಮೆಯನ್ನು ಕೊಲೆ ಮಾಡಿದ್ದ. ಇಬ್ಬರ ವಿರುದ್ಧವೂ ಕೊಲೆ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.