ADVERTISEMENT

ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಆಗ್ರಹ

ಒಂದೇ ಕುಟುಂಬಕ್ಕೆ 43 ಖಾತೆ ಹಂಚಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 3:50 IST
Last Updated 15 ಜುಲೈ 2021, 3:50 IST
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ರವಿಕುಮಾರ್ ಅವರಿಗೆ ಚಿಕ್ಕೋಬದೇನಹಳ್ಳಿ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ರವಿಕುಮಾರ್ ಅವರಿಗೆ ಚಿಕ್ಕೋಬದೇನಹಳ್ಳಿ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು   

ದೇವನಹಳ್ಳಿ:ತಾಲ್ಲೂಕಿನ ಕುಂದಾಣ ಹೋಬಳಿ ವಿಶ್ವನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕೋಬದೇನಹಳ್ಳಿಯಲ್ಲಿ 8.04 ಎಕರೆಗೆ ಸಂಬಂಧಿಸಿದಂತೆ ಆಗಿರುವ ಎಲ್ಲಾ ಅಕ್ರಮ ಖಾತೆಗಳನ್ನು ರದ್ದುಗೊಳಿಸಬೇಕು. ಜಮೀನನ್ನು ಗ್ರಾಮ ಪಂಚಾಯಿತಿ ವಶಕ್ಕೆ ಪಡೆದು ನಾಮಫಲಕ ಹಾಕಿ ಸರ್ಕಾರದಿಂದ ಕಾಂಪೌಂಡ್ ನಿರ್ಮಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರಜಾ ವಿಮೋಚನಾ ಚಳವಳಿ ಸ್ವಾಭಿಮಾನ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮುನಿಆಂಜಿನಪ್ಪ ಮಾತನಾಡಿ, ಸರ್ಕಾರದ ಆಸ್ತಿಯನ್ನು ಪ್ರಭಾವಿಗಳು ಕಬಳಿಸುತ್ತಿದ್ದಾರೆ. ಒಂದೇ ಕುಟುಂಬದವರ ಹೆಸರಿನಲ್ಲಿ ಅಕ್ರಮವಾಗಿ ಖಾತೆಗಳನ್ನು ಮಾಡಲಾಗಿದೆ ಎಂದು ದೂರಿದರು.

ಈ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ಸ್ಥಳದ ತನಿಖೆ ಮಾಡಿ ಅಕ್ರಮ ಖಾತೆಗಳಾಗಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಈ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ ಎಂದು ವಿವರಿಸಿದರು.

ADVERTISEMENT

ಕೂಡಲೇ ಈ ಭೂಮಿಯನ್ನು ವಶಕ್ಕೆ ಪಡೆಯುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಜಿಲ್ಲಾ ಪಂಚಾಯಿತಿ ಸಿಇಒಗೆ ಪತ್ರ ರವಾನಿಸಿದ್ದರು. ಸಿಇಒ ಅವರು ತಾಲ್ಲೂಕು ಪಂಚಾಯಿತಿ ಇಒಗೆ ಸೂಚನೆ ನೀಡಿದ್ದರೂ ಇದುವರೆಗೂ ಅಕ್ರಮ ಖಾತೆಗಳನ್ನು ವಜಾಗೊಳಿಸಿಲ್ಲ. ಭೂಮಿ ವಶಕ್ಕೆ ಪಡೆದುಕೊಂಡಿಲ್ಲ. ಈ ನಿರ್ಲಕ್ಷ್ಯ ಗಮನಿಸಿದಾಗ ಅಕ್ರಮ ಖಾತೆಗಳನ್ನು ಮಾಡಿಕೊಳ್ಳಲಿಕ್ಕೆ ಅಧಿಕಾರಿಗಳೇ ಕುಮ್ಮಕ್ಕು ನೀಡಿದ್ದಾರೆಯೇ ಎನ್ನುವ ಅನುಮಾನ ಬರುತ್ತಿದೆ ಎಂದು ಟೀಕಿಸಿದರು.

ಒಂದೇ ಕುಟುಂಬದವರ ಹೆಸರಿನಲ್ಲಿ ಗ್ರಾಮ ಪಂಚಾಯಿತಿಯಲ್ಲಿ 43 ಖಾತೆಗಳನ್ನು ಅಕ್ರಮವಾಗಿ ಮಾಡಿಕೊಂಡು ಕೋಟ್ಯಂತರ ರೂಪಾಯಿ ಸರ್ಕಾರಿ ಆಸ್ತಿ ಕಬಳಿಸಿದ್ದಾರೆ. ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಕರ ವಸೂಲಿಗಾರ 100x120 ಅಳತೆಯ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಈ ಖಾತೆಗಳಿಗೆ ಹಕ್ಕುಪತ್ರ ವಿತರಿಸಿಲ್ಲ. ಸರ್ಕಾರದಿಂದ ಬಡವರಿಗೆ ನಿವೇಶನ ನೀಡಲಿಕ್ಕೆ ಭೂಮಿ ಸಿಗುತ್ತಿಲ್ಲ. ಈ ರೀತಿಯಾಗಿ ಸರ್ಕಾರಿ ಭೂಮಿ ಕಬಳಿಸುತ್ತಿದ್ದರೆ ಬಡವರಿಗೆ ನ್ಯಾಯ ಸಿಗಲಿಕ್ಕೆ ಸಾಧ್ಯವಾಗುತ್ತದೆಯೇ. ಆದ್ದರಿಂದ ಅಧಿಕಾರಿಗಳು ಒತ್ತುವರಿಯಾಗಿರುವ ಸರ್ಕಾರಿ ಆಸ್ತಿಯನ್ನು ತೆರವುಗೊಳಿಸಿ ತಂತಿ ಬೇಲಿ ಹಾಕಬೇಕು ಎಂದು ಆಗ್ರಹಿಸಿದರು.

ಮನವಿ ಪತ್ರ ಸ್ವೀಕರಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ರವಿಕುಮಾರ್, ಅಕ್ರಮ ಖಾತೆಗಳಿಗೆ ಸಂಬಂಧಪಟ್ಟಂತೆ ಪ್ರತಿಭಟನಾಕಾರರು ನೀಡಿರುವ ಮನವಿ ಪತ್ರದಲ್ಲಿನ ಅಂಶಗಳು ಹಾಗೂ ಲೋಕಾಯುಕ್ತ ಕಚೇರಿಯಿಂದ ನಮಗೆ ಏನು ನಿರ್ದೇಶನ ನೀಡಿದ್ದಾರೆ ಎಂಬುದನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರಾಷ್ಟ್ರೀಯ ಕಿಸಾನ್ ಮೋರ್ಚಾ ಮುಖಂಡ ಎಸ್. ಸಿದ್ಧಾರ್ಥ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಹನುಮಣ್ಣ ಗುಳ್ಳೆ, ರೈತ ಮುಖಂಡ ರಾಮಾಂಜಿ, ಸಂಘಟನಾ ಕಾರ್ಯದರ್ಶಿ ಚನ್ನಮರಿಯಪ್ಪ, ಮುನಿಶಾಮಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಮ್ಮ, ರತ್ನಮ್ಮ, ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.