ದೊಡ್ಡಬಳ್ಳಾಪುರ: ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಅವರ ಜನ್ಮ ಶತಮಾನೋತ್ಸವ ಅಕ್ಟೋಬರ್ 19 ರಂದು ನಗರದ ಆರ್.ಎಲ್.ಜೆ.ಐ.ಟಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಶ್ರೀದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಹೇಳಿದರು.
ಜನ್ಮ ಶತಮಾನೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ಆವರಣದಲ್ಲಿ ನಿರ್ಮಿಸಲಾಗಿರುವ ಜಾಲಪ್ಪ ಅಕಾಡೆಮಿಯ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. ಪ್ರೊ.ಕೆ.ಆರ್.ರವಿಕಿರಣ್ ಹಾಗೂ ಲಕ್ಷ್ಮಣಕೊಡಸೆ ಅವರು ಬರೆದಿರುವ ‘ನೇರ ನಿಷ್ಠುರ ನಡೆಯ ಹೃದಯವಂತ ಆರ್.ಎಲ್.ಜಾಲಪ್ಪ ಜೀವನ ಪಥ’ ಪುಸ್ತಕ ಬಿಡುಗಡೆಯಾಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿವಿಧ ಕಟ್ಟಡಗಳ ಉದ್ಘಾಟನೆ, ಶಿಲಾನ್ಯಾಸ: ಜಾಲಪ್ಪ ಜನ್ಮ ಶತಮಾನೋತ್ಸವ ಭವನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಶ್ರೀದೇವರಾಜ ಅರಸ್ ಅಂತರ ರಾಷ್ಟ್ರೀಯ ವಸತಿ ಶಾಲೆ ನೂತನ ಕಟ್ಟಡ ನಿರ್ಮಾಣಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಂಕುಸ್ಥಾಪನೆ ಮಾಡಲಿದ್ದಾರೆ.
ಆರ್.ಜಿ.ವೆಂಕಟಾಚಲಯ್ಯಗೆ ಪುರಸ್ಕಾರ: ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಅವರಿಗೆ ಆರ್.ಎಲ್.ಜಾಲಪ್ಪ ಜನ್ಮಶತಮಾನೋತ್ಸವ ಪುರಸ್ಕಾರ ನೀಡಲಾಗುತ್ತಿದೆ. ಜೊತೆಗೆ ಸುಮಾರು 30ಕ್ಕೂ ಹೆಚ್ಚು ಹಿರಿಯ ಗಣ್ಯರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಂಸ್ಥೆಯ ಅಧ್ಯಕ್ಷ ಜಿ.ಎಚ್.ನಾಗರಾಜ ಮತ್ತು ಕಾರ್ಯದರ್ಶಿ ಕೆ.ಜಿ.ಹನುಮಂತರಾಜು ಅವರ ಮಾರ್ಗದರ್ಶನದಲ್ಲಿ ಸಿದ್ಧತೆಗಳು ನಡೆದಿವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಪಿ.ವಿಜಯಕಾರ್ತಿಕ್, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಮಾನವ ಸಂಪನ್ಮೂಲ ನಿರ್ದೇಶಕ ಬಾಬು ರೆಡ್ಡಿ, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ಡೀನ್ ಡಾ.ಶ್ರೀನಿವಾಸರೆಡ್ಡಿ ಇದ್ದರು.
ಜಾಲಪ್ಪ ಅವರು ಬದುಕಿದ್ದ ಕಾಲದಲ್ಲೇ ಅವರ ಕುರಿತು ಪುಸ್ತಕವೊಂದನ್ನು ಬರೆಸಬೇಕೆಂಬ ಆಕಾಂಕ್ಷೆ ಇತ್ತು. ಆದರೆ ಅವರು ಒಪ್ಪಿರಲಿಲ್ಲ. ಮಾಜಿ ಪ್ರಧಾನಿ ದೇವೇಗೌಡ ಅವರು ಒಮ್ಮೆ ಮನೆಗೆ ಬಂದಾಗಲೂ ಈ ಬಗ್ಗೆ ಹೇಳಿದ್ದರು. ಜಾಲಪ್ಪ ಅವರ ನಿಧನದ ಬಳಿಕ ಆರಂಭಗೊಂಡ ಪ್ರಕ್ರಿಯೆ ಇದೀಗ ಕೈಗೂಡಿದ್ದು ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲೇ ಜೀವನ ಗಾಥೆ ಬಿಡುಗಡೆಗೊಳ್ಳುತ್ತಿದೆ. ಪುಸ್ತಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುನ್ನಡಿ ಬರೆದಿರುವುದು ವಿಶೇಷ ಎಂದು ಜೆ.ರಾಜೇಂದ್ರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.