
ದೇವನಹಳ್ಳಿ: ಗ್ರಾಮಗಳ ಅಭಿವೃದ್ಧಿಯಿಂದಲೇ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಆಶಯವಾಗಿದ್ದು, ಆ ದಿಕ್ಕಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ತಾಲೂಕಿನ ಆವತಿ ಹಾಗೂ ವೆಂಕಟಗಿರಿ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
ಗ್ರಾಮಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಕೆರೆ–ಕಟ್ಟೆ, ಅಂಗನವಾಡಿ, ಶಾಲೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಸರ್ಕಾರ ನೀಡುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಆವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆವತಿ ಗ್ರಾಮದಲ್ಲಿ ₹22 ಲಕ್ಷ ವೆಚ್ಚದ ಘನ ತ್ಯಾಜ್ಯ ವಿಲೇವಾರಿ ಘಟಕ, ₹15 ಲಕ್ಷ ವೆಚ್ಚದ ಅಂಗನವಾಡಿ ಕೇಂದ್ರ, ₹5 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ, ಗ್ರಾಮದ ವಿವಿಧ ಭಾಗಗಳಲ್ಲಿ ₹7.5 ಲಕ್ಷ ವೆಚ್ಚದ ಮುಖ್ಯದ್ವಾರ ಕಮಾನು ಹಾಗೂ ನಾಮಫಲಕ ಅಳವಡಿಕೆ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಇದೇ ಪಂಚಾಯಿತಿ ವ್ಯಾಪ್ತಿಯ ಜನತಾ ಕಾಲೋನಿ ಗ್ರಾಮದಲ್ಲಿ ₹15 ಲಕ್ಷ ವೆಚ್ಚದ ಅಂಗನವಾಡಿ ಕೇಂದ್ರ ಹಾಗೂ ₹5 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ, ಅತ್ತಿಬೆಲೆ ಗ್ರಾಮದಲ್ಲಿ ₹4 ಲಕ್ಷ ವೆಚ್ಚದ ಹೈಮಾಸ್ಟ್ ದೀಪ ಅಳವಡಿಕೆ, ವೆಂಕಟಗಿರಿ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗವಾರ ಗ್ರಾಮದಲ್ಲಿ ₹13 ಲಕ್ಷ ವೆಚ್ಚದ ಅಂಗನವಾಡಿ ಕೇಂದ್ರ ಸೇರಿ ಒಟ್ಟು ₹86.5 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವರು ಉದ್ಘಾಟಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರಾಜಣ್ಣ, ಬಮುಲ್ ನಿರ್ದೇಶಕ ಎಸ್.ಪಿ. ಮುನಿರಾಜು, ಮಂಜುನಾಥ್, ವೆಂಕಟೇಶ್, ಪ್ರಸನ್ನಕುಮಾರ್, ತಹಶೀಲ್ದಾರ್ ಅನಿಲ್, ಶ್ರೀನಾಥ್ ಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.