
ದೇವನಹಳ್ಳಿ: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ನಡೆಯುವ ಶೋಷಣೆ ಹಾಗೂ ದೌರ್ಜನ್ಯಗಳನ್ನು ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಆಯೋಗದ ಅಧ್ಯಕ್ಷ ಡಾ.ಎಲ್. ಮೂರ್ತಿ ಎಚ್ಚರಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ–ಪಂಗಡಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರ್ವಜನಿಕರು ಮತ್ತು ಸಮುದಾಯದ ಮುಖಂಡರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯಾವುದೇ ವ್ಯಕ್ತಿ ಅಥವಾ ಸಮುದಾಯ ಶೋಷಣೆ ಅಥವಾ ದೌರ್ಜನ್ಯಕ್ಕೆ ಒಳಗಾದಲ್ಲಿ ಆಯೋಗವನ್ನು ನೇರವಾಗಿ ಸಂಪರ್ಕಿಸಿ ದೂರು ದಾಖಲಿಸಬಹುದು. ಆಯೋಗವು ತಕ್ಷಣ ಪರಿಶೀಲನೆ ನಡೆಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಿದೆ ಎಂದರು.
ಸಭೆಯಲ್ಲಿ ಶೋಷಣೆ, ದೌರ್ಜನ್ಯ, ಜಮೀನಿನ ಖಾತೆ–ಪಹಣಿ ಸಮಸ್ಯೆ, ಸ್ಮಶಾನ ಹಾಗೂ ಸಮುದಾಯ ಭವನಗಳ ಕೊರತೆ, ಅನುದಾನ ದುರುಪಯೋಗ, ಅಕ್ರಮ ಮದ್ಯ ಮಾರಾಟ, ಪೊಲೀಸ್ ನಡವಳಿಕೆ, ಕಾಮಗಾರಿಗಳಿಗೆ ನಾಮಫಲಕ ಅಳವಡಿಕೆ ಹಾಗೂ ಆಶ್ರಯ ಯೋಜನೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಯಿತು. ಇವುಗಳನ್ನು ಆಯೋಗವು ಸಮಗ್ರವಾಗಿ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು
ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಸರ್ಕಾರ ನೀಡುವ ಅನುದಾನವನ್ನು ಸಂಪೂರ್ಣವಾಗಿ ಅವರ ಕಲ್ಯಾಣಕ್ಕೇ ಬಳಕೆ ಮಾಡಬೇಕು. ಪುರಸಭೆ ಹಾಗೂ ನಗರಸಭೆಗಳಲ್ಲಿ ಶೇ 24.5 ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಶೇ 25 ಅನುದಾನವನ್ನು ಪರಿಶಿಷ್ಟರಿಗೆ ಮೀಸಲಿಡಲಾಗಿದೆ. ಈ ಹಣವನ್ನು ಇತರೆ ಕಾರ್ಯಗಳಿಗೆ ಬಳಸುವುದು ಅಪರಾಧ. ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ–ಪಂಗಡ ಕೇರಿ ಹಾಗೂ ಕಾಲೋನಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದು ಆತಂಕಕಾರಿ ಸಂಗತಿ. ಇದನ್ನು ಸಂಪೂರ್ಣವಾಗಿ ತಡೆಯಲು ಅಬಕಾರಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜಾಗೃತಿ ಸಮಿತಿ ಸಭೆಗಳು ಕಾಲಮಿತಿಯೊಳಗೆ ನಡೆಯಬೇಕು. ಪೊಲೀಸ್ ಠಾಣೆಗಳಲ್ಲಿ ಪರಿಶಿಷ್ಟ ಸಮುದಾಯದವರಿಗೆ ಗೌರವ ಮತ್ತು ಸೌಜನ್ಯದಿಂದ ವರ್ತಿಸಬೇಕು ಎಂದು ನಿರ್ದೇಶನ
ನೀಡಿದರು.
ಪಿಟಿಸಿಎಲ್ ಕಾಯ್ದೆಯಡಿ ಭೂ ಒತ್ತುವರಿ ಹಾಗೂ ಭೂ ಒಡೆತನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಹೈಕೋರ್ಟ್‌ನಲ್ಲಿ ತಡೆ ಇರುವ ಪ್ರಕರಣಗಳ ವಿಲೇವಾರಿಗೆ ಆಯೋಗವು ಮೂವರು ವಕೀಲರನ್ನು ನೇಮಿಸಿದ್ದು, ದೂರುದಾರರು ಇದರ ಸದುಪಯೋಗ ಪಡೆಯಬಹುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಬಸವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ನಾಗರಾಜ್, ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಕಾರ್ಯದರ್ಶಿ ಎಚ್.ಎಸ್. ಶಿವರಾಮ್, ಸದಸ್ಯ ಕುಂಬಯ್ಯ, ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರೇಮ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.