ADVERTISEMENT

ಶಾಲಾ ವಾರ್ಷಿಕೋತ್ಸವ: ಪ್ರಗತಿಪರ ರೈತರು, ನಿವೃತ್ತ ಯೋಧರು, ಶಿಕ್ಷಕರಿಗೆ ಸತ್ಕಾರ

ಪ್ರಯುಕ್ತ ಸಮಾರಂಭ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 5:54 IST
Last Updated 24 ಫೆಬ್ರುವರಿ 2026, 5:54 IST
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಮಂಚನಹಳ್ಳಿ ರೈನ್ ಬೋ ಪಬ್ಲಿಕ್ ಶಾಲೆಯಲ್ಲಿ ಆರ್‌ಪಿಎಸ್‌ ವಿಜಯೋತ್ಸವವನ್ನು ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಟಿಸಿದರು
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಮಂಚನಹಳ್ಳಿ ರೈನ್ ಬೋ ಪಬ್ಲಿಕ್ ಶಾಲೆಯಲ್ಲಿ ಆರ್‌ಪಿಎಸ್‌ ವಿಜಯೋತ್ಸವವನ್ನು ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಟಿಸಿದರು   

ಆನೇಕಲ್: ತಾಲ್ಲೂಕಿನ ಅತ್ತಿಬೆಲೆ ಸಮೀಪದ ಮಂಚನಹಳ್ಳಿ ರೈನ್‌ ಬೋ ಪಬ್ಲಿಕ್‌ ಶಾಲೆಯಲ್ಲಿ ಆರ್‌ಪಿಎಸ್‌ ವಿಜಯೋತ್ಸವ ಆಯೋಜಿಸಲಾಗಿತ್ತು. ಶಾಲಾ ವಾರ್ಷಿಕೋತ್ಸವ ಪ್ರಯುಕ್ತ ಪ್ರಗತಿಪರ ರೈತರು, ನಿವೃತ್ತ ಯೋಧರು, ನಿವೃತ್ತ ಶಿಕ್ಷಕರಿಗೆ ಆರ್‌ಪಿಎಸ್‌ ಸಮರ್ಪಣ ಅಭಿನಂದನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಆರ್‌ಪಿಎಸ್‌ ವಿಜಯೋತ್ಸವದಲ್ಲಿ 50 ಮಂದಿ ಪ್ರಗತಿಪರ ರೈತರು, 10 ಮಂದಿ ನಿವೃತ್ತ ಯೋಧರು, 30 ಮಂದಿ ನಿವೃತ್ತ ಶಿಕ್ಷಕರು, 20 ಮಂದಿ ಅನಾಥಾಶ್ರಮ ಮತ್ತು ವೃದ್ಧಾಶ್ರಮ ನಡೆಸುವವರಿಗೂ ಸತ್ಕರಿಸಲಾಯಿತು.

ಕೋಲಾರ ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡಬೇಕು. ಶಾಲಾ ವಾರ್ಷಿಕೋತ್ಸವ ಮನರಂಜನೆಗೆ ಸೀಮಿತವಾಗದೆ ಪ್ರಗತಿಪರ ಚಿಂತನೆಗಳಿಗೆ ದಾರಿಯಾಗಬೇಕು. ಈ ನಿಟ್ಟಿನಲ್ಲಿ ಆರ್‌ಪಿಎಸ್‌ ವಿಜಯೋತ್ಸವವನ್ನು ಪ್ರಗತಿಪರ ರೈತರು, ನಿವೃತ್ತ ಯೋಧರು, ನಿವೃತ್ತ ಶಿಕ್ಷಕರೊಂದಿಗೆ ಆಚರಿಸಿರುವುದು ಅರ್ಥಪೂರ್ಣವಾಗಿದೆ. ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ಈ ನಿಟ್ಟಿನಲ್ಲಿ ಯುವಕರು ತಮ್ಮ ಪೋಷಕರನ್ನು ಗೌರವದಿಂದ ಕಾಣಬೇಕು ಎಂದರು.

ADVERTISEMENT

ಪ್ರಗತಿಪರ ರೈತ ಅಶೋಕ್‌ ಕುಮಾರ್‌ ಮಾತನಾಡಿ, ‘ರೈತರ ಜೀವನ ಪ್ರಕೃತಿಯೊಂದಿಗೆ ಜೂಜಾಟವಾಗಿದೆ. ಎದ್ದರೆ ಕುಬೇರ ಬಿದ್ದರೆ ಸಾಲಗಾರ ಇಂತಹ ಜೀವನ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೈತರಿಗೆ ಹೆಣ್ಣು ಕೊಡುತ್ತಿಲ್ಲ. ಎಂಟೆಕ್‌ ಪದವೀಧರರಾಗಿದ್ದರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೃಷಿಕರ ಜೀವನ ನಡೆಸುವುದೇ ಕಷ್ಟವಾಗಿದೆ. 2030ರೊಳಗಾಗಿ ಐಟಿ ಉದ್ಯಮ ನೆಲಕಚ್ಚಿದ ನಂತರ ಕೃಷಿಕರ ಜೀವನವೇ ಮೇಲು ಎಂಬ ಭಾವನೆ ಮೂಡುತ್ತದೆ’ ಎಂದರು.

ರೈನ್‌ ಬೋ ಪಬ್ಲಿಕ್‌ ಶಾಲೆ ಮುಖ್ಯಸ್ಥ ವಿಜಯಕುಮಾರ್‌ ಗೌಡ ಮಾತನಾಡಿ ‘ನಮ್ಮ ಶಾಲೆಯಲ್ಲಿ ಅಧ್ಯಯನ ನಡೆಸಿದ ಸಮೀಕ್ಷ ಎಂಬ ಯುವತಿ ಇಂಡೋ ಬಾಂಗ್ಲಾ ಗಡಿಯಲ್ಲಿ ಬಿಎಸ್‌ಎಫ್‌ ಯೋಧಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೇ ನಮ್ಮ ವಿದ್ಯಾರ್ಥಿಗಳಿಗೆ ಸ್ಫೂರ್ತಿ. ಮನೆ ಮನೆಯಲ್ಲೂ ಯೋಧರು ನಿರ್ಮಾಣವಾಗಬೇಕು ಎಂಬ ನಿಟ್ಟಿನಲ್ಲಿ ಯೋಧರು, ರೈತರ ಬಗ್ಗೆ ಜಾಗೃತಿ ಮೂಡಿಸಲು ಆರ್‌ಪಿಎಸ್‌ ಸಮರ್ಪಣೋತ್ಸವ ಆಯೋಜಿಸಲಾಗಿದೆ ಎಂದರು.

ನಟ ಡಾರ್ಲಿಂಗ್‌ ಕೃಷ್ಣ, ನಟಿಯರಾದ ಮಿಲನ ನಾಗರಾಜು, ನಿಶ್ವಿಕಾ ನಾಯ್ಡು, ಮೇಘಾ ಶೆಟ್ಟಿ  ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು. ಹೊಸೂರು ಶಾಸಕ ವೈ.ಪ್ರಕಾಶ್‌, ವಿಧಾನ ಪರಿಷತ್‌ ಸದಸ್ಯ ರಾಮೋಜಿಗೌಡ, ಲೇಖಕ ಬಾಗೂರು ಮಾರ್ಕಾಂಡೇಯ, ನಿವೃತ್ತ ಯೋಧ ರಘುರಾಮರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂಪಂಗಿರಾಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಗುರುಮೂರ್ತಿ, ಹಂಸ ಸಂಘಟನೆಯ ರವಿಕುಮಾರ್‌, ವಿನಯ್‌, ರಾಜೇಂದ್ರ ಪ್ರಸಾದ್‌, ಪಳ್ಳೇಳ್ಳಪ್ಪ ಯಾದವ್‌, ಕಾಳಿನಾಥ್‌, ಯೋಗೇಶ್‌ ಕೃಷ್ಣಪ್ಪ, ಎಲ್.ಎನ್.ಬಾಬು, ಅಜಯ್‌, ಶಿವಪ್ಪ ಇದ್ದರು.

ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಮಂಚನಹಳ್ಳಿ ರೈನ್ ಬೋ ಪಬ್ಲಿಕ್ ಶಾಲೆಯಲ್ಲಿ ಆರ್‌ಪಿಎಸ್‌ ವಿಜಯೋತ್ಸವದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.