ADVERTISEMENT

ರೇಷ್ಮೆಗೂಡು ಬೆಲೆ ಇಳಿಕೆ: ಕಟಾವು ಆಗದ ಹಿಪ್ಪುನೇರಳೆ

ಕುಸಿದ ಬೇಡಿಕೆ l ರೇಷ್ಮೆಗೂಡು ಬೆಲೆ ಇಳಿಕೆ l ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 6:31 IST
Last Updated 13 ಆಗಸ್ಟ್ 2020, 6:31 IST
ವಿಜಯಪುರದ ಚನ್ನರಾಯಪಟ್ಟಣದ ಬಳಿ ಕಟಾವಾಗದೇ ಇರುವ ಹಿಪ್ಪುನೇರಳೆ ಬೆಳೆ ಎದುರು ರೈತ ರಾಮಕೃಷ್ಣಪ್ಪ
ವಿಜಯಪುರದ ಚನ್ನರಾಯಪಟ್ಟಣದ ಬಳಿ ಕಟಾವಾಗದೇ ಇರುವ ಹಿಪ್ಪುನೇರಳೆ ಬೆಳೆ ಎದುರು ರೈತ ರಾಮಕೃಷ್ಣಪ್ಪ   

ವಿಜಯಪುರ: ರೇಷ್ಮೆಗೂಡಿನ ಬೆಲೆ ಮತ್ತು ರೇಷ್ಮೆನೂಲು ಧಾರಣೆಯಲ್ಲಿ ಕುಸಿತವಾಗಿರುವ ಬೆನ್ನಲ್ಲೆ ಈಗ ಹಿಪ್ಪುನೇರಳೆ ಸೊಪ್ಪಿಗೆ ಬೇಡಿಕೆಯಿಲ್ಲದೆ, ಸೊಪ್ಪು ಬೆಳೆದಿರುವ ಬೆಳೆಗಾರರು ಕಂಗಾಲಾಗಿದ್ದಾರೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ಸೋಂಕು ನಿಯಂತ್ರಣ ಮಾಡಲುಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿತು. ಅಂದಿನಿಂದಲೂ ರೇಷ್ಮೆಗೂಡು ಹಾಗೂ ರೇಷ್ಮೆ ನೂಲಿನ ಬೆಲೆ ದಿನೇ ದಿನೇ ಕುಸಿತವಾಗುತ್ತಿದೆ. ಪರಿಣಾಮ ಬಹಳಷ್ಟು ರೈತರು ರೇಷ್ಮೆ ಬೆಳೆಯಿಂದ ವಿಮುಖರಾಗಿದ್ದಾರೆ. ಪರಿಣಾಮ ರೈತರು ಬೆಳೆದಿರುವ ಹಿಪ್ಪುನೇರಳೆ ಸೊಪ್ಪಿಗೆ ಬೇಡಿಕೆಯಿಲ್ಲದಾಗಿದೆ.

ಐದು ಅಡಿ ಎತ್ತರಕ್ಕೆ ಬೆಳೆದು ನಿಂತರೂ ಕಟಾವಾಗಿಲ್ಲ. ದನಕರುಗಳ ಪಾಲಾಗುತ್ತಿದೆ. ವರ್ಷದ ಆರಂಭದಲ್ಲಿ ಒಂದು ಮೂಟೆ ಹಿಪ್ಪುನೇರಳೆ ಸೊಪ್ಪಿಗೆ ₹ 800 ರಿಂದ 1 ಸಾವಿರದವರೆಗೂ ಇತ್ತು. ಈಗ ಕೇಳುವವರೇ ಇಲ್ಲವಾಗಿದೆ. ಗ್ರಾಮೀಣ ಭಾಗದಲ್ಲಿನ ಮನೆ ಮಂದಿಗೆಲ್ಲಾ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದ ರೇಷ್ಮೆ
ಉದ್ಯಮ ತೆರೆಮರೆಗೆ ಸರಿಯುತ್ತಿದೆ. ನಿರುದ್ಯೋಗದ ಸಮಸ್ಯೆ ಮತ್ತಷ್ಟು ಹೆಚ್ಚಾಗುವಂತಹ ಆತಂಕ ಕಾಡಲಾರಂಭಿಸಿದೆ.

ADVERTISEMENT

ಸರ್ಕಾರಿ ಉದ್ಯೋಗ ಅವಕಾಶ ಬಂದರೂಸಾಕಷ್ಟು ಮಂದಿ ವಿದ್ಯಾವಂತರು ಸ್ವಾವಲಂಬನೆಯ ಜೀವನ ನಡೆಸುವ ಉದ್ದೇಶದಿಂದ ಕೃಷಿಯನ್ನು ಆಯ್ದುಕೊಂಡಿದ್ದಾರೆ. ಹೈನುಗಾರಿಕೆ, ಕೃಷಿ, ರೇಷ್ಮೆ, ಹಣ್ಣು ತರಕಾರಿ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ.ಬೆಂಗಳೂರು ಮಹಾನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ರೈತರ ಮಕ್ಕಳು, ಈಗ ಮನೆಗೆ ವಾಪಸಾಗಿದ್ದಾರೆ. ಆದರೆ, ಈಗ ರೇಷ್ಮೆ ಉದ್ಯಮವೂ ತೆರೆಮರೆಗೆ ಸರಿಯುತ್ತಿರುವುದರಿಂದ ಮುಂದೇನು ಎನ್ನುವ ಚಿಂತೆ ಅವರಲ್ಲಿ ಆವರಿಸಿದೆ.

‘ಮಳೆಯಿಂದ ಪ್ರಯೋಜನವಾಗಿಲ್ಲ’:ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಬಿಸಿಲು ಹೆಚ್ಚುತ್ತಲೇ ಇತ್ತು. ಈ ಬಾರಿ ತಾಪಮಾನ 40 ಡಿಗ್ರಿ ಆಸುಪಾಸು ತಲುಪಿ ಜನರನ್ನು ಹೈರಾಣಾಗಿಸಿತ್ತು. ಇದರ ನಡುವೆಯೇ ರೈತರು ಹಿಪ್ಪುನೇರಳೆ ಬೆಳೆಯುತ್ತಿದ್ದಾರೆ. ಕಳೆದ ವರ್ಷ ರೈತರ ಅನೇಕ ತೋಟಗಳಲ್ಲಿ ಮೊದಲ ಬಾರಿಗೆ ನಾಟಿ ಮಾಡಿದ ಹಿಪ್ಪುನೇರಳೆ ಗಿಡಗಳು ಸಮಯಕ್ಕೆ ಸರಿಯಾಗಿ ನೀರುಣಿಸದೆ ಒಣಗಿವೆ. ಇತ್ತೀಚೆಗೆ ಬಿದ್ದ ಮಳೆಯಿಂದ ಏನೂ ಪ್ರಯೋಜನವಾಗಿಲ್ಲ. ಹೊಸದಾಗಿ ಹಿಪ್ಪುನೇರಳೆ ನಾಟಿ ಮಾಡಲು ಹಾಕಿದ ಬಂಡವಾಳವೂ ವ್ಯರ್ಥವಾಗಿದೆ. ಬೆಳೆ ಕಟಾವಾಗದೇ ಉಳಿದಿದ್ದು, ಮನಸ್ಸಿಗೆ ನೋವಾಗುತ್ತದೆ ಎಂದು ರೈತ ರಾಮಕೃಷ್ಣಪ್ಪ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.