
ಅನುಗೊಂಡನಹಳ್ಳಿ(ಹೊಸಕೋಟೆ): ಕೇಂದ್ರ ಸರ್ಕಾರವು ದಕ್ಷಿಣದ ಬಿಜೆಪಿಯೇತರ ರಾಜ್ಯಗಳಲ್ಲಿ ಕೇಂದ್ರದ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದೆ ಮಲತಾಯಿ ಧೋರಣೆ ತಾಳಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ತಾಲ್ಲೂಕಿನ ಅನುಗೊಂಡನಹಳ್ಳಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯಗಳ ಸಹಭಾಗಿತ್ವದಲ್ಲಿ ಈ ಹಿಂದೆಯೇ ಕೊರಳುರು–ಕೆ. ಮಲ್ಲಸಂದ್ರ ರೈಲ್ವೆ ಮೇಲ್ಸೇತುವ ನಿರ್ಮಾಣಕ್ಕೆ ಅನುಮತಿ ಸಿಕ್ಕಿತ್ತು. ಆದರೆ ಕೇಂದ್ರ ಸರ್ಕಾರದ ತಾರತಮ್ಯದಿಂದ ಕಾಮಗಾರಿ ವಿಳಂಬವಾಗಿದೆ.
ಕೇಂದ್ರ ಸರ್ಕಾರದ ಪಾಲು ₹53 ಕೋಟಿ ರಾಜ್ಯ ಸರ್ಕಾರದ ಪಾಲು ₹51 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಬೇಕಿತ್ತು. ರಾಜ್ಯ ಸರ್ಕಾರ ಪ್ರಗತಿ ಆಧಾರದ ಮೇಲೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುತ್ತೆ. ಕಾಮಗಾರಿ ಆರಂಭಕ್ಕೆ ಬೇಕಾದ ₹9 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ ಈ ಮಧ್ಯೆ ಕೇಂದ್ರ ಸರ್ಕಾರವು ಕಾನೂನು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಸಂಪೂರ್ಣ ₹51 ಕೋಟಿಯನ್ನು ಠೇವಣಿ ಇಟ್ಟರೆ ಮಾತ್ರವೇ ಕೇಂದ್ರದ ಪಾಲಾದ ₹53 ಕೋಟಿಯನ್ನು ಬಿಡುಗಡೆ ಮಾಡುವುದಾಗಿ ಹೊಸ ಕ್ಯಾತೆ ತೆಗೆದಿದಿದೆ ಎಂದು ದೂರಿದರು.
ಇದನ್ನು ಗಮನಿಸಿದರೆ ಬಿಜೆಪಿಯೇತರ ದಕ್ಷಿಣದ ರಾಜ್ಯಗಳಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದರು.
ರಾಜ್ಯ ಸರ್ಕಾರದ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕೆ. ಮಲ್ಲಸಂದ್ರ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಕೇಳಿರುವ ರಾಜ್ಯದ ಪಾಲಿನ ಸಂಪೂರ್ಣ ₹51 ಕೋಟಿ ಠೇವಣಿ ಇಡಲು ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸಂಸದರು ದತ್ತಿ ಎತ್ತಲಿ: ಕೇಂದ್ರ ಸರ್ಕಾರದ ಅನುದಾನ ಬಿಡುಗಡೆಯಾಗದೆ ಜಲ ಜೀವನ್ ಮಿಷನ್ ಕಾಮಗಾರಿ ಕುಂಠಿತವಾಗಿದೆ. ಮರೇಗಾ ವಿಷಯದಲ್ಲೂ ಕುತಂತ್ರ ನಡೆಸಿ, ಪಕ್ಷಪಾತ ಮಾಡಲಾಗುತ್ತಿದೆ. ಇದರ ವಿರುದ್ಧ ರಾಜ್ಯದಿಂದ ಆಯ್ಕೆಯಾಗಿರುವ 19 ಬಿಜೆಪಿ ಸಂಸದರು ದನಿ ಎತ್ತಿ, ಪ್ರಜಾಪ್ರಭುತ್ವ ಮಾದರಿಯ ಒಕ್ಕೂಟ ವ್ಯವಸ್ಥೆ ಉಳಿಸುವ ಕೆಲಸ ಮಾಡಲಿ ಎಂದು ಶರತ್ ಬಚ್ಚೇಗೌಡ ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮುನಿಯಪ್ಪ, ಕೋಡಿಹಳ್ಳಿ ಸುರೇಶ್, ಗಣಗಲೂರು ಗ್ರಾ.ಪಂ. ಅಧ್ಯಕ್ಷ ಜಯಪ್ಪ, ಉಪಾಧ್ಯಕ್ಷ, ಗುತ್ತಿಗೆದಾರರು, ತಾಲ್ಲೂಕಿನ ಮುಖಂಡರು ಇದ್ದರು.
₹15 ಕೋಟಿ ವೆಚ್ಚ; ಯಾವ್ಯಾವ ಕಾಮಗಾರಿ
ಮುತ್ಸಂದ್ರ ಬೆಳ್ಳಿಕೆರೆ-ಮುತ್ಕೂರು ರಸ್ತೆ ಮುತ್ಕೂರು ತತ್ತನೂರು ಅರೇಹಳ್ಳಿ ಗಣಗಲೂರು ಬಾಗೂರು ಸರ್ಕಲ್ ಸಿದ್ದನಪುರ ಶಿವನಾಪೂರ ಗುಂಡೂರು ಬಾಗೂರು ಗ್ರಾಮಗಳಲ್ಲಿ ಸುಮಾರು ₹15 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಲಾಯಿತು. ಮುತ್ಸಂದ್ರ ಗ್ರಾಮದಲ್ಲಿ ₹60 ಲಕ್ಷ ವೆಚ್ಚದ ಎರಡು ಅಂಗನವಾಡಿ ಕಟ್ಟಡ ನಿರ್ಮಾಣ ₹7 ಕೋಟಿ ವೆಚ್ಚದಲ್ಲಿ 5.5 ಮೀ. ಆಗಲದಲ್ಲಿ ಆನೇಕಲ್ ಗಡಿಯಿಂದ ಬೆಳ್ಳಿಕೆರೆ-ಮುತ್ಕೂರು ರಸ್ತೆ ಮುತ್ಕೂರು ಗ್ರಾಮದಲ್ಲಿ ಈದ್ಗಾ ಮೈದನಾ ಮತ್ತು ದಲಿತರ ಸ್ಮಶಾನಕ್ಕೆ ತೆರಳುವ ರಸ್ತೆ ಅಭಿವೃದ್ಧಿ ಅರೇಹಳ್ಳಿ ಗ್ರಾಮದಲ್ಲಿ ₹50 ಲಕ್ಷ ವೆಚ್ಚದ ಡಾಂಬರೀಕರಣ ಮತ್ತು ಎಸ್‌ಸಿಪಿ ಅಡಿಯ ₹15 ಲಕ್ಷ ವೆಚ್ಚದ ಸಿಸಿ ರಸ್ತೆ ಯುನೈಟೆಡ್ ವೇ ಕಂಪನಿಯ ಸಿಎಸ್‌ಆರ್ ಅನುದಾನದಡಿ ₹2 ಕೋಟಿ ವೆಚ್ಚದಲ್ಲಿ ಕೆರೆಯ ಸಮಗ್ರ ಅಭಿವೃದ್ಧಿ ಬಾಗೂರು ಸರ್ಕಲ್ ಸಿದ್ದನಪುರ ಶಿವನಾಪೂರ ಗುಂಡೂರು ಬಾಗೂರು ಗ್ರಾಮಗಳಲ್ಲಿ ಆರ್‌ಡಿಪಿಆರ್ ಅಡಿಯಲ್ಲಿ ತಲಾ ₹30 ಲಕ್ಷ ವೆಚ್ಚದ ರಸ್ತೆ ಕಾಮಗಾರಿ.
ಕೆರೆಗಳಿಗೆ ಸಿಎಸ್‌ಆರ್
ಜೀವ ಯುನೈಟೆಡ್ ವೇ ಕಂಪನಿ ಸಿಎಸ್‌ಆರ್ ನಿಧಿಯಡಿ ಹಂತ ಹಂತವಾಗಿ ತಾಲ್ಲೂಕಿನ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ₹2.5 ಕೋಟಿ ವೆಚ್ಚದಲ್ಲಿ ಅಂದಕ್ಕನ ಕೆರೆ ₹1.5 ಕೋಟಿ ವೆಚ್ಚದ ಕಣೆಕಲ್ ಕೆರೆ ಅಭಿವೃದ್ಧಿಗೊಳಿಸಲಾಗುತ್ತಿದೆ. ಬೋಧನ ಹೊಸಹಳ್ಳಿ ಕೆರೆ ಶೇ 70ರಷ್ಟು ಕಾಮಗಾರಿ ಪ್ರಗತಿಯಲ್ಲಿದೆ. ಈಗ ಅವರಲ್ಲಿ ಲಭ್ಯವಿರುವ ಅನುದಾನದ ಆಧಾರದಲ್ಲಿ ಜಡಿಗೇನಹಳ್ಳಿ ಹೋಬಳಿಯ ದೊಡ್ಡದಾಸನಹಳ್ಳಿ ಕೆರೆ ಅನುಗೊಂಡನಹಳ್ಳಿ ಹೋಬಳಿಯ ಅರೇಹಳ್ಳಿ ಕೆರೆಯ ಕಾಮಗಾರಿ ಆರಂಭಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.