ADVERTISEMENT

ಆನೇಕಲ್: ಪೌರಕಾರ್ಮಿಕರ ಬಗ್ಗೆ ಕಾಳಜಿವಹಿಸಿ; ಜಗದೀಶ್‌ ಹಿರೇಮನಿ ಒತ್ತಾಯ

ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 16:58 IST
Last Updated 13 ಜುಲೈ 2020, 16:58 IST
ಆನೇಕಲ್‌ನ ಪುರಸಭೆಯಲ್ಲಿ ಕೊರೊನಾ ವಾರಿಯರ್ಸ್ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಗೆ ಪ್ರಮಾಣ ಪತ್ರವನ್ನು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ನೀಡಿದರು
ಆನೇಕಲ್‌ನ ಪುರಸಭೆಯಲ್ಲಿ ಕೊರೊನಾ ವಾರಿಯರ್ಸ್ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಗೆ ಪ್ರಮಾಣ ಪತ್ರವನ್ನು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ನೀಡಿದರು   

ಆನೇಕಲ್: ಕೊರೊನಾ ಸಂಕಷ್ಟದ ಸಮಯದಲ್ಲಿ ಹಗಲಿರುಳೆನ್ನದೇ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಪುರಸಭೆ ಮತ್ತು ನಗರಸಭೆಗಳು ಸುರಕ್ಷಾ ಪರಿಕರಗಳನ್ನು ಕಡ್ಡಾಯವಾಗಿ ನೀಡಬೇಕು. ಅವರ ಆರೋಗ್ಯವನ್ನು ಗಮನಿಸುವುದು ಬದ್ಧತೆಯಾಗಿದೆ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್‌ ಹಿರೇಮನಿ ತಿಳಿಸಿದರು.

ಪಟ್ಟಣದ ಪುರಸಭೆಯಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ ಶ್ರಮಿಸಿದ ಕೊರೊನಾ ವಾರಿಯರ್ಸ್‌ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಗೆ ಪ್ರಮಾಣ ಪತ್ರ ನೀಡಿ ಮಾತನಾಡಿದರು.

ಪೌರಕಾರ್ಮಿಕರಿಗೆ ಮಾಸ್ಕ್, ಕೈಗವಸು, ಶೂ, ಸ್ಯಾನಿಟೈಸರ್ ಸೇರಿದಂತೆ ಸುರಕ್ಷಾ ಪರಿಕರಗಳನ್ನು ನೀಡುವ ಮೂಲಕ ಅವರ ಆರೋಗ್ಯವನ್ನು ಕಾಪಾಡಬೇಕಾಗಿದೆ. ಕೊರೊನಾದ ಪ್ರಕರಣಗಳ ತಡೆಗೆ ಸಂಘಟಿತ ಪ್ರಯತ್ನ ಮಾಡಬೇಕು. ಸಮಾಜದ ಸಂಘ ಸಂಸ್ಥೆಗಳು, ಸರ್ಕಾರದ ವಿವಿಧ ಇಲಾಖೆಗಳು, ಸಾರ್ವಜನಿಕರು ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದರು.

ADVERTISEMENT

ಲಾಕ್‌ಡೌನ್‌ ಸಂದರ್ಭದಲ್ಲಿ ಶ್ರಮಿಸಿದ ಆನೇಕಲ್‌ನ ಸುಮಾರು 20 ಸ್ವಯಂ ಸೇವಾ ಸಂಸ್ಥೆಗಳು, ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಪೌರ ಕಾರ್ಮಿಕರನ್ನು ಆಯೋಗದ ಮೂಲಕ ಅಭಿನಂದಿಸಿ, ಅವರು ಮತ್ತಷ್ಟು ಕೆಲಸ ಮಾಡಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ಕೊರೊನಾ ಸಂಕಷ್ಟದ ಸಮಯದಲ್ಲಿ ಜನರು ತೊಂದರೆಗೆ ಸಿಲುಕಬಾರದು ಎಂಬ ಉದ್ದೇಶದಿಂದ ₹ 20 ಲಕ್ಷ ಕೋಟಿ ಪ್ಯಾಕೇಜ್‌ ಅನ್ನು ‘ಆತ್ಮನಿರ್ಭರ ಭಾರತ’ ಯೋಜನೆಗೆ ನೀಡಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ದೊರೆಯುವಂತೆ ಮಾಡಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ. ಈ ನಿಟ್ಟಿನಲ್ಲಿ ಆತ್ಮನಿರ್ಭರ ಭಾರತ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದರು.

ಆನೇಕಲ್‌ ಸಬ್‌ಇನ್‌ಸ್ಪೆಕ್ಟರ್‌ ಡಿ.ಮುರಳೀಧರ ಮಾತನಾಡಿ, ಮಂಗಳವಾರದಿಂದ ಲಾಕ್‌ಡೌನ್‌ ಜಾರಿ ಮಾಡಲಾಗುತ್ತಿದೆ. ಹಾಗಾಗಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು. ಅನವಶ್ಯಕವಾಗಿ ಮನೆಯಿಂದ ಹೊರಗೆ ಬರುವುದನ್ನು ನಿಲ್ಲಿಸಬೇಕು. ಸೋಂಕು ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡು, ಸಾಮೂಹಿಕ ಹೊಣೆಗಾರಿಕೆಯಿಂದ ಜನರು ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಆನೇಕಲ್‌ನಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ 60 ದಿನಗಳ ಕಾಲ ಹಲವಾರು ಸಂಘ ಸಂಸ್ಥೆಗಳು ನಿತ್ಯ ಆಹಾರದ ವ್ಯವಸ್ಥೆಯನ್ನು ಮಾಡಿದ್ದವು. ಆಹಾರದ ಕಿಟ್‌ ನೀಡಿದ್ದವು. ಪೊಲೀಸ್‌ ಠಾಣೆಯಲ್ಲಿ ದಾಸೋಹ ಕೇಂದ್ರ ತೆರೆಯಲಾಗಿತ್ತು. ಎಲ್ಲರ ಸೇವೆಯು ಸ್ಮರಣೀಯ ಎಂದು ಶ್ಲಾಘಿಸಿದರು.

ಪುರಸಭಾ ಮುಖ್ಯಾಧಿಕಾರಿ ರಾಮಪ್ರಕಾಶ್‌, ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನಳಿನಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.