
ವಿಜಯಪುರ (ದೇವನಹಳ್ಳಿ): ಚಳಿಗಾಲ ಆರಂಭವಾಗುತ್ತಿದಂತೆ ಮಾರುಕಟ್ಟೆಯಲ್ಲಿ ರೇಷ್ಮೆಗೂಡಿಗೆ ಉತ್ತಮ ಬೆಲೆ ಬಂದಿದೆ. ಚಳಿ, ಥಂಡಿಯ ವಾತಾವರಣದಲ್ಲಿ ರೇಷ್ಮೆ ಕೃಷಿ ಮಾಡುವ ರೈತರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ.
ಈಗಿರುವ ವಾತಾವರಣದಲ್ಲಿ ರೇಷ್ಮೆ ಹುಳುವಿನಲ್ಲಿ ಸುಣ್ಣಕಟ್ಟು, ಸಪ್ಪೆ, ಹಾಲು ತೊಂಡೆ ರೋಗ, ಹಣ್ಣಾಗಿರುವ ಹುಳು ಗೂಡು ಕಟ್ಟದೆ ನಿಶ್ಯಕ್ತಿ ಕಳೆದುಕೊಳ್ಳುತ್ತಿರುವುದು, ಒಂದೇ ಸಾರಿ ಜ್ವರಕ್ಕೆ ಬಾರದಂತಹ ರೋಗಬಾಧೆ, ನೂಲು ಬಿಚ್ಚಣಿಕೆ ಸಮಸ್ಯೆ ಸಹಜವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ.
ಮುಖ್ಯವಾಗಿ ರೇಷ್ಮೆ ಹುಳ ನಾಲ್ಕು ಜ್ವರಕ್ಕೆ ಬಂದ ನಂತರ ಏಳೇಂಟು ದಿನಕ್ಕೆ ಹಣ್ಣಾಗಬೇಕಿದ್ದ ಹುಳ ಈ ವಾತಾವರಣದಲ್ಲಿ 10 ರಿಂದ 13 ದಿನಗಳ ಕಾಲ ಸಮಯ ತೆಗೆದುಕೊಳ್ಳುತ್ತಿದೆ. ಹೀಗಾಗಿ ಹುಳುಗಳಿಗೆ ಹೆಚ್ಚುವರಿ ಹಿಪ್ಪು ನೇರಳ ಸೊಪ್ಪು ನೀಡಬೇಕಿದೆ. ಸದ್ಯ ಸೊಪ್ಪಿಗೂ ಕೊರತೆ ಉಂಟಾಗಿರುವ ಕಾರಣ ದುಬಾರಿ ಹಣ ಪಾವತಿಸಿ ಸೊಪ್ಪು ತರಬೇಕಿದೆ. ಇದರಿಂದ ರೈತರಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ. ರೋಗ ಬಾಧೆ, ಇನ್ನಿತರ ಸಮಸ್ಯೆಗಳಿಂದ ಸೂಕ್ತ ಇಳುವರಿ ಇಲ್ಲದೆ ಹಾಕಿದ ಬಂಡವಾಳ ವಾಪಸ್ ಆಗದೆ ಸಾಲ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಮಾನ್ಯವಾಗಿ 100 ಮೊಟ್ಟೆ ರೇಷ್ಮೆ ಹುಳ ಇಟ್ಟ ರೈತ ಸಾಮಾನ್ಯವಾಗಿ 100 ರಿಂದ 110 ಕೆ.ಜಿ ಆಸುಪಾಸಿನಲ್ಲಿ ರೇಷ್ಮೆ ಗೂಡು ಉತ್ಪಾದನೆ ಮಾಡುತ್ತಿದ್ದ. ಪ್ರಸ್ತುತ ವಾತಾವರಣದಲ್ಲಿ ನಾನಾ ಸಮಸ್ಯೆಗಳ ನಡುವೆ 100 ಮೊಟ್ಟೆ ರೇಷ್ಮೆ ಹುಳಕ್ಕೆ 50 ರಿಂದ 60 ಕೆ.ಜಿ ರೇಷ್ಮೆ ಗೂಡು ಉತ್ಪಾದಿಸುವುದೇ ರೈತರಿಗೆ ದೊಡ್ಡ ಸವಾಲಾಗಿದೆ.
ಸೊಪ್ಪಿಗೆ ಅಭಾವ: ಚಳಿ ಅಬ್ಬರ ಹೆಚ್ಚು ಕಂಡು ಬಂದಿರುವುದರಿಂದ ರೇಷ್ಮೆ ಸೊಪ್ಪಿನ ಬೆಳೆವಣಿಗೆ ಕುಂಠಿತಗೊಂಡಿದೆ. ಸೊಪ್ಪಿನಲ್ಲಿ ರೋಗಬಾಧೆ ಹೆಚ್ಚು ಕಾಣಿಸಿಕೊಂಡಿರುವ ಪರಿಣಾಮ ಸೊಪ್ಪಿನ ಗುಣಮಟ್ಟ ಕಳೆದುಕೊಳ್ಳುತ್ತಿದ್ದು, ಇದು ರೇಷ್ಮೆ ಸೊಪ್ಪಿನ ಬೇಡಿಕೆ ಸೃಷ್ಟಿಯಾಗಿದೆ. ರೇಷ್ಮೆ ಹುಳ ಸಾಕಾಣಿಕೆಯ ರೈತರು ಗುಣಮಟ್ಟದ ಹಿಪ್ಪುನೇರಳೆ ಸೊಪ್ಪಿಗೆ ಅಲೆದಾಡುವಂತಹ ಪರಿಸ್ಥಿತಿ ಉಂಟಾಗಿದೆ.
ದರ ದುಬಾರಿ: ₹450 ರಿಂದ ₹500 ಇದ್ದ ಒಂದು ಮೂಟೆ ಹಿಪ್ಪುನೇರಳೆ ಸೊಪ್ಪು ಈಗ ₹600ರಿಂದ ₹800ಕ್ಕೆ ಏರಿಕೆಯಾಗಿದೆ. ಇದರಿಂದ ರೇಷ್ಮೆ ಬೆಳೆಯನ್ನು ದುಬಾರಿ ವೆಚ್ಚ ವ್ಯಯಿಸಿ ರೇಷ್ಮೆ ಬೆಳೆ ಬೆಳೆಯುವಂತಾಗಿದೆ ಎಂದು ರೇಷ್ಮೆ ಕೃಷಿಕ ಗೋಪಾಲ್ ಹೇಳುತ್ತಾರೆ.
ರೇಷ್ಮೆಗೂಡಿಗೆ ಉತ್ತಮ ಬೆಲೆ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ರೈತರು ರೇಷ್ಮೆ ಕೃಷಿಯತ್ತ ಆಸಕ್ತಿ ತೋರಿದ್ದಾರೆ. ಕಳೆದ ವರ್ಷ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5,070 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯಲಾಗಿತ್ತು. ಪ್ರಸಕ್ತ ವರ್ಷ 131 ಹೆಕ್ಟೇರ್ ವಿಸ್ತರಣೆಗೊಂಡು 5,201 ಹೆಕ್ಟೇರ್ ಪ್ರದೇಶ ಹೊಂದಿದೆ. ಜಿಲ್ಲೆಯಲ್ಲಿ ದೇವನಹಳ್ಳಿ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೇಷ್ಮೆ ಬೆಳೆಗಾರರಿದ್ದು, ನೆಲಮಂಗಲ ಅತಿ ಕಡಿಮೆ ಬೆಳೆಗಾರರ ಸಂಖ್ಯೆ ಹೊಂದಿದೆ.
ರೇಷ್ಮೆ ಗೂಡಿನ ದರ
ಗರಿಷ್ಠ - ₹785
ಕನಿಷ್ಠ -₹398
ಇಲಾಖೆಯಿಂದ ಸಿಗದ ಸ್ಪಂದನೆ
ಚಳಿ ಥಂಡಿ ಮೋಡ ಕವಿದ ವಾತಾವರಣದಲ್ಲಿ ರೇಷ್ಮೆ ಹುಳುವಿನಲ್ಲಿ ಅತಿಯಾದ ರೋಗ ಬಾಧೆ ಕಂಡು ಬರುತ್ತಿದೆ. ಇದನ್ನು ನಿಯಂತ್ರಿಸಲು ರೈತರಿಗೆ ಮಾಹಿತಿ ಕೊರತೆ ಎದುರಾಗಿದೆ. ರೇಷ್ಮೆ ಇಲಾಖೆ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆಯದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಳೆಗಾರರಿಗೆ ಕಂಟಕ
ರೇಷ್ಮೆಗೂಡಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಆದರೆ ವಿಪರೀತ ಚಳಿಯು ರೇಷ್ಮೆ ಬೆಳೆಗಾರರಿಗೆ ಕಂಟಕವಾಗಿ ಪರಿಣಮಿಸಿದೆ. ರೇಷ್ಮೆ ಹುಳುಗಳಲ್ಲಿ ಸಪ್ಪೆ ಸುಣ್ಣಕಟ್ಟು ಹಾಲು ತೊಂಡೆ ರೋಗ ಬಾಧೆಯಿಂದ ರೇಷ್ಮೆ ಉತ್ಪಾದನೆಯಲ್ಲಿ ಇಳುವರಿ ಕುಸಿತ ಕಂಡು ಬರುತ್ತಿದ್ದು ರೈತರಿಗೆ ನಷ್ಟವಾಗುತ್ತಿದೆ ಎನ್ನುತ್ತಾರೆ ರೇಷ್ಮೆ ಬೆಳೆಗಾರ ಮಂಜುನಾಥ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.