ದೊಡ್ಡಬಳ್ಳಾಪುರ: 1926 ಜನವರಿ 26ಕ್ಕೆ (ಡಿ.ಕೊಂಗಾಡಿಯಪ್ಪ ಅವರು ಪ್ರಥಮ ಬಾರಿಗೆ ಪುರಸಭೆ ಅಧ್ಯಕ್ಷರಾಗಿದ್ದು) ಶತಮಾನ ಪೂರೈಸುತ್ತಿರುವ ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷರಾಗಿರುವ ಕೆ.ಸುಮಿತ್ರ ಅವರು 2025-26ನೇ ಸಾಲಿಗೆ ₹1.1 ಕೋಟಿ ಉಳಿತಾಯ ಬಜೆಟ್ ಮಂಡಿಸಿದ್ದಾರೆ. ನಗರದ ಸಮಗ್ರ ಅಭಿವೃದ್ಧಿ, ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಬಜೆಟ್ ಮಂಡನೆಯಲ್ಲಿ ಹೇಳಿದ್ದಾರೆ. 2011ರ ಜನಗಣತಿಯಂತೆ 90 ಸಾವಿರ ಜನಸಂಖ್ಯೆ ಹೊಂದಿದ್ದ ನಗರಸಭೆ, ಈಗ ಒಂದೂವರೆ ಪಟ್ಟು ಹೆಚ್ಚಾಗಿದೆ ಹಾಗೆಯೇ ವಿಸ್ತರಣೆಯೂ ಆಗಿದೆ.
ನಗರಸಭೆ ಒಂದು ದಶಕದ ಬಜೆಟ್ ಪ್ರತಿಗಳನ್ನು ಗಮನಿಸಿದರೆ ಪ್ರತಿ ಬಾರಿಯ ಬಜೆಟ್ ಮಂಡನೆಯಲ್ಲೂ ಕೆಲವು ಕೆಲಸಗಳಿಗೆ ಹಣ ಮೀಸಲಿಡಲಾಗುತ್ತದೆ. ಈ ಹಣದ ಮೊತ್ತ ಪ್ರತಿ ವರ್ಷವೂ ಹೆಚ್ಚಾಗುತ್ತಲೂ ಬಂದಿದೆ. ಆದರೆ, ವಾಸ್ತವದಲ್ಲಿ ಮಾತ್ರ ಅನುಷ್ಠಾನವಾಗಿರುವುದನ್ನು ಗಮನಿಸಿದರೆ ಶೂನ್ಯ ಫಲಿತಾಂಶವೇ ಕಾಣುತ್ತಿದೆ ಎನ್ನುವುದು ನಗರಸಭೆ ಆಡಳಿತವನ್ನು ಗಮನಿಸುತ್ತ ಬಂದಿರುವ ಸಾರ್ವಜನಿಕರ ಅಭಿಪ್ರಾಯ.
ನಗರದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆ, ವಿಸ್ತಾರಕ್ಕೆ ತಕ್ಕಂತೆ ನಗರಸಭೆ ಆಡಳಿತ ಯಂತ್ರ, ಅಭಿವೃದ್ಧಿಗಳಿಗೆ ಸಜ್ಜಾಗದೆ ಇರುವುದು, ಪೇಪರ್ ಲೇಸ್ ಆಡಳಿತ, ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಫ್ ಮೂಲಕ ಕಡತಗಳ ವಿಲೇವಾರಿ ನಡೆಯುತ್ತಿದೆ. ಆದರೆ, ನಗರಸಭೆ ಆಡಳಿತ ಮಾತ್ರ ದಶಕಗಳಷ್ಟು ಹಿಂದೆ ಇರುವುದು ಜನರ ಬೇಸರಕ್ಕೆ ಕಾರಣವಾಗಿದೆ.
ಮಳೆ ನೀರು ಸಂಗ್ರಹಕ್ಕೆ ಆದ್ಯತೆ ದೊರೆತಿಲ್ಲ:
ಸುಮಾರು 1.20ಲಕ್ಷ ಸಂಖ್ಯೆ ಹೊಂದಿರುವ ನಗರದ ಜನರು ಕುಡಿಯಲು, ದಿನ ಬಳಕೆಗೆ ಅವಲಂಭಸಿರುವುದು ಜಕ್ಕಲಮೊಡಗು ಜಲಾಶಯ ಹಾಗೂ ಕೊಳವೆ ಬಾವಿಗಳಿಂದ ಬರುವ ನೀರಿನ ಮೇಲೆ. ಮನೆ ಕಟ್ಟಲು ಪರವಾನಗಿ ನೀಡುವಾಗ ಮಳೆ ನೀರು ಸಂಗ್ರಹ ಕಡ್ಡಾಯಗೊಳಿಸಬೇಕು. ಮಳೆ ನೀರು ಸಂಗ್ರಹಕ್ಕೆ ಪ್ರೋತ್ಸಾಹಧನ ನೀಡಬೇಕು ಎನ್ನುವ ಬಗ್ಗೆ ಬಜೆಟ್‌ನಲ್ಲಿ ತಿಳಿಸಲಾಗುತ್ತದೆ. ಆದರೆ, ವಾಸ್ತವದಲ್ಲಿ ಜಾರಿಯಾಗಿಲ್ಲ. ಮಳೆ ನೀರು ಸಂಗ್ರಹ ಮಾಡಿಕೊಳ್ಳುವವರಿಗೆ ಪ್ರೋತ್ಸಾಹಧವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿಲ್ಲ.
ಶತಮಾನ ಪೂರೈಸುತ್ತಿರುವ ನಗರಸಭೆ ವತಿಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಮನವಿ ಸಲ್ಲಿಸಿದ್ದರೂ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಇಲ್ಲದಾಗಿದೆ. ದೊಡ್ಡಬಳ್ಳಾಪುರ ಉತ್ಸವ ಆಚರಿಸಲು ಕಳೆದ ಮೂರು ವರ್ಷಗಳಿಂದಲು ಬಜೆಟ್‌ನಲ್ಲಿ ಪ್ರಸ್ತಾಪಿಸುತ್ತಲೇ ಬರಲಾಗುತ್ತಿದೆ. ಜಾರಿಗೆ ಮಾತ್ರ ಬಂದಿಲ್ಲ ಎನ್ನುತ್ತಾರೆ ಯುವ ಸಂಚಲನದ ಬಿ.ನವೀನ್ ಕುಮಾರ್.
ಉದ್ಯಾನ ಅಭಿವೃದ್ಧಿ ಮರಿಚೀಕೆ
ನಗರದ ಉದ್ಯಾನ ಅಭಿವೃದ್ಧಿಗೆ ₹2 ಕೋಟಿ ನಿರ್ವಹಣೆಗೆ ₹20ಲಕ್ಷ ಮೀಸಲಿಡಲಾಗಿದೆ. ಡಿ.ಕೊಂಗಾಡಿಯಪ್ಪ ಹಸಿರು ವೃಕ್ಷ ಕಾರ್ಯಕ್ರಮ ಹಮ್ಮಿಕೊಳ್ಳಲು ₹20 ಲಕ್ಷ ನಿಗದಿ ಮಾಡಲಾಗಿದೆ. ಸುಮಾರು ಐದು ವರ್ಷಗಳ ಬಜೆಟ್ ಪ್ರತಿಗಳನ್ನು ಗಮನಿಸಿದರೂ ಇವುಗಳಿಗೆ ಹಣ ಮೀಸಲಿಡಲಾಗುತ್ತಿದೆ. ಆದರೆ ಇಡೀ ನಗರದಲ್ಲಿ ಕನಿಷ್ಠ ಒಂದು ನಿರ್ದಿಷ್ಟ ರಸ್ತೆ ಅಥವಾ ಒಂದು ಸರ್ಕಾರಿ ಸ್ಥಳವನ್ನು ಆಯ್ಕೆ ಮಾಡಿಕೊಂಡು ಸಸಿಗಳನ್ನು ಬೆಳೆಸಿಲ್ಲ. ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಸಸಿಗಳನ್ನು ನೆಟ್ಟಿರುವುದು ಬಿಟ್ಟರೆ ಅವುಗಳನ್ನು ಸಂರಕ್ಷಿಸಿ ಬೇಸಿಗೆಯಲ್ಲಿ ನೀರು ಹಾಕಿ ಬೆಳೆಸಿರುವ ನಿದರ್ಶನ ಅಪರೂಪ. ನಗರದ ಮೂರ ಅಥವಾ ನಾಲ್ಕು ಉದ್ಯಾನ ಹೊರತು ಪಡಿಸಿದರೆ ಬಹುತೇಕ ಉದ್ಯಾನ ಅಭಿವೃದ್ಧಿಯಿಂದ ಹಾಗೂ ನಿರ್ವಹಣೆ ಕೊರತೆಯಿಂದ ಪಾಳುಬಿದ್ದಿದೆ. ಆದರೆ ಇವುಗಳ ಅಭಿವೃದ್ಧಿಗೆ ಹಣ ಮಾತ್ರ ಬಜೆಟ್‌ನಲ್ಲಿ ನಿಗದಿಯಾಗುತ್ತಲೇ ಇರುತ್ತದೆ.
- ಮಂಜುನಾಥ್ ನಾಗ್ ಸುಚೇತನ ಎಜುಕೇಷನ್ ಟ್ರಸ್ಟ್ ಮುಖ್ಯಸ್ತ ದೊಡ್ಡಬಳ್ಳಾಪುರ
ಕಸ ನಿರ್ವಹಣೆಹೆ ದೊಡ್ಡ ಮೊತ್ತ ಖರ್ಚು’
ನಗರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ವಡ್ಡರಪಾಳ್ಯದಲ್ಲಿನ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಹಾಕಲಾಗುತ್ತಿದೆ. ಮನೆ ಮನೆಗಳಿಂದ ಹಸಿಕಸ ಒಣಕಸ ಪ್ಲಾಸ್ಟಿಕ್ ಕಸ ಪ್ರತ್ಯೇಕವಾಗಿ ಸಂಗ್ರಹಣೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಕಡೆಗೆ ಅಧಿಕಾರಿಗಳು ಸದಸ್ಯರು ಅಷ್ಟಾಗಿ ಆಸಕ್ತಿ ವಹಿಸದೆ ಈಗ ತ್ಯಾಜ್ಯ ಘಟಕದಲ್ಲಿ ಬೃಹತ್ ಆಗಿ ಕಸ ರಾಶಿ ಬಿದ್ದಿದೆ. ಈ ಕಸದ ರಾಶಿಯನ್ನು ಸಕಾಲದಲ್ಲಿ ಸೂಕ್ತ ರೀತಿಯಲ್ಲಿ ಗೊಬ್ಬರವಾಗಿಸಿ ವಿಲೇವಾರಿ ಮಾಡದೇ ಉದಾಸೀನತೆ ವಹಿಸಿದ್ದರ ಪರಿಣಾಮ 46000 ಟನ್ ಪಾರಂಪರಿಕ ಕಸ ಸಂಗ್ರಹವಾಗಿದೆ. ಈ ಕಸವನ್ನು ಇಲ್ಲಿಂದ ಬೇರೆಡೆಗೆ ವಿಲೇವಾರಿ ಮಾಡಲು ಬಜೆಟ್‌ನಲ್ಲಿ ₹4.38 ಕೋಟಿ ಹಣ ಮೀಸಲಿಡಿಲಾಗಿದೆ. ತಳಮಟ್ಟದಲ್ಲಿ ಕಸ ಸಂಗ್ರಹಣೆಗೆ ಹೆಚ್ಚಿನ ಒತ್ತು ನೀಡದೆ ಹೋಗಿದ್ದೇ ಈಗ ಕಸ ವಿಲೇವಾರಿಗೆ ದೊಡ್ಡಮೊತ್ತದ ಹಣ ಖರ್ಚು ಮಾಡುವಂತಾಗಿದೆ. ನಗರದಲ್ಲಿ ಈಗ ಇರುವುದು ದೇವಾಂಗ ಮಂಡಲಿಯಿಂದ ನಡೆಯುತ್ತಿರುವ ಒಂದು ಚಿತಾಗಾರ. ನಗರಸಭೆ ವತಿಯಿಂದ ಚಿತಾಗಾರ ನಿರ್ಮಾಣಕ್ಕಾಗಿ ಬಜೆಟ್‌ನಲ್ಲಿ ₹4ಕೋಟಿ ಅಂದಾಜಿಸಲಾಗಿದೆ. ಕೋವಿಡ್ ಪ್ರಾರಂಭಕ್ಕೂ ಮುಂಚಿತವಾಗಿಂದಲೂ ಚಿತಾಗಾರಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಡಲಾಗುತ್ತಿದೆ. ಆದರೆ ಇಲ್ಲಿವರೆಗೂ ಚಿತಾಗಾರ ಮಾತ್ರ ಪ್ರಾರಂಭವಾಗಿಲ್ಲ.
- ಅನಿಲ್ ಆರಾಧ್ಯ, ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.