ADVERTISEMENT

ದೇವನಹಳ್ಳಿ | ಎಸ್‍ಟಿಪಿ ಕಾಮಗಾರಿ ಸ್ಥಗಿತಕ್ಕೆ ಆಗ್ರಹ

ತ್ಯಾಜ್ಯ ನೀರು ಸಂಸ್ಕರಣಾ ಘಟಕ ಬೇರೆಡೆ ಸ್ಥಳಾಂತರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 2:33 IST
Last Updated 10 ಸೆಪ್ಟೆಂಬರ್ 2025, 2:33 IST
ವಿಜಯಪುರದ ಎಸ್‍ಟಿಪಿ ಇತರೆ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟಿಸಿದರು
ವಿಜಯಪುರದ ಎಸ್‍ಟಿಪಿ ಇತರೆ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟಿಸಿದರು   

ವಿಜಯಪುರ (ದೇವನಹಳ್ಳಿ): ಪಟ್ಟಣದಲ್ಲಿ ಒಂದೂವರೆ ವರ್ಷಗಳ ಹಿಂದೆ ಪುರಸಭೆಯಿಂದ ಆರಂಭಿಸಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‍ಟಿಪಿ) ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಿ, ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ನೂರಾರು ಸ್ಥಳೀಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ಭಾಗದಲ್ಲಿ ನೂರಾರು ರೈತರು ಕೃಷಿ, ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೂಗಳತೆ ದೂರದಲ್ಲಿ ಅಪಾರ್ಟ್‍ಮೆಂಟ್, ಲೇಔಟ್‍ಗಳು ನಿರ್ಮಾಣಗೊಂಡಿದೆ. ರೇಷ್ಮೆ ಸಾಕಾಣಿಕೆ ಮನೆಗಳಿವೆ. ಇಲ್ಲಿ ಎಸ್‍ಟಿಪಿ ಘಟಕ ಆರಂಭಗೊಂಡರೆ ನೂರಾರು ರೈತರು, ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಯಾಗಲಿದೆ. ಕೂಡಲೇ ಎಸ್‍ಟಿಪಿ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಸ್ಥಳೀಯರು ಸರ್ಕಾರವನ್ನು ಒತ್ತಾಯಿಸಿದರು.

ಸ್ಥಳೀಯ ನಿವಾಸಿ ಕಾರ್ತಿಕ್ ಮಾತನಾಡಿ, ಪಟ್ಟಣದಲ್ಲಿ 2.36 ಗುಂಟೆ ಜಮೀನಿನಲ್ಲಿ ಪುರಸಭೆ ಅಕ್ರಮವಾಗಿ ಎಸ್‍ಟಿಪಿ ಘಟಕ, ಇತರೆ ಕಟ್ಟಡವನ್ನು ನಿರ್ಮಿಸುತ್ತಿದೆ. ಈ ಜಾಗವನ್ನು ಪುರಸಭೆಗೆ ನೀಡಿರುವುದಿಲ್ಲ ಎಂದು ಜಮೀನು ಮಾಲೀಕ ಮುನಾಪೀರ್ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಅವರಿಗೆ ಸರ್ಕಾರದಿಂದ ಈವರೆಗೆ ಯಾವುದೇ ಪರಿಹಾರ ನೀಡಿಲ್ಲ. ಆದರೆ ಪುರಸಭೆ ಜಿದ್ದಿಗೆ ಬಿದ್ದಂತೆ ಇಲ್ಲಿ ಎಸ್‍ಟಿಪಿ ಘಟಕ, ಇತರೆ ಕಾಮಗಾರಿ ನಡೆಸಲು ಮುಂದಾಗಿದೆ ಎಂದು ಆರೋಪಿಸಿದರು.

ಎಸ್‍ಟಿಪಿ ಕಾಮಗಾರಿಯನ್ನು ಕೂಡಲೇ ಕೈಬಿಡಬೇಕು. ಇಲ್ಲಿಂದ ಸ್ಥಳಾಂತರಿಸುವಂತೆ ಕೋರಿ ಜನವರಿಯಲ್ಲಿ ಇಲ್ಲಿನ ನೂರಾರು ರೈತರು, ಸ್ಥಳೀಯರಿಂದ ಪುರಸಭೆಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದೇವೆ. ಆದರೆ ಈವರೆಗೆ ಪುರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ರೈತ ಮಹಿಳೆ ಕಾಮಾಕ್ಷಿ ಮಾತನಾಡಿ, ಜನಸಂದಣಿ ಇರುವ ಸ್ಥಳದಲ್ಲಿ ಎಸ್‍ಟಿಪಿ ಘಟಕ ಆರಂಭಗೊಂಡರೆ ಸ್ಥಳೀಯರಿಗೆ ಹೆಚ್ಚು ಸಮಸ್ಯೆಯಾಗಲಿದೆ. ನಾವು ರೇಷ್ಮೆ ಬೆಳೆ ಬೆಳೆಯುತ್ತೇವೆ ಇದಕ್ಕೆ ತೊಂದರೆಯಾಗಲಿದೆ. ಸ್ಥಳೀಯವಾಗಿರುವ ನ್ಯೂಟೌನ್ ವಿಜಯಪುರ, ಮಿತ್ತನಹಳ್ಳಿ, ಯಲುವಹಳ್ಳಿ, ಹಾರ್ಡಿಪುರ ಗ್ರಾಮದ ನೂರಾರು ಜನರಿಗೆ ನಾನಾ ಸಮಸ್ಯೆಗಳು ಎದುರಾಗಲಿದೆ ಎಂದು ಹೇಳಿದರು.

ಈ ಕಾಮಗಾರಿ ಬಗ್ಗೆ ಇಲ್ಲಿನ ಪುರಸಭೆಯು ಸ್ಥಳೀಯರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಸರ್ಕಾರ ಈ ಕೂಡಲೇ ಇತ್ತ ಗಮನ ಹರಿಸಿ, ಎಸ್‍ಟಿಪಿ ಘಟಕ, ಇತರೆ ಕಾಮಗಾರಿ ನಿಲ್ಲಿಸಿ, ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಪುರಸಭೆ ಅಧಿಕಾರಿಗಳು ಇಲ್ಲಿನ ವಾಸ್ತವಾಂಶದ ಬಗ್ಗೆ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಪುರಸಭೆ ಅಧ್ಯಕ್ಷೆ ಭವ್ಯಾ ಮಹೇಶ್ ಮಾತನಾಡಿ, ಇಲ್ಲಿನ ಜನರ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲಾಗುವುದು ಎಂದು ಸ್ಥಳೀಯ ನಿವಾಸಿಗಳಿಗೆ ಭರವಸೆ ನೀಡಿದರು.

ಮುನಾಪೀರ್, ರೈತ ಸಂಘದ ಅಶೋಕ್, ಹಾರ್ಡಿಪುರ ಜಯರಾಂ, ದೇವರಾಜ್, ಮುನಿರಾಜು, ರಮೇಶ್ ಪ್ರತಿಭಟನೆಯಲ್ಲಿ ಹಾಜರಿದ್ದರು.

ವಿಜಯಪುರದಲ್ಲಿ ನಡೆಯುತ್ತಿರುವ ಎಸ್‍ಟಿಪಿ ಕಾಮಗಾರಿ
ವಿಜಯಪುರದಲ್ಲಿ ನಡೆಯುತ್ತಿರುವ ಎಸ್‍ಟಿಪಿ ಕಾಮಗಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.