ADVERTISEMENT

’ಪ್ಲಾಸ್ಟಿಕ್ ಬಳಸಿದರೆ ಕಠಿಣ ಕ್ರಮ’

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 12:56 IST
Last Updated 3 ಜನವರಿ 2020, 12:56 IST
   

ಸೂಲಿಬೆಲೆ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಪೇಪರ್, ಕವರ್‌ಗಳನ್ನು ಬಳಸುವುದು, ಮಾರಾಟ ಮಾಡುವುದು ಸೇರಿದಂತೆ ನಿಷೇಧಿತ ಪ್ಲಾಸ್ಟಿಕ್ ಬಳಸುವವರಿಗೆ ದಂಡ ವಿಧಿಸಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಂದರ್ ಅವರು ಎಚ್ಚರಿಕೆ ನೀಡಿದ್ದಾರೆ.

‘ಪ್ರಜಾವಾಣಿ’ಯಲ್ಲಿ ‘ಕಾಗದದಲ್ಲೇ ಉಳಿದ ಪ್ಲಾಸ್ಟಿಕ್ ಮಾರಾಟ ನಿರ್ಬಂಧ’ ಎಂಬ ಶೀರ್ಷಿಕೆಯಡಿಯಲ್ಲಿ ಈಚೆಗೆ ಪ್ಲಾಸ್ಟಿಕ್ ಹಾವಳಿ ಮತ್ತು ಬಳಕೆಯ ಕುರಿತು ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಅವರು ಈ ಎಚ್ಚರಿಕೆ ನೀಡಿದರು. ಗುರುವಾರ ಪಟ್ಟಣದಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿದ ಅವರು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಗಳಿಗೆ ದಂಡ ವಿಧಿಸಿದರು. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಸಿದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ಲಾಸ್ಟಿಕ್ ನಿಷೇಧಕ್ಕೆ ವಿರೋಧ: ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಗಳಿಗೆ ಪಿಡಿಒ ಸುಂದರ್ ನೇತೃತ್ವದಲ್ಲಿ ದಂಡ ವಿಧಿಸಿದಾಗ ಭಾರಿ ವಿರೋಧ ವ್ಯಕ್ತವಾಯಿತು. ವಿರೋಧ ವ್ಯಕ್ತಪಡಿಸಿದ ಅಂಗಡಿ ಮಾಲೀಕರು, ‘ನಮಗೆ ಯಾವುದೇ ಎಚ್ಚರಿಕೆ ಮತ್ತು ನೋಟಿಸ್ ನೀಡದೆ ಏಕಾಏಕಿಯಾಗಿ ಬಂದು ದಂಡ ವಿಧಿಸಿರುವುದು ಸರಿಯಲ್ಲ’ ಎಂದು ಹೇಳಿದರು. ‘ಪ್ಲಾಸ್ಟಿಕ್ ಮಾರಾಟ ಮಾಡುವ ದೊಡ್ಡ ಅಂಗಡಿಗಳಿಗೆ ಮೊದಲು ದಂಡ ವಿಧಿಸಿ, ನಿಷೇಧಿಸಿ’ ಎಂದರು.

ADVERTISEMENT

ಸುಂದರ್ ಅವರು ಮಾತನಾಡಿ, ಸೂಲಿಬೆಲೆ ಗ್ರಾಮ ಪಂಚಾಯಿತಿ, ಪ್ಲಾಸ್ಟಿಕ್ ನಿರ್ಬಂಧ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದರು. ಗುರುವಾರದಿಂದ ಪ್ಲಾಸ್ಟಿಕ್ ನಿರ್ಬಂಧ ಕುರಿತು ಪ್ರಚಾರ ಹಮ್ಮಿಕೊಳ್ಳಲಾಗಿದ್ದು, ಪ್ಲಾಸ್ಟಿಕ್ ಬಳಸುವವರ ಮೇಲೆ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.