ಸೂಲಿಬೆಲೆ(ಹೊಸಕೋಟೆ): ಸೂಲಿಬೆಲೆಯ ಹಲವೆಡೆ ಸೂಕ್ತ ಚರಂಡಿ ಹಾಗೂ ರಸ್ತೆ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪ್ರತಿನಿತ್ಯ ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ.
ರಾಜ್ಯ ರಾಜಧಾನಿ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪ ಇರುವ ಸೂಲಿಬೆಲೆಯಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದೆ ರಸ್ತೆಯಲ್ಲೇ ಕೊಳಚೆ ನೀರು ಹರಿಯುತ್ತದೆ. ಬಹುತೇಕ ವಾರ್ಡ್‌ಗಳಲ್ಲಿ ಸಿಸಿರಸ್ತೆ ಇಲ್ಲ, ಎಲ್ಲ ಕಚ್ಚಾ ರಸ್ತೆಗಳೇ. ಮಳೆ ಬಂತೆಂದರೆ ನರಕದ ಹಾದಿಯಾಗಿ ಪರಿಣಮಿಸುತ್ತದೆ.
ದೇವನಹಳ್ಳಿ ಸರ್ಕಲ್‌ನಿಂದ ಗ್ರೈನೇಜ್ ವರೆಗೂ, ದೇವನಹಳ್ಳಿ ರಸ್ತೆಯಲ್ಲಿ, ಮಾರುಕಟ್ಟೆಯ ಒಳಗೆ, ಪಂಚಾಯತಿ ಕಟ್ಟಡದ ಮುಂಭಾಗ, ಬಿಸಿಎಂ ಹಾಸ್ಟಲ್ ಮುಂದೆ, ಮಟನ್ ಮಾರುಕಟ್ಟೆ ಮತ್ತು ಅಂಗನವಾಡಿಗೆ ತೆರಳುವ ಮಾರ್ಗ ಸೇರಿದಂತೆ ಬಹುತೇಕ ರಸ್ತೆಗಳು ಹದಗೆಟ್ಟಿವೆ.
ಮಳೆ ಬಂತೆಂದರೆ ಈ ರಸ್ತೆಗಳು ಕೆಸರಿನ ರಾಡಿಯಾಗುತ್ತದೆ. ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆ ಕೊಳಚೆಯೂ ರಸ್ತೆಯಲ್ಲೇ ಹರಿಯತ್ತದೆ. ಇದರ ನಡುವೆ ಸಂಚರಿಸುವುದು ಒಂದೇ ಸರ್ಕಸ್ ಮಾಡುವುದು ಒಂದೇ. ಮಳೆ ಬಂದಾಗ ಈ ಮಾರ್ಗವನ್ನೇ ಬಿಟ್ಟು ಸುತ್ತಿಬಳಸಿಕೊಂಡು ಸಂಚರಿಸಬೇಕು. ಅನ್ಯಮಾರ್ಗ ಇಲ್ಲದವರು ಮಳೆ ನೀರು ನಿಲ್ಲುವವರೆಗೂ ಕಾಯಬೇಕು. ಇಲ್ಲವೇ ಧೈರ್ಯ ಮಾಡಿ ಕೊಳಚೆಯಲ್ಲೇ ಗಾಡಿ ಚಲಾಯಿಸಬೇಕು. ಗುಂಡಿ ಹಾಗೂ ತಗ್ಗು ಪ್ರದೇಶದಲ್ಲಿ ಮಳೆ ನೀರು ಶೇಖರಣೆಯಾಗಿ ವಾರಗಟ್ಟಲೇ ಸಂಚಾರಕ್ಕೆ ಅಡಚಣೆ ಉಂಟಾಗಿರುತ್ತದೆ.
ರಸ್ತೆ ಪಕ್ಕದಲ್ಲೇ ಕಸ ಸುರಿಯುವುದರಿಂದ ಮಳೆ ನೀರು ಕಸವನ್ನು ಮತ್ತೆ ಬೀದಿ ಮತ್ತು ಮನೆಗಳ ಮುಂದೆ ತಂದು ಬಿಡುತ್ತದೆ. ಮಳೆ ನೀರಿನಿಂದ ಕಸ ಕೊಳತು ದುರ್ನಾತ ಬೀರುತ್ತದೆ.
ಎಲ್ಲಿಯೂ ಪಾದಚಾರಿ ಮಾರ್ಗ ಇಲ್ಲದ ಕಾರಣ ರಸ್ತೆಯಲ್ಲೇ ಗುಂಡಿ, ಕೊಳಚೆ ನೀರು ಮತ್ತು ಕಸವನ್ನು ದಾಟಿಕೊಂಡಿ ಹೋಗಬೇಕು. ಇನ್ನೂ ದ್ವಿಚಕ್ರ ವಾಹನ ಸವಾರರು ಈ ರಸ್ತೆಗಳಲ್ಲಿ ಜೀವವನ್ನು ಕೈ ಯಲ್ಲಿ ಹಿಡಿದು ಸಾಗಬೇಕಿದೆ. ಸ್ವಲ್ಪ ಎಚ್ಚರ ತಪ್ಪಿದರೆ ಜಾರಿಬೀಳುವುದು ಖಚಿತ.
ಅಂಗನವಾಡಿಗೆ ಮಕ್ಕಳು ತೆರಳ ಬೇಕೆಂದರೆ ಕೆಸರು ಗದ್ದೆಯಂತಿರುವ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕು. ದೊಡ್ಡವರು ಎಚ್ಚರಿಕೆಯಿಂದ ನಡೆದು ಕೊಂಡು ಬರುತ್ತಾರೆ. ಪುಟ್ಟ ಮಕ್ಕಳು ಜಾರಿ ಬೀಳುವ ಸಾಧ್ಯತೆ ಇರುತ್ತದೆ.
ಪಂಚಾಯತಿ ಮುಂಭಾಗ ಮಟನ್ ಮಾರುಕಟ್ಟೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಅಂಗನವಾಡಿ ರಸ್ತೆಗಗಳೇನು ಭಿನ್ನವಿಲ್ಲ. ಗ್ರಾಮಪಂಚಾಯತಿ ಕಟ್ಟಡದ ಮುಂದೆ ಇರುವ ಸಂಜೀವಿನಿ ಕಟ್ಟಡಕ್ಕೆ ನೂರಾರು ಜನ ಪ್ರತಿನಿತ್ಯ ಕಂಪ್ಯೂಟರ್ ಉಚಿತವಾಗಿ ಕಲಿಯಲು ಬರುತ್ತಾರೆ. ಆದರೆ ಕಟ್ಟಡದ ಮುಂದೆಯೇ ಚರಂಡಿ ನೀರೋ ಇಲ್ಲವೇ ಮಳೆನೀರು ನಿಂತಿರುತ್ತದೆ. ಕಟ್ಟಡ ಆವರಣದ ಸದಾ ಕೆಸರಿನ ಗದ್ದೆಯಂತಿರುತ್ತದೆ.
ಸೂಲಿಬೆಲೆಯಲ್ಲಿ ಸಮರ್ಪಕ ರಸ್ತೆಯಿಲ್ಲ ಪಾದಚಾರಿ ಮಾರ್ಗವಿಲ್ಲ ಆಸ್ಪತ್ರೆ ಬಳಿ ಲಕ್ಷಾಂತರ ಖರ್ಚು ಮಾಡಿ ಶೌಚಾಲಯ ನಿರ್ಮಿಸಿದ್ದಾರೆ ಆದರೆ ಅದಕ್ಕೆ ಬೀಗ ಜಡಿದಿದ್ದಾರೆ. ಇಂತಹ ಅವ್ಯವಸ್ಥೆಗಳು ಸಾಕಷ್ಟಿವೆ. ಈ ಅವ್ಯವಸ್ಥೆ ವಿರುದ್ದ ಧ್ವನಿ ಎತ್ತಿದರೆ ಅವರನ್ನು ಮೊದಲು ಟಾರ್ಗೆಟ್ ಮಾಡುತ್ತಾರೆ ಎಂದು ಆತಂಕದಿಂದ ಹೇಳುತ್ತಾರೆ ಹೆಸರೇಳಲು ಇಚ್ಛಿಸದ ಜನ.
ಬೃಹತ್ ಕಂಪನಿಗಳೇ ಬೆಂಗಳೂರಿನ ರಸ್ತೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿವೆ. ಇನ್ನೂ ಸೂಲಿಬೆಲೆಯ ರಸ್ತೆಗಳು ಕೆಸರು ಗದ್ದೆ ರೀತಿ ಇವೆ ಅಂತ ಹೇಳೋದರಲ್ಲಿ ಅರ್ಥನೇ ಇರುವುದಿಲ್ಲ.-ಮರವೇ ಸುಬ್ರಮಣಿ, ಸ್ಥಳೀಯ ನಿವಾಸಿ
ಅಂಗನವಾಡಿ ಮಕ್ಕಳು ಕೆಸರು ಗದ್ದೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದರೂ ಅಧಿಕಾರಿಗಳು ಪ್ರತಿನಿಧಿಗಳು ನೋಡಿ ಸುಮ್ಮನಿರುತ್ತಾರೆ. ಇದಕ್ಕೆ ಏನು ಪ್ರತಿಕ್ರಿಯಿಸಬೇಕೋ ತಿಳಿಯುತಿಲ್ಲ.-ಸಾದಿಕ್, ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.