
ಸೂಲಿಬೆಲೆ(ಹೊಸಕೋಟೆ): ಸೂಲಿಬೆಲೆ ಠಾಣಾ ವ್ಯಾಪ್ತಿಯ ಮುತ್ಸಂದ್ರ ಗ್ರಾಮದಲ್ಲಿ ಶುಕರವಾರ ರಾತ್ರಿ ನಸುಕಿನ ಜಾವ ಅಸ್ಸಾಂನ ನಾಲ್ವರು ಕಾರ್ಮಿಕರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಜಯಂತ್ ಸಿಂಧೆ(25), ನೀರೇಂದ್ರನಾಥ್ ಟೈ ಡ್(24), ಡಾಕ್ಟರ್ ಟೈಡ್( 25), ಧನಂಜಯ್ ಟೈಡ್ (20) ಮೃತರು.
ವೇರ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮೃತ ನಾಲ್ವರು ಹಾಗೂ ಇವರ ಸ್ನೇಹಿತ ಅಜಯ್ ಛೋಟಾಸಾಬ್ ಎಂಬುವವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು. ಶುಕ್ರವಾರ ಎಲ್ಲರಿಗೂ ಸೆಕೆಂಡ್ ಶಿಫ್ಟ್ ಕೆಲಸ ಇತ್ತು. ಆದರೆ ಅಜಯ್ ಎಂಬುವವರು ಮಾತ್ರ ಕೆಲಸಕ್ಕೆ ತೆರಳಿದ್ದರು. ಉಳಿದ ನಾಲ್ವರು ಹೋಗಿರಲಿಲ್ಲ. ಅಜಯ್ ಕೆಲಸ ಮುಗಿಸಿಕೊಂಡು ಹಿಂದಿರುಗಿದಾಗ ನಾಲ್ವರು ಮೃತಪಟ್ಟಿರುವುದು ಗೊತ್ತಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ವಿ.ಚಂದ್ರಕಾಂತ್, ಎಎಸ್ಪಿ ವೆಂಕಟೇಶ್ ಪ್ರಸನ್ನ, ಡಿವೈಎಸ್‌ಪಿ ಮಲ್ಲೇಶ್, ಸೂಲಿಬೆಲೆ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರವಿಕುಮಾರ್, ಅಪರಾಧ ಪರಿಶೀಲನಾ ತಂಡ ಸೇರಿದಂತೆ ಸೂಲಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮೃತದೇಹಗಳನ್ನು ಶವಪರೀಕ್ಷೆಗಾಗಿ ಹೊಸಕೋಟೆಯ ಎಂವಿಜೆ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಕರಣ ಸಂಬಂದ ತನೆಖೆಯನ್ನು ನಡೆಸಲಾಗುತ್ತಿದೆ ಎಂದು ಸೂಲಿಬೆಲೆ ಪೊಲೀಸರು ತಿಳಿಸಿದ್ದಾರೆ.
ಅನ್ನ ಸೀದ ಹೊಗೆ ಉಸಿರುಕಟ್ಟಿಸಿತೇ?:
ಶುಕ್ರವಾರ ಎಲ್ಲರಿಗೂ ಸೆಕೆಂಡ್ ಶಿಫ್ಟ್ ಕೆಲಸ ಇತ್ತು. ಆದರೆ ಅಜಯ್ ಎಂಬುವವರು ಮಾತ್ರ ಕೆಲಸಕ್ಕೆ ತೆರಳಿದ್ದರು. ಉಳಿದ ನಾಲ್ವರು ಹೋಗಿರಲಿಲ್ಲ. ಇವರಿಗೆ ಕೆಲಸಕ್ಕೆ ಬರಲು ಕಂಪನಿಯವರು ಕರೆ ಮಾಡಿದ್ದರು. ಆದರೆ ಯಾರು ಸ್ವೀಕರಿಸಿರಲಿಲ್ಲ. ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಗ್ಯಾಸ್ ಮೇಲೆ ಇಟ್ಟ ಅನ್ನದ ಪಾತ್ರೆ ಸೀದು ಕೋಣೆಯೆಲ್ಲಾ ತುಂಬಿಕೊಂಡಿತು. ಕಿಟಕಿ ಇಲ್ಲದ ಕಾರಣ ಹೊಗೆ ತುಂಬಿಕೊಂಡು ಉಸಿರುಗಟ್ಟಿ ಮೃತಪಟ್ಟಿರುವ ಸಾಧ್ಯತೆ ಇರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಅಜಯ್ ಕೆಲಸ ಮುಗಿಸಿಕೊಂಡು ರಾತ್ರಿ 11ಗಂಟೆ ಸುಮಾರಿಗೆ ಹಿಂದಿರುಗಿದಾಗ ಮನೆ ಒಳಗಿಂದ ಬಾಗಿಲು ಚಿಲಕ ಹಾಕಿಕೊಂಡಿದ್ದರು. ಎಷ್ಟು ಹೊತ್ತಾದರೂ ಬಾಗಿಲು ತೆರೆಯದ ಕಾರಣ ಬಾಗಿಲು ಮುರಿದು ನೋಡಿದಾಗ ನಾಲ್ವರು ಇದ್ದ ಸ್ಥಿತಿಯಲ್ಲಿ ಮೃತಪಟ್ಟಿದ್ದರು. ಅನ್ನದ ಪಾತ್ರೆ ಸೀದುಹೋಗಿತ್ತು. ಗ್ಯಾಸ್ ಅಫ್ ಮಾಡಿ, ಮನೆ ಮಾಲೀಕ ಛೋಟಾಸಾಬ್‌ಗೆ ಮಾಹಿತಿ ನೀಡಿದರು.
ಮನೆ ಮಾಲೀಕ, ಗ್ರಾಮಸ್ಥರು ರಾತ್ರಿ 12.30ರ ಸುಮಾರಿಗೆ ಸೂಲಿಬೆಲೆ ಪೊಲೀಸರಿಗೆ ಮಾಹಿತಿ ತಿಳಿದ್ದರು. ಶನಿವಾರ ನಸುಕಿನ 1 ಗಂಟೆಗೆ ಸೂಲಿಬೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿದರು.
ಮೃತಪಟ್ಟವರು ವಾಸವಿದ್ದ ಮನೆ ಚಿಕ್ಕದಾಗಿತ್ತು. ಕಿಟಕಿ ಇರಲಿಲ್ಲ ಹೀಗಾಗಿ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.