ADVERTISEMENT

ದೊಡ್ಡಬಳ್ಳಾಪುರ| ಸ್ಥಳೀಯ ನೇಕಾರರಿಗೆ ಸೂರತ್ ಸೀರೆ ಉರುಳು: ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 2:36 IST
Last Updated 23 ನವೆಂಬರ್ 2025, 2:36 IST
ದೊಡ್ಡಬಳ್ಳಾಪುರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಟೆಕ್ಸ್‌ಟೈಲ್‌ ವೀವರ್ಸ್ ಅಸೋಸಿಯೇಷನ್‌ ನೇಕಾರ ಮುಖಂಡರು ಮಾತನಾಡಿದರು
ದೊಡ್ಡಬಳ್ಳಾಪುರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಟೆಕ್ಸ್‌ಟೈಲ್‌ ವೀವರ್ಸ್ ಅಸೋಸಿಯೇಷನ್‌ ನೇಕಾರ ಮುಖಂಡರು ಮಾತನಾಡಿದರು   

ದೊಡ್ಡಬಳ್ಳಾಪುರ: ರೇಪಿಯರ್ ಮಗ್ಗಗಳಲ್ಲಿ ನೇಯ್ದ ಮತ್ತು ಸೂರತ್‌ನ ಏರ್‌ಜೆಟ್ ಸೀರೆಗಳನ್ನು ಸ್ಥಳೀಯ ವ್ಯಾಪಾರಿಗಳೇ ಇಲ್ಲಿಗೆ ತಂದು ಮಾರಾಟ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಸರ್ಕಾರ ರೇಪಿಯರ್ ಮಗ್ಗಗಳಲ್ಲಿ ನೇಯದಂತೆ ಕಾನೂನು ಜಾರಿಗೆ ತರಬೇಕು. ಇಲ್ಲದಿದ್ದರೆ ನೇಕಾರರು ಹೋರಾಟ ನಡೆಸಲಾಗುವುದು ಎಂದು ಟೆಕ್ಸ್‌ಟೈಲ್‌ ವೀವರ್ಸ್ ಅಸೋಸಿಯೇಷನ್‌ ನೇಕಾರ ಮುಖಂಡರು ಒತ್ತಾಯಿಸಿದರು.

ಗುಡಿ ಕೈಗಾರಿಕೆಯ ವಿದ್ಯುತ್‌ ಮಗ್ಗಗಳಲ್ಲಿ ನೇಕಾರರು ತಯಾರು ಮಾಡುವ ಬಟ್ಟೆಗಳನ್ನು ಸೂರತ್ ಹಾಗೂ ಇತರೆಡೆ ರೇಪಿಯರ್ ಮಗ್ಗಗಳಲ್ಲಿ ನೇಯ್ದು ಇಲ್ಲಿಗೆ ತಂದು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದು ನೇಕಾರರಿಗೆ ಉರುಳಾಗುತ್ತಿದೆ. ನಗರದಲ್ಲಿ 25 ಸಾವಿರ ಮಗ್ಗಗಳಿದ್ದು, ನೇಕಾರಿಕೆಯ ವಿವಿಧ ಹಂತಗಳಲ್ಲಿ ನೇಕಾರರು ಹಾಗೂ ಕುಟುಂಬ ಸೇರಿ ಒಂದು ಲಕ್ಷ ಮಂದಿ ಅವಲಂಬಿಸಿದ್ದಾರೆ. ಸೂರತ್‌ ಸೀರೆಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡಿ ಇಲ್ಲಿನ ನೇಕಾರಿಕೆ ಉದ್ಯಮವನ್ನು ಹಾಳು ಮಾಡಲಾಗುತ್ತಿದೆ ಎಂದು ನೇಕಾರ ಮುಖಂಡರಾದ ಆರ್.ಎಸ್.ಶ್ರೀನಿವಾಸ್, ವಿ.ನರಸಿಂಹಮೂರ್ತಿ, ಡಿ.ಆರ್.ಧ್ರುವಕುಮಾರ್ ದೂರಿದರು.

ನೇಕಾರಿಕೆಯನ್ನು ನಂಬಿಕೊಂಡು ನೇಕಾರರು ಬ್ಯಾಂಕ್‌ಗಳಲ್ಲಿ ಮತ್ತು ಸಹಕಾರ ಸಂಘಗಳಲ್ಲಿ ಸಾಲ ಪಡೆದಿದ್ದಾರೆ. ರೇಪಿಯರ್ ಏರ್‌ಜೆಟ್ ಮತ್ತು ಇತರೆ ಆಧುನಿಕ ಮಗ್ಗಗಳಿಂದ ತಯಾರಿಸುತ್ತಿರುವ ಸೀರೆಗಳ ಮಾರಾಟದಿಂದ ಸ್ಥಳೀಯರ ನೇಕಾರರ ಸೀರೆಗಳು ಬಿಕರಿಯಾಗುತ್ತಿಲ್ಲ. ಇದರಿಂದ  ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲ ತೀರಿಸಲಾಗದೇ ತೊಂದರೆಗೆ ಸಿಲುಕಲಿದ್ದಾರೆ ಎಂದು ತಿಳಿಸಿದರು.

ADVERTISEMENT

ನೇಕಾರ ಮುಖಂಡರಾದ ಡಿ.ಪಿ.ಮಂಜುನಾಥ್, ಎಸ್.ಎಂ.ಭಾಸ್ಕರಮೂರ್ತಿ,ಅನಿಲ್ ಕುಮಾರ್, ಬಿ.ಆರ್.ಚಂದ್ರಶೇಖರ್, ಜಿ.ಶಿವಕುಮಾರ್ ಇದ್ದರು.

ಕಾನೂನು ಬಾಹಿರ: ಕ್ರಮಕ್ಕೆ ಆಗ್ರಹ

ಕಾನೂನಿಕ ಪ್ರಕಾರ ಲಾಳಿರಹಿತ ಮಗ್ಗಗಳಲ್ಲಿ (ರೇಪಿಯರ್ ಮತ್ತು ಏರ್ ಜೆಟ್) ಸೀರೆಗಳು ಮತ್ತು ಜರಿ ಸೀರೆಗಳು ಉತ್ಪಾದಿಸುವಂತಿಲ್ಲ. ಹಾಗಾಗಿ ಜವಳಿ ಇಲಾಖೆ ಅಧಿಕಾರಿಗಳು ಈ ಕೂಡಲೇ ರೇಪಿಯರ್ ಮತ್ತು ಏರ್‌ಜೆಟ್ ಮಗ್ಗಗಳ ಮೇಲೆ ಕ್ರಮ ಜರುಗಿಸಿ ಸೀರೆಗಳು ಉತ್ಪಾದನೆ ಹಾಗೂ ಮಾರಾಟವನ್ನು ನಿಲ್ಲಿಸಬೇಕೆಂದು ಟೆಕ್ಸ್‌ಟೈಲ್‌ ವೀವರ್ಸ್ ಅಸೋಸಿಯೇಷನ್‌ ಆಗ್ರಹಿಸಿದೆ. ಸೂರತ್‌ನಲ್ಲಿ ತಯಾರಾಗುವ ಬಟ್ಟೆಗಳನ್ನು ಇಲ್ಲಿನವರೇ ತಂದು ಮಾರಿ ಇಲ್ಲಿನ ನೇಕಾರರಿಗೆ ಅನ್ಯಾಯ ಮಾಡುತ್ತಿರುವುದು ಸಹ ದುರದರಷ್ಟಕರ. ಈ ಬಗ್ಗೆ ಮಾಲೀಕರಿಗೆ ಮನವಿ ಮಾಡಲಾಗಿದ್ದು ಅವರು ಸಹ ನೇಕಾರರ ಹಿತ ಕಾಪಾಡಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೂ ತರಲಾಗಿದೆ. ಇದು ಹೀಗೆಯೇ ಮುಂದುವೆರೆದರೆ ಜವಳಿ ಇಲಾಖೆ ಕಚೇರಿ ಹಾಗೂ ಸೂರತ್ ಸೀರೆ ಮಾರಾಟಗಾರರ ಮನೆಗಳ ಮುಂದೆ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.