ADVERTISEMENT

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಟ್ಯಾಬ್

ಅಮೆಜಾನ್‌ ಕೇರ್ಸ್‌ಪೋರ್ಡ್‌ ಸಂಸ್ಥೆಯಿಂದ ನೆರವು l ಆನ್‌ಲೈನ್‌ ಶಿಕ್ಷಣಕ್ಕೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 8:28 IST
Last Updated 4 ಫೆಬ್ರುವರಿ 2021, 8:28 IST
ಆನೇಕಲ್ ತಾಲ್ಲೂಕಿನ ಬೆಸ್ತಮಾನಹಳ್ಳಿಯಲ್ಲಿ ಅಮೆಜಾನ್ ಕೇರ್ಸ್‌ಫೋರ್ಡ್ ಸಂಸ್ಥೆಯಿಂದ ನೀಡಲಾದ ಟ್ಯಾಬ್‌ಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನರಸಿಂಹರಾಜು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಿದರು
ಆನೇಕಲ್ ತಾಲ್ಲೂಕಿನ ಬೆಸ್ತಮಾನಹಳ್ಳಿಯಲ್ಲಿ ಅಮೆಜಾನ್ ಕೇರ್ಸ್‌ಫೋರ್ಡ್ ಸಂಸ್ಥೆಯಿಂದ ನೀಡಲಾದ ಟ್ಯಾಬ್‌ಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನರಸಿಂಹರಾಜು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಿದರು   

ಆನೇಕಲ್:ಕೊರೊನಾ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ಶಾಲೆಗಳಲ್ಲಿ ನಡೆಸಲು ತೊಂದರೆಯಾಗಿದೆ. ಸಂಘ, ಸಂಸ್ಥೆಗಳು ತಂತ್ರಜ್ಞಾನದ ನೆರವು ನೀಡುವ ಮೂಲಕ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲ ಮಾಡುವ ಅವಶ್ಯಕತೆಯಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನರಸಿಂಹರಾಜು ತಿಳಿಸಿದರು.

ಅವರು ತಾಲ್ಲೂಕಿನ ಬೆಸ್ತಮಾನಹಳ್ಳಿಯಲ್ಲಿ ಅಮೆಜಾನ್‌ ಕೇರ್ಸ್‌ಫೋರ್ಡ್‌ ಸಂಸ್ಥೆಯಿಂದ ಮಾಯಸಂದ್ರ ಮತ್ತು ಕರ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೀಡಲಾದ ಟ್ಯಾಬ್‌ಗಳನ್ನು ವಿತರಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ನೀಡಲು ಸಮಸ್ಯೆಯಾಗಿದೆ. ಹಲವಾರು ಕುಟುಂಬಗಳಲ್ಲಿ ಮೊಬೈಲ್‌ ಸೌಲಭ್ಯವಿಲ್ಲ. ಈ ಸಂದರ್ಭದಲ್ಲಿ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 150 ವಿದ್ಯಾರ್ಥಿಗಳಿಗೆ ಸಂಸ್ಥೆಯು ಟ್ಯಾಬ್‌ಗಳನ್ನು ವಿತರಿಸಿರುವುದು ಉಪಯುಕ್ತವಾಗಿದೆ ಎಂದರು.

ADVERTISEMENT

ತಾಲ್ಲೂಕಿನಲ್ಲಿ ಹಲವಾರು ಸಂಘ, ಸಂಸ್ಥೆಗಳು ಶೈಕ್ಷಣಿಕ ನೆರವು ನೀಡಲು ಮುಂದೆ ಬಂದಿವೆ. ಅವಶ್ಯಕತೆಗಳನ್ನು ಗುರುತಿಸಿ ಎಲ್ಲರಿಗೂ ಸೌಲಭ್ಯಗಳು ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಮತ್ತು ಸರ್ಕಾರಿ ಶಾಲೆಗಳನ್ನು ಬಲವರ್ಧನೆ ಮಾಡಲು ಕ್ರಿಯಾಯೋಜನೆ ರೂಪಿಸಲಾಗುವುದು ಎಂದರು.

ಅಮೆಜಾನ್‌ ಕೇರ್ಸ್‌ ಫೋರ್ಡ್‌ (ಫೋರಂ ಫಾರ್‌ ರೂರಲ್‌ ಡೆವಲಪ್‌ಮೆಂಟ್‌) ಸಂಸ್ಥೆಯ ಮುಖ್ಯಸ್ಥ ಭದ್ರೇಶ್‌ ಮಾತನಾಡಿ, ತಂತ್ರಜ್ಞಾನದ ಬಳಕೆಯಿಂದ ಉತ್ತಮ ವಿಚಾರಗಳನ್ನು ಮತ್ತು ಹೆಚ್ಚಿನ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಲು ಸಾಧ್ಯ. ಜ್ಞಾನ ಯಾವುದೇ ದಿಕ್ಕಿನಲ್ಲಿ ಬಂದರೂ ಅವುಗಳನ್ನು ಸಮರ್ಪಕವಾಗಿ ಸ್ವೀಕರಿಸುವುದರಿಂದ ವಿಚಾರ ಕ್ರಾಂತಿಯಾಗುತ್ತದೆ ಎಂದು ಹೇಳಿದರು.

ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಅಮೆಜಾನ್ ಕೇರ್ಸ್‌ಫೋರ್ಡ್‌ ಸಂಸ್ಥೆಯು ಶಿಕ್ಷಣ, ಆರೋಗ್ಯ, ವೃತ್ತಿ ಕೌಶಲ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಗ್ರಾಮೀಣಾಭಿವೃದ್ಧಿಗೆ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.

ಸಂಸ್ಥೆಯ ಸಿದ್ದರಾಜು, ದಿನೇಶ್‌, ಸುಜಾತಾ, ರಮ್ಯಾ, ಸರಸ್ವತಿ, ವರಲಕ್ಷ್ಮೀ, ಮಾಯಸಂದ್ರ ಪ್ರೌಢಶಾಲೆಯ ಮುಖ್ಯಶಿಕ್ಷಕ ದೇವರ ಭಟ್‌, ಶಿಕ್ಷಕರಾದ ಸರಳಾ, ಸುನೀತಾ, ಮುನಿತಾಯಮ್ಮ, ನಾಗರಾಜು, ಶ್ರೀನಿವಾಸ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.