ADVERTISEMENT

ಆನೇಕಲ್: ಗಂಗರ ಕಾಲದ ಜಿಗಣಿ ಕೆರೆ ಅಸ್ತಿತ್ವಕ್ಕೆ ಕುತ್ತು

ಸುತ್ತಮುತ್ತಲಿನ ಕಸ ವಿಲೇವಾರಿ l ಕೆರೆಯ ಒಡಲಿಗೆ ಸೇರುತ್ತಿರುವ ಕಲುಷಿತ ನೀರು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2023, 5:11 IST
Last Updated 10 ಏಪ್ರಿಲ್ 2023, 5:11 IST
ಆನೇಕಲ್‌ ತಾಲ್ಲೂಕಿನ ಜಿಗಣಿ ಕೆರೆಯ ನೋಟ
ಆನೇಕಲ್‌ ತಾಲ್ಲೂಕಿನ ಜಿಗಣಿ ಕೆರೆಯ ನೋಟ   

ಆನೇಕಲ್: ಕೆರೆ, ಕುಂಟೆ, ಕಲ್ಯಾಣಿಗಳ ರೀತಿಯ ನೀರಿನ ಮೂಲಗಳು ಅಂತರ್ಜಲವನ್ನು ಕಾಪಾಡುವ ಜೀವಸೆಲೆಗಳು. ಹಾಗಾಗಿ ಪ್ರತಿಯೊಂದು ಗ್ರಾಮದಲ್ಲಿ ಕೃಷಿ ಮತ್ತು ಗ್ರಾಮದ ನೀರಿನ ಬೇಡಿಕೆಗಳನ್ನು ಈಡೇರಿಸಲು ಕೆರೆಗಳನ್ನು ಕಡ್ಡಾಯವಾಗಿ ನಿರ್ಮಿಸಲಾಗಿದೆ.

ಆದರೆ, ಇತ್ತೀಚಿನ ದಿನಗಳಲ್ಲಿ ಕೈಗಾರಿಕೀರಣ ಹಾಗೂ ನಗರೀಕರಣದ ಪ್ರಭಾವದಿಂದ ಕೆರೆಗಳು ಇದ್ದು, ಇಲ್ಲದಂತಾಗಿವೆ. ಕೆರೆ ನೀರಿನಲ್ಲಿ ತ್ಯಾಜ್ಯ ನೀರು ತುಂಬಿಕೊಂಡು ಕೆರೆಗಳು ದುರ್ನಾತ ಬೀರುತ್ತಿವೆ. ಆನೇಕಲ್ ತಾಲ್ಲೂಕಿನ ಜಿಗಣಿ ಕೆರೆಯು ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ತಾಲ್ಲೂಕಿನ ದೊಡ್ಡ ಕೆರೆಗಳ ಪೈಕಿ ಜಿಗಣಿ ಕೆರೆಯು ಒಂದಾಗಿದೆ. 260 ಎಕರೆ ವಿಸ್ತಿರ್ಣದಲ್ಲಿರುವ ಈ ಕೆರೆಯು ಜಿಗಣಿ, ಕೊಪ್ಪ, ಹರಪನಹಳ್ಳಿ, ಬಂಡೆನಲ್ಲಸಂದ್ರ, ಹುಲಿಮಂಗಲ ಗ್ರಾಮಗಳಿಗೆ ಹೊಂದಿಕೊಂಡಿದೆ. ಜಿಗಣಿ ಕೆರೆಗೆ ಎರಡು ಸಾವಿರ ಎಕರೆಗೂ ಹೆಚ್ಚಿನ ಅಚ್ಚುಕಟ್ಟು ಪ್ರದೇಶವಿತ್ತು. ಭತ್ತ, ತರಕಾರಿಗಳನ್ನು ಬೆಳೆಯುವ ಕೇಂದ್ರವಾಗಿತ್ತು. ಆದರೆ ಈಗ ಅಚ್ಚುಕಟ್ಟು ಪ್ರದೇಶದಲ್ಲಿ ಮನೆಗಳು, ಕೈಗಾರಿಕೆಗಳು, ಬಹುಮಹಡಿ ಕಟ್ಟಡಗಳು ತಲೆ ಎತ್ತಿವೆ. ಸದಾಕಾಲ ತುಂಬಿರುವ ಈ ಕೆರೆ ನೀರು ಮಾತ್ರ ಉಪಯೋಗಕ್ಕೆ ಬಾರದಂತಾಗಿದೆ.

ADVERTISEMENT

ಗ್ರಾನೈಟ್‌ ನಗರಿ ಎಂದೇ ಖ್ಯಾತವಾಗಿರುವ ಜಿಗಣಿಯಲ್ಲಿ ಗ್ರಾನೈಟ್‌ ಉದ್ಯಮ ಎಲ್ಲೆಡೆ ವ್ಯಾಪಿಸಿದೆ. ಕೈಗಾರಿಕೆಗಳ ತ್ಯಾಜ್ಯ, ಗ್ರಾನೈಟ್‌ ಸ್ಲರಿ, ವಸತಿ ಪ್ರದೇಶಗಳ ಕೊಳಚೆ ನೀರು ಕೆರೆಗೆ ಹರಿಯುತ್ತಿದೆ. ಇದರಿಂದಾಗಿ ಜಿಗಣಿ ಕೆರೆ ನೀರು ಕಲುಷಿತಗೊಂಡು ಗಬ್ಬುನಾರುತ್ತಿದ್ದು, ಈ ಕೆರೆ ನೀರನ್ನು ಸಹ ಮುಟ್ಟಲು ಜನರು ಹಿಂಜರಿಯುತ್ತಿದ್ದಾರೆ.

ಕೆರೆಗಳು ಒಂದಕ್ಕೊಂದು ಸಂಪರ್ಕ ಹೊಂದಿವೆ. ಜಿಗಣಿ ಕೆರೆ ತುಂಬಿ ಕೋಡಿ ಹರಿದರೆ ಮಾಸ್ತೇನಹಳ್ಳಿ, ಹೆನ್ನಾಗರ ಕೆರೆಗೆ ನೀರು ಹರಿಯುತ್ತದೆ. ಹೆನ್ನಾಗರ ಕೆರೆಯಿಂದ ಚಂದಾಪುರ ಕೆರೆಗೆ ನೀರು ಹೋಗುತ್ತದೆ. ಜಿಗಣಿ ಕೆರೆ ಮಲಿನವಾಗುತ್ತಿರುವುದರಿಂದ ಈ ನೀರು ಹರಿಯುವ ಇತರ ಕೆರೆಗಳು ಮಲಿನವಾಗುತ್ತಿವೆ. ಇದರಿಂದಾಗಿ ಅಂರ್ಜಲವೂ ಕಲುಷಿತವಾಗುತ್ತಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಕೊಳವೆ ಬಾವಿಗಳಲ್ಲಿನ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ ಎಂದು ನೀರಿನ ಪರೀಕ್ಷೆಯಲ್ಲಿ ವರದಿಯಾಗಿದೆ.

‘ಜಿಗಣಿ ಕೆರೆ ಗಂಗರ ಕಾಲದಲ್ಲಿ ಸ್ಥಾಪಿತವಾಗಿದೆ. ಜಿಗಣಿ ಕೆರೆಯ ತೆಪ್ಪೋತ್ಸವ ಈ ಭಾಗದಲ್ಲಿಯೇ ಅತ್ಯಂತ ಪ್ರಸಿದ್ಧಿ ಹೊಂದಿತ್ತು. ಜಿಗಣಿ ಕೆರೆಗೆ ಬನ್ನೇರುಘಟ್ಟ ಕಾಡಿನ ಪ್ರದೇಶದಿಂದಲೂ ನೀರು ಹರಿದು ಬರುತ್ತಿದ್ದರಿಂದ ಕೆರೆಯ ನೀರು ಔಷಧಿಯ ಗುಣ ಹೊಂದಿತ್ತು. ಆದರೆ, ಪ್ರಸ್ತುತ ಕೆರೆಯ ನೀರು ಮುಟ್ಟಲು ಯೋಗ್ಯವಿಲ್ಲದ ಸ್ಥಿತಿ ತಲುಪಿದೆ. ಕೆರೆಯನ್ನು ಸಂಪೂರ್ಣ ಅಭಿವೃದ್ಧಿ ಪಡಿಸಿ ಜನರ ಉಪಯೋಗಕ್ಕೆ ಬರುವಂತೆ ಮಾಡಬೇಕು’ ಹೋರಾಟಗಾರ ಜಿಗಣಿ ಶಂಕರ್‌ ಒತ್ತಾಯಿಸಿದರು.

ಐತಿಹಾಸಿಕ ಹಿನ್ನೆಲೆವುಳ್ಳ ಜಿಗಣಿ ಕೆರೆ ತನ್ನ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಗಣಿ ಕೆರೆಯು ಸುಮಾರು 63 ವಿವಿಧ ಪ್ರಬೇಧಗಳ ಪಕ್ಷಿಗಳ ತಾಣವಾಗಿದೆ. ಕೆರೆಯ ಏರಿಯ ಮೇಲೆ ತಡೆಗೋಡೆ ಇಲ್ಲ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ದ್ವಿಚಕ್ರ ವಾಹನ ಸವಾರರು ಆತಂಕದಿಂದ ಪ್ರಯಾಣ ಮಾಡುವಂತಾಗಿದೆ. ಹಾಗಾಗಿ ಕೆರೆಯನ್ನು ಶುದ್ಧಗೊಳಿಸಿ ಅಭಿವೃದ್ಧಿ ಮಾಡಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಮೂಲಕ ಕೆರೆಯ ಗತವೈಭವವನ್ನು ಮರುಕಳಿಸುವಂತೆ ಮಾಡಬೇಕು ಎಂಬುದು ಸ್ಥಳೀಯ ಒತ್ತಾಸೆ.

ಇದ್ದೂ ಇಲ್ಲದಂತಾದ ಕೆರೆ

ಜಿಗಣಿಗೆ ಹೊಂದಿಕೊಂಡ ಜಿಗಣಿಯ ಬೃಹತ್‌ ಕೆರೆಯಲ್ಲಿ ವರ್ಷವಿಡೀ ನೀರು ತುಂಬಿರುತ್ತದೆ. ಆದರೆ, ತುಂಬಿರುವ ಕೆರೆಯ ನೀರು ಮಾತ್ರ ಉಪಯೋಗಕ್ಕೆ ಬರುವುದಿಲ್ಲ. ಕೆರೆಯ ನೀರಿನ ಬಣ್ಣವೇ ಬದಲಾಗಿ ಚರಂಡಿ ನೀರಿನಂತಾಗಿದೆ.

ಕೆರೆಯ ಸಮೀಪ ಬರುತ್ತಿದ್ದಂತೆ ಗಬ್ಬು ವಾಸನೆ ಮೂಗಿಗೆ ಬಡಿಯುತ್ತದೆ. ಸುತ್ತಮುತ್ತಲ ಪ್ರದೇಶದವರು ಕೆರೆಯಲ್ಲೇ ತ್ಯಾಜ್ಯ ಎಸೆಯುತ್ತಿದ್ದಾರೆ. ಜತೆಗೆ, ಕೆರೆಯ ರಾಜಕಾಲುವೆಗಳು ಒತ್ತುವರಿಯಾಗಿವೆ. ಈ ರಾಜಕಾಲುವೆಗಳನ್ನು ಚರಂಡಿ ನೀರು, ಮನೆಗಳ ತ್ಯಾಜ್ಯ ನೀರು, ಬಡಾವಣೆಗಳ ತ್ಯಾಜ್ಯ ನೀರಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದಾಗಿ ಸುತ್ತಮುತ್ತಲ ಪ್ರದೇಶದ ತ್ಯಾಜ್ಯ ನೀರು ಕೆರೆಯ ಒಡಲಿಗೆ ಸೇರುತ್ತಿದೆ. ಇದರಿಂದಾಗಿ ಪ್ರಾಚೀನ ಕೆರೆಯು ಇದ್ದೂ, ಇಲ್ಲದಂತಾಗಿದೆ.

ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಿ

ಜಿಗಣಿ ಪುರಸಭಾ ಸದಸ್ಯ ಪ್ರವೀಣ್‌ ಮಾತನಾಡಿ, ‘ಕೆರೆಗೆ ಹರಿಯುವ ಕಲುಷಿತ ನೀರನ್ನು ತಡೆದರೆ, ಜಿಗಣಿ ಕೆರೆಯನ್ನು ಉಳಿಸಿಕೊಳ್ಳಬಹುದು. ಇಲ್ಲವಾದಲ್ಲಿ ಕೆರೆಯ ಅಭಿವೃದ್ಧಿಗೆ ಮಾಡುವ ವೆಚ್ಚ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಜಿಗಣಿ ಕೆರೆಗೆ ಒಳಚರಂಡಿ ನೀರು ಹರಿಯುವುದನ್ನು ತಡೆಯಲು 2012ರಲ್ಲೇ ವೈಜ್ಞಾನಿಕವಾಗಿ ಎಸ್‌ಟಿಪಿ ಘಟಕ ಸ್ಥಾಪನೆಗೆ ಸರ್ವೆ ನಂ. 147ರಲ್ಲಿ ಸರ್ಕಾರ ಎರಡು ಎಕರೆ ಜಮೀನು ಮಂಜೂರು ಮಾಡಿದೆ. ಆದರೆ ಈವರೆಗೆ ಕಾರ್ಯ ಪ್ರಾರಂಭವಾಗಿಲ್ಲ. ಎಸ್‌ಟಿಪಿ ಘಟಕ ಸ್ಥಾಪಿಸಿ ಸುತ್ತಮುತ್ತಲ ಪ್ರದೇಶದ ತ್ಯಾಜ್ಯ ನೀರು ಹರಿಯದಂತೆ ಕ್ರಮ ಕೈಗೊಳ್ಳಬೇಕು. ಕೆರೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.