ಸೂಲಿಬೆಲೆ: ‘ಪುಣೆಯ ಭೀಮಾ ಕೋರೆಗಾಂವ್ ನದಿ ತೀರದಲ್ಲಿ ಪೇಶ್ವೆಗಳು ಹಾಗೂ ಬ್ರಿಟಿಷರ ಮಧ್ಯೆ ನಡೆದ ಯುದ್ಧ ಇತಿಹಾಸದಲ್ಲಿ ಸ್ಮರಣೀಯವಾದದು’ ಎಂದು ದಲಿತ ಸಮಿತಿ ಕರ್ನಾಟಕ ರಾಜ್ಯ ಸಂಚಾಲಕ ಅಣ್ಣಯ್ಯ ಹೇಳಿದರು.
ಖಾಜಿಹೊಸಹಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದಮಂಗಳವಾರ ನಡೆದ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘1882ರ ಕೋರೆಗಾಂವ್ ಯುದ್ಧದಲ್ಲಿ ಮರಾಠ ಪೇಶ್ವೆಗಳ ವಿರುದ್ಧ ಬ್ರಿಟಿಷ್ ಸೇನೆ ಹಸಿವು ಮತ್ತು ದಾಹದಿಂದ ಬಸವಳಿದು ಸೋಲಿನ ಅಂಚಿಗೆ ಬಂದು ನಿಂತಾಗ ಮಹಾರ್ ದಲಿತ ಯೋಧರ ಮನೋಬಲ, ಶಿಸ್ತುಬದ್ಧ ಆಕ್ರಮಣದ ಮೂಲಕ ಪೇಶ್ವೆ ಸೈನ್ಯವನ್ನು ದಿಕ್ಕಾಪಾಲಾಗಿಸಿದರು. ಬಂದೂಕಿನ ಗುಂಡುಗಳು ಮೇಲೆ ಬಂದಾಗ ಖಡ್ಗಗಳ ಮೂಲಕ ವೈರಿ ಪಡೆಯನ್ನು ಎದುರಿಸಿ, ತಮಗಿಂತ 40 ಪಟ್ಟು ಹೆಚ್ಚಿನ ಶಸ್ತ್ರಸಜ್ಜಿತ ಪೇಶ್ವೆ ಸೈನ್ಯವನ್ನು 12 ಗಂಟೆಗಳ ಕದನದಲ್ಲಿ ಧೂಳೀಪಟ ಮಾಡಿದ್ದರು. ಹಾಗಾಗಿ ಇದು ಐತಿಹಾಸಿಕ ಮಹತ್ವ ಪಡೆದಿದೆ’ ಎಂದರು.
ನೆಲದ ಕವಿ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ‘ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಶಕ್ತಿ, ಸಾಮರ್ಥ್ಯ ಇರುತ್ತದೆ. ಅದಕ್ಕೆ ತಕ್ಕಂತೆ ಅವಕಾಶ ನೀಡಬೇಕು. ಇದರಲ್ಲಿ ಜಾತಿ, ಧರ್ಮದ ಭೇದ ಭಾವ ಮಾಡಬಾರದು’ ಎಂದರು.
‘ದೇಶದಲ್ಲಿ ಶೂದ್ರರು ಮತ್ತು ದಲಿತರಿಗೆ ಮೋಸ ಆಗಿದೆ. ವೀರ ಮಹಾರ್ ದಲಿತ ಯೋಧರಂತೆ ಸಮಾಜದ ಸಂಘಟಕರು, ನಾಯಕರು ಶಿಸ್ತು ಮತ್ತು ಸಂಯಮದಿಂದ ನಡೆದುಕೊಂಡರೆ ಸಮಾಜದಲ್ಲಿ ದಲಿತರ ಉದ್ಧಾರ ಸಾಧ್ಯ’ ಎಂದರು.
ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಕೋರೆಗಾಂವ್ ಸ್ತೂಪವನ್ನು ಡೊಳ್ಳು ಕುಣಿತ, ವೀರಗಾಸೆ, ನಗಾರಿ, ಕೀಲುಕುದುರೆ ಹಾಗೂ ರಣವಾದ್ಯದೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮಹಿಳೆಯರು ತಂಬಿಟ್ಟು, ದೀಪದಿಂದ ಸ್ತೂಪ ಬೆಳಗಿದರು.
ಡಿಎಸ್ಎಸ್‌ನ ಕರ್ನಾಟಕ ರಾಜ್ಯ ಸಂಘಟನಾ ಸಂಚಾಲಕ ಬೆನ್ನಿಗಾನಹಳ್ಳಿ ರಾಮಚಂದ್ರ, ಬೆಂಗಳೂರು ವಿಭಾಗೀಯ ಮಹಿಳಾ ಘಟಕ ಸಂಚಾಲಕಿ ಕೋಲಾರ ಮಂಜುಳ, ಗ್ರಾಮ ಸಮಿತಿ ಅಧ್ಯಕ್ಷ ಅಪ್ಪಯ್ಯ, ತಾಲ್ಲೂಕು ಸಂಚಾಲಕ ನಾರಾಯಣಸ್ವಾಮಿ, ಸಂಘಟನಾ ಸಂಚಾಲಕ ಶಿವಾನಂದ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಖ್ಯಾತ ಗಾಯಕ ಬಿಚಹಳ್ಳಿ ಶ್ರೀನಿವಾಸ್, ಸಾಹಿತಿಗಳಾದ ವೆಂಕಟಾಪು ಸತ್ಯಂ, ಕಲಾವಿದ ಕನಕಾಚಲಂ, ಮುಖಂಡರಾದ ಶಿವು, ದೇವರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.