ADVERTISEMENT

ಮನೆಗೆ ನುಗ್ಗಿದ ನಾಗರಕೆರೆ ಕೋಡಿ ನೀರು

ದರ್ಗಾಪುರ, ಖಾಸ್‌ಭಾಗ್‌, ಭುವನೇಶ್ವರಿ ನಗರ, ತಿಪ್ಪಾಪುರದಲ್ಲಿ ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 7:08 IST
Last Updated 8 ಸೆಪ್ಟೆಂಬರ್ 2022, 7:08 IST
ದೊಡ್ಡಬಳ್ಳಾಪುರದ ನಾಗರಕೆರೆ ಕೋಡಿ ನೀರು ರಾಜಕಾಲುವೆ ಬಂದ್‌ ಆಗಿರುವುದರಿಂದ ತಿಪ್ಪಾಪುರ ರಸ್ತೆ ಮೇಲೆ ಹರಿಯುತ್ತಿದ್ದು, ಸಂಚಾರ ಬಂದ್‌ ಆಗಿದೆ(ಎಡಚಿತ್ರ). ನಾಗರಕೆರೆ ಕೋಡಿ ನೀರು ಮನೆಗಳಿಗೆ ನುಗ್ಗಿರುವ ಪ್ರದೇಶಗಳಿಗೆ ಬುಧವಾರ ಶಾಸಕ ಟಿ. ವೆಂಕಟರಮಣಯ್ಯ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್‌ ಮೋಹನಕುಮಾರಿ ಹಾಜರಿದ್ದರು
ದೊಡ್ಡಬಳ್ಳಾಪುರದ ನಾಗರಕೆರೆ ಕೋಡಿ ನೀರು ರಾಜಕಾಲುವೆ ಬಂದ್‌ ಆಗಿರುವುದರಿಂದ ತಿಪ್ಪಾಪುರ ರಸ್ತೆ ಮೇಲೆ ಹರಿಯುತ್ತಿದ್ದು, ಸಂಚಾರ ಬಂದ್‌ ಆಗಿದೆ(ಎಡಚಿತ್ರ). ನಾಗರಕೆರೆ ಕೋಡಿ ನೀರು ಮನೆಗಳಿಗೆ ನುಗ್ಗಿರುವ ಪ್ರದೇಶಗಳಿಗೆ ಬುಧವಾರ ಶಾಸಕ ಟಿ. ವೆಂಕಟರಮಣಯ್ಯ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್‌ ಮೋಹನಕುಮಾರಿ ಹಾಜರಿದ್ದರು   

ದೊಡ್ಡಬಳ್ಳಾಪುರ: ನಂದಿ ಬೆಟ್ಟದ ತಪ್ಪಲಿನಿಂದ ಪ್ರಾರಂಭವಾಗುವ ಅರ್ಕಾವತಿ ನದಿ ಸಾಲಿನ ಎಲ್ಲಾ ಕೆರೆಗಳು ಕೋಡಿ ಬಿದ್ದಿರುವುದರಿಂದ ನಗರದ ಹೃದಯಭಾಗದ ನಾಗರಕೆರೆ ಬೃಹತ್‌ ಪ್ರಮಾಣದಲ್ಲಿ ಕೋಡಿ ಹರಿಯುತ್ತಿದೆ. ನಾಗರಕೆರೆ ಕೋಡಿ ನೀರು ದರ್ಗಾಪುರ, ಖಾಸ್‌ಭಾಗ್‌, ಭುವನೇಶ್ವರಿ ನಗರ, ತಿಪ್ಪಾಪುರ ಗ್ರಾಮದ ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯವಸ್ತ
ವಾಗಿದೆ.

ಕೋಡಿ ನೀರಿನಿಂದ ತೊಂದರೆಗೆ ಒಳಗಾಗಿರುವ ಪ್ರದೇಶಗಳಿಗೆ ಬುಧವಾರ ಶಾಸಕ ಟಿ. ವೆಂಕಟರಮಣಯ್ಯ, ನಗರಸಭೆ ಅಧ್ಯಕ್ಷೆ ಎಸ್‌. ಸುಧಾರಾಣಿ ಲಕ್ಷ್ಮೀನಾರಾಯಣ್‌, ತಹಶೀಲ್ದಾರ್‌ ಮೋಹನಕುಮಾರಿ, ನಗರಸಭೆ ಪೌರಾಯುಕ್ತ ಶಿವಶಂಕರ್‌ ಮತ್ತು ಸದಸ್ಯರು ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.

ಕೋಡಿ ನೀರು ಹರಿದು ಹೋಗಲು ಇದ್ದ ರಾಜಕಾಲುವೆ ಬಹುತೇಕ ಬಂದ್‌ ಆಗಿದೆ. ರಾಜಕಾಲುವೆ ಹಾದು ಹೋಗಿರುವ ಸ್ಥಳದಲ್ಲಿ ಮನೆಗಳನ್ನು ಕಟ್ಟಲಾಗಿದೆ. ಇದರಿಂದ ಮಳೆ ನೀರು ಎಲ್ಲೆಂದರಲ್ಲಿ ಹರಿದು ಹೋಗುವಂತಾಗಿದೆ. ನೀರು ಹರಿದು ಹೋಗುವ ಪ್ರದೇಶದಲ್ಲಿ ಲೇಔಟ್‌ಗಳನ್ನು ನಿರ್ಮಿಸಿರುವುದು ಸಹ ನೀರು ಸರಾಗವಾಗಿ ಹರಿದು ಹೋಗಲು ಅಡ್ಡಿಯಾಗಿದೆ ಎಂದು ಸ್ಥಳೀಯ ನಿವಾಸಿಗಳು
ದೂರಿದರು.

ADVERTISEMENT

‘ಮಳೆ ನೀರಿನ ಹರಿವು ಕಡಿಮೆಯಾದ ನಂತರ ರಾಜಕಾಲುವೆ ಸರ್ವೆಯನ್ನು ಡ್ರೋನ್‌ ಕ್ಯಾಮೆರಾ ಮೂಲಕ ನಡೆಸಲಾಗುವುದು. ಇದಾದ ನಂತರ ಸರ್ವೆ ಇಲಾಖೆ ಸಿಬ್ಬಂದಿಯಿಂದ ಗ್ರಾಮ ನಕ್ಷೆ ಆಧಾರದ ಮೂಲಕ ಸರ್ವೆ ನಡೆಸಿ ರಾಜಕಾಲುವೆಯ ಒತ್ತುವರಿಯನ್ನು ತೆರವು ಮಾಡಲಾಗುವುದು’ ಎಂದು ತಹಶೀಲ್ದಾರ್‌ ಮೋಹನಕುಮಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.