
ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಎರಡು ಗಂಡು ಹುಲಿ ಮರಿಗಳನ್ನು ಪ್ರೆಸ್ಟೀಜ್ ಗ್ರೂಪ್ ಸಂಸ್ಥೆ ಶುಕ್ರವಾರ ದತ್ತು ಪಡೆದರು.
ದತ್ತು ಪಡೆದ ಹುಲಿ ಮರಿಗಳಿಗೆ ಸಿಂಬ ಮತ್ತು ಶೇರು ಎಂದು ನಾಮಕಾರಣ ಮಾಡಲಾಗಿದೆ. ಮುಂದಿನ ಐದು ವರ್ಷಗಳ ಅವಧಿಗೆ ಪ್ರೆಸ್ಟೀಜ್ ಗ್ರೂಪ್ಸ್ ಸಂಸ್ಥೆಯು ಎರಡು ಹುಲಿ ಮರಿಗಳನ್ನು ದತ್ತು ಪಡೆದಿದೆ. ಹುಲಿ ಮರಿಗಳ ದತ್ತು ಪಡೆದಿದ್ದರಿಂದ ಹುಲಿ ಮರಿಗಳ ಆರೈಕೆ ವನ್ಯಜೀವಿ ಸಂರಕ್ಷಣೆ ಪರಿಸರ ಸಮತೋಲನ ಮತ್ತು ಜೀವವೈವಿಧ್ಯ ರಕ್ಷಣೆಗಾಗಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಬನ್ನೇರುಘಟ್ಟ ಉದ್ಯಾನದೊಂದಿಗೆ ಪ್ರೆಸ್ಟೀಜ್ ಕಂಪನಿಯು ಕೈಜೋಡಿಸಿದೆ ಎಂದು ಉದ್ಯಾನದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಹುಲಿಗಳ ದತ್ತು ಸ್ವೀಕಾರದಿಂದಾಗಿ ಐದು ವರ್ಷಗಳ ಅವಧಿಗೆ ಮರಿಗಳ ಪೋಷಣೆ ಪಶು ವೈದ್ಯಕೀಯ ಆರೈಕೆ ಒಳಗೊಂಡಿರುತ್ತದೆ.
ಪ್ರೆಸ್ಟೀಜ್ ಗ್ರೂಪ್ ಹಿರಿಯ ಉಪಾಧ್ಯಕ್ಷ ನಿರ್ಭಯ್ ಮಾತನಾಡಿ, ವನ್ಯಜೀವಿಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಹಬಾಳ್ವೆಯ ಜೀವನ ನಡೆಸಲು ಮತ್ತು ನೈಸರ್ಗಿಕ ಪರಂಪರೆ ರಕ್ಷಿಸಲು ಬನ್ನೇರುಘಟ್ಟ ಉದ್ಯಾನದಲ್ಲಿ ಎರಡು ಹುಲಿ ಮರಿಗಳನ್ನು ದತ್ತು ಪಡೆಯಲಾಗಿದೆ. ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಸಾಮೂಹಿಕ ಬದ್ಧತೆ ಅವಶ್ಯಕತೆ ಆಗಿದೆ ಎಂದರು.
ದತ್ತು ಮೂಲಕ ಸ್ವೀಕರಿಸಲಾದ ಹಣವನ್ನು ಪ್ರಾಣಿಗಳ ಆಹಾರ ಪಶು ವೈದ್ಯಕೀಯ ಆರೈಕೆಗಾಗಿ ವಿನಿಯೋಗಿಸಲಾಗುವುದು. ಪರಿಸರ ಸಂರಕ್ಷಣೆಯಲ್ಲಿ ಸಮುದಾಯದ ಭಾಗವಹಿಸುವುದರಿಂದ ವನ್ಯಜೀವಿಗಳ ಸಂರಕ್ಷಣೆಯಾಗುತ್ತದೆ ಮತ್ತು ವನ್ಯಜೀವಿ ರಕ್ಷಣೆಗೆ ಕೊಡುಗೆ ನೀಡಲು ಮತ್ತಷ್ಟು ಕಂಪನಿಗಳು ಮತ್ತು ಸಾರ್ವಜನಿಕರು ಮುಂದಾಗಬೇಕು ಎಂದು ಬನ್ನೇರುಘಟ್ಟ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ.ಸೂರ್ಯಸೇನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.